Friday, September 26, 2025

ಕೃತಕ ಬುದ್ಧಿಮತ್ತೆ (AI) ಚಿತ್ರ ಮತ್ತುವಿಡಿಯೋಗಳನ್ನು ಗುರುತಿಸುವುದು

ಕೃತಕ ಬುದ್ಧಿಮತ್ತೆಯನ್ನು ಬಳಸಿ  ಚಿತ್ರಗಳನ್ನು ವಿಡಿಯೋಗಳನ್ನು ಸೃಷ್ಟಿಸುವುದು ಸುಲಭ.  ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸೃಷ್ಟಿ ಮಾಡುತ್ತಿರುವ  ಚಿತ್ರಗಳು ಮತ್ತು ವಿಡಿಯೋಗಳ ಉದ್ದೇಶ ಒಳ್ಳೆಯದೇ ಆಗಿದ್ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅದು ಯಾವುದೋ ವ್ಯಕ್ತಿಯ, ಸಂಘ ಸಂಸ್ಥೆಯ ತೇಜೋವಧೆಯ ದುರುದ್ದೇಶದಿಂದ ಬಳಕೆಯಾದರೆ ಅದು ಸಮಾಜ ಘಾತಕವೇ.  ವಿಡಿಯೋಗಳು ಅತ್ಯಾಕರ್ಷಕವಾಗಿದೆ ಎನ್ನುವ ಕಾರಣಕ್ಕಷ್ಟೇ ಅದು ಹೇಳುತ್ತಿರುವ ಕಥೆಯನ್ನು ನಂಬಬೇಕಾಗಿಲ್ಲ. ಆದ್ದರಿಂದ ನಾವು ವೀಕ್ಷಿಸುತ್ತಿರುವ ವಿಡಿಯೋ ಸಹಜ ದೃಶ್ಯವೇ ಅಥವಾ ಕೃತಕವಾಗಿ ರಚಿಸಿದ್ದೇ ಎನ್ನುವ ಜ್ಞಾನ ಇರಬೇಕಾಗುತ್ತದೆ.

ಕೃತಕ ಬುದ್ಧಿಮತ್ತೆ (AI)  ಚಿತ್ರ ಹಾಗೂ ವಿಡಿಯೋಗಳ ಬಗ್ಗೆ ನಿಮಗಿದು ತಿಳಿದಿರಲಿ

೧. ಚಿತ್ರಗಳು:

ಪರಿಪಕ್ವ, ಪರಿಪೂರ್ಣ: AI-ರಚಿತ ಚಿತ್ರಗಳು ವಾವ್‌ ಎನಿಸುವಷ್ಟು  ಸುಂದರವಾಗಿರುತ್ತವೆ.  ʼ೧೮ರ ಹರೆಯದ ಹುಡುಗಿʼ ಎಂದರೆ, ನಾವು ಸಿನಿಮಾದಲ್ಲಿ ನೋಡುತ್ತೇವಲ್ಲ ಅಂತಹಾ ಪರಿಪೂರ್ಣ ಸೌಂದರ್ಯ. "ನಂಬಲು ಕಷ್ಟ" ಎನ್ನುವಷ್ಟು  ಸುಂದರವಾಗಿರುತ್ತದೆ!.  ಚರ್ಮ ಎಂದರೆ ಅಷ್ಟು ನುಣುಪು, ಅಷ್ಟು ನಾಜೂಕು. ನೈಸರ್ಗಿಕವಾಗಿ  ಚರ್ಮದಲ್ಲಿ ಇರಬಹುದಾದ  ರಂಧ್ರಗಳು, ಅಸಮವಾದ ಮುಖದ ಲಕ್ಷಣಗಳು ಅಥವಾ ಅಸ್ತವ್ಯಸ್ತವಾದ ಕೂದಲು ಇರುವುದಿಲ್ಲ. ಬದಲಿಗೆ, ಎಲ್ಲವೂ  ಪರಿಪೂರ್ಣವಾಗಿ, ನಯವಾಗಿ ಕಾಣಿಸುತ್ತವೆ.

ಹಿನ್ನೆಲೆ: ಹಿನ್ನೆಲೆಗಳು ಮಸುಕಾಗಿ ಅಥವಾ ಕೃತಕ ಎನಿಸುವ ವಸ್ತುಗಳನ್ನು, ಮರ ಗಿಡಗಳನ್ನು ಹೊಂದಿರಬಹುದು. ವಿರೂಪಗೊಂಡ ಅಥವಾ ನಿಮ್ಮನ್ನು ಗೊಂದಲಗೊಳಿಸುವ ವಸ್ತುಗಳು ಇರಬಹುದು.

ಅಕ್ಷರಗಳು ಮತ್ತು ಪದಗಳು:  AI, ಸ್ಪಷ್ಟ ಪದಗಳನ್ನು ಮತ್ತು ಸಹಜ ಎನಿಸುವ ಅಕ್ಷರಗಳನ್ನು ರಚಿಸುವಲ್ಲಿ ಇನ್ನೂ ಪರಿಪೂರ್ಣತೆ ಸಾಧಿಸಿಲ್ಲ.  ಚಿತ್ರದ ಹಿನ್ನೆಲೆಯಲ್ಲಿ ಯಾವುದಾದರೂ ಫಲಕಗಳಿದ್ದಲ್ಲಿ  ಅಥವಾ ಪುಸ್ತಕಗಳಿದ್ದಲ್ಲಿಅದರ  ಮೇಲಿನ ಅಕ್ಷರಗಳು ಗೊಂದಲಮಯವಾಗಿರುತ್ತದೆ.

ನೆರಳು ಬೆಳಕಿನಾಟ: ವ್ಯಕ್ತಿಯ ಮುಖದ ಮೇಲೆ ಬೆಳಕು ಸರಿಯಾಗಿ ಬೀಳದಿದ್ದರೆ, ಅಥವಾ  ಸುತ್ತಲಿರುವ ಬೆಳಕು ಮತ್ತು ನೆರಳು ಹೊಂದಿಕೆಯಾಗದಿದ್ದರೆ, ಅದು ನಕಲಿ ಚಿತ್ರ ಆಗಿರಬಹುದು.

ಮೆಟಾಡೇಟಾ ವಿಶ್ಲೇಷಣೆ:  ಚಿತ್ರದ ಗುಣಲಕ್ಷಣಗಳನ್ನು ("Properties" ಅಥವಾ "Get Info") ಪರಿಶೀಲಿಸಿ. ಇದು ಫೈಲ್ ರಚಿಸಲು ಬಳಸಿದ ಸಾಫ್ಟ್ವೇರ್ ಮತ್ತು ಸಮಯವನ್ನು ತಿಳಿಸುತ್ತದೆ.

೨. ವೀಡಿಯೊಗಳು

ಧ್ವನಿ ಮತ್ತು ದೃಶ್ಯದ ಅಸಮಂಜಸತೆ: ಮಾತನಾಡುವ ವ್ಯಕ್ತಿಯ ತುಟಿಗಳ ಚಲನೆ ಧ್ವನಿಯೊಂದಿಗೆ ಹೊಂದಾಣಿಕೆ ಆಗುತ್ತಿದೆಯೇ ಎಂದು ಪರಿಶೀಲಿಸಿ. ಅಥವಾ ಧ್ವನಿ ಯಲ್ಲಿ ಯಾವುದೇ ಏರಿಳಿತವಿಲ್ಲದೆ ಯಾಂತ್ರಿಕವಾಗಿದೆಯೇ ಎಂದು ಗಮನಿಸಿ. ಹಾಗಿದ್ದರೆ ಅದು ಕೃತಕವಾಗಿರಬಹುದು.

ಅಸ್ವಾಭಾವಿಕ ಚಲನೆ: ವಿಡಿಯೋದಲ್ಲಿರುವ ವ್ಯಕ್ತಿಯ ಮುಖದ ಭಾವನೆಗಳು, ಕಣ್ಣುಗಳ ಮಿಟುಕಿಸುವಿಕೆ ಅಥವಾ ತುಟಿಗಳ ಚಲನೆ ಅಸ್ವಾಭಾವಿಕವಾಗಿದೆಯೇ ಎಂದು ಗಮನಿಸಿ. ವೀಡಿಯೊದಲ್ಲಿನ ಚಲನೆಗಳು ಯಾಂತ್ರಿಕವಾಗಿ (robotic) ಅಥವಾ ನಡುಗಿದಂತೆ ಇದ್ದರೆ ಅದು ಕೃತಕ ವಿಡಿಯೋ

ಮಸುಕಾದ (Blurry) ಭಾಗಗಳು: ನಕಲಿ ವಿಡಿಯೋಗಳಲ್ಲಿ ಹೆಚ್ಚಾಗಿ ವ್ಯಕ್ತಿಯ ಮುಖದ ಸುತ್ತಲಿನ ಭಾಗಗಳು ಮಸುಕಾಗಿ ಅಥವಾ ಸರಿಯಾದ ರೂಪದಲ್ಲಿರುವುದಿಲ್ಲ ಎನ್ನುವುದನ್ನು  ಗಮನಿಸಿ.

ಈ ಮೇಲಿನ ವಿಧಾನಗಳಿಂದ ನಿಮ್ಮ ಸಂಶಯ ಪರಿಹಾರವಾಗದಿದ್ದರೆ  ವಿಶ್ವಾಸಾರ್ಹ  ಸತ್ಯಶೋಧನಾ  ಸಂಸ್ಥೆಗಳ (Fact-Checking Organizations) ಸಹಾಯ  ಪಡೆಯಬಹುದು.

ನಿಮ್ಮ ಕೈಯಲ್ಲಿರುವ ವಿಡಿಯೋ ನಕಲಿಯೇ ಎಂದು ಅನುಮಾನವಿದ್ದರೆ, ಪ್ರಮುಖ ಸತ್ಯಶೋಧನಾ ಸಂಸ್ಥೆಗಳ ವೆಬ್ಸೈಟ್ಗಳನ್ನು ಪರಿಶೀಲಿಸಿ. ಸಂಸ್ಥೆಗಳು ನಕಲಿ ವಿಡಿಯೋಗಳು ಮತ್ತು ಸುದ್ದಿಗಳನ್ನು ಈಗಾಗಲೇ ಪರಿಶೀಲಿಸಿ ಅದರ ಕುರಿತು ವರದಿ ಪ್ರಕಟಿಸಿರುತ್ತವೆ.

ಭಾರತದಲ್ಲಿನ ಕೆಲವು ಪ್ರಮುಖ ಸಂಸ್ಥೆಗಳು: ಬೂಮ್ಲೈವ್ (BOOM Live), ಆಲ್ಟ್ನ್ಯೂಸ್ (Alt News), ಮತ್ತು ಇಂಡಿಯಾ ಟುಡೆ ಫ್ಯಾಕ್ಟ್ಚೆಕ್‌ (India Today Fact Check). ಇವುಗಳು ತಮ್ಮ ವೆಬ್ಸೈಟ್ನಲ್ಲಿ ಪರಿಶೀಲಿಸಿದ ಮಾಹಿತಿಗಳನ್ನು ಪ್ರಕಟಿಸುತ್ತವೆ.

ಚಿತ್ರ ಮತ್ತು ವೀಡಿಯೊ ಪತ್ತೆಹಚ್ಚುವ ತಂತ್ರಜ್ಞಾನ ಆಧಾರಿತ ಟೂಲ್ ಗಳು: Hive AI-Generated Content Detection: Sensity AI,  Deepware, Sightengine ಮೊದಲಾದ ಟೂಲ್ ಗಳು  ಚಿತ್ರಗಳು, ವೀಡಿಯೊಗಳು ಮತ್ತು ಧ್ವನಿಯನ್ನು ಸ್ಕ್ಯಾನ್ ಮಾಡಿ, ಅವು ನಕಲಿಯೇ ಅಥವಾ ನೈಜವೇ ಎಂದು  ತಿಳಿಸುತ್ತವೆ. ಇದು ಪೇಯ್ಡ್‌ ಸೇವೆ ಆದ್ದರಿಂದ ಕಂಪನಿಗಳು ಖರೀದಿಸಬಹುದು.

AI ತಂತ್ರಜ್ಞಾನ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವುದರಿಂದ,  ಅವುಗಳನ್ನು ಪತ್ತೆಹಚ್ಚುವ ಸಾಧನಗಳೂ ನಿರಂತರವಾಗಿ ವಿಕಸನಗೊಳ್ಳುತ್ತಿವೆ.  ಆದ್ದರಿಂದ, ಕೇವಲ ಒಂದು ಮೂಲವನ್ನಷ್ಟೇ  ಸತ್ಯಾಂಶ ಪತ್ತೆಗೆ ಅವಲಂಬಿಸುವುದು ಸೂಕ್ತವಲ್ಲ. ಯಾವುದೇ ಸುದ್ದಿಯ ಭಾಗವಾಗಿರುವ ಚಿತ್ರ ಅಥವಾ ವೀಡಿಯೊವನ್ನು ಹಲವಾರು ವಿಶ್ವಾಸಾರ್ಹ ಸುದ್ದಿ ಮೂಲಗಳಲ್ಲಿ ಪರಿಶೀಲಿಸುವುದು ಉತ್ತಮ.

(ಮುಂದಿನ ಭಾಗದಲ್ಲಿ: ಅಂತರ್ಜಾಲದಲ್ಲಿ ಲಭ್ಯವಿರುವ Fact checking ತರಬೇತಿಗಳು)

                                                                                                                          ಗೀತಾ ಎ.ಜೆ


Friday, September 12, 2025

ನಕಲಿ ವಿಡಿಯೋಗಳ ಸತ್ಯಾಸತ್ಯತೆ (fact checking) ತಿಳಿಯುವುದು ಹೇಗೆ?

 ಮಾಧ್ಯಮ ಸಾಕ್ಷರತೆ ಸರಣಿಯ  -  6 ನೇ ಸಂಚಿಕೆಗೆ ಸ್ವಾಗತ. ಈ ಸಂಚಿಕೆಯಲ್ಲಿ ನಕಲಿ ವಿಡಿಯೋಗಳ  ಸತ್ಯಾಸತ್ಯತೆ ಪರಿಶೀಲಿಸುವುದು ಹೇಗೆ? ಎನ್ನುವುದನ್ನು ತಿಳಿದುಕೊಳ್ಳೋಣ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೊಮ್ಮೆ ಮುಖ್ಯವಾಹಿನಿ ಅಂತೆನಿಸಿಕೊಂಡ ಮಾಧ್ಯಮಗಳಲ್ಲೂ ನಕಲಿ ವಿಡಿಯೋಗಳು ಮತ್ತು ತಪ್ಪು ಮಾಹಿತಿಗಳ ಹರಿದಾಡುತ್ತಿರುತ್ತವೆ.  ಇಂತಹ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಸವಾಲಿನ ಕೆಲಸವಾದರೂ, ಕೆಲವು  ತಂತ್ರಗಳು ಹಾಗೂ ಟೂಲ್ಸ್‌  ಗಳನ್ನು ಬಳಸಿಕೊಂಡು  ಅವುಗಳ ನಿಜಾಂಶವನ್ನು ಗುರುತಿಸಬಹುದು.

ಹಿಮ್ಮುಖ ಚಿತ್ರ ಹುಡುಕಾಟ (Reverse Image Search)

ನಕಲಿ ವಿಡಿಯೋಗಳನ್ನು ಪರಿಶೀಲಿಸುವಲ್ಲಿ ಮೊಟ್ಟಮೊದಲು  ಮಾಡಬಹುದಾದ ಪ್ರಮುಖ ಹಂತವೆಂದರೆ ಹಿಮ್ಮುಖ ಚಿತ್ರ ಹುಡುಕಾಟ (Reverse Image Search). ನಮಗೆಲ್ಲಾ ಗೊತ್ತಿರುವ ಹಾಗೆ ವಿಡಿಯೋ ಎಂದರೆ ಅದು ಹಲವಾರು ಚಿತ್ರಗಳ ಸಂಗ್ರಹ. ಆ ಚಿತ್ರಗಳು ವೇಗವಾಗಿ ಚಲಿಸುವಾಗ ಅದು ನಮಗೆ ಚಲಿಸುವ ದೃಶ್ಯದ ಕಲ್ಪನೆಯನ್ನು ಕೊಡುತ್ತದೆ.  ಆದ್ದರಿಂದ, ವಿಡಿಯೋದ ಪ್ರಮುಖ ಭಾಗದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು  ಅಂತರ್ಜಾಲದಲ್ಲಿ  ಹುಡುಕುವ ಮೂಲಕ, ಆ ಚಿತ್ರ ದ ಹಿನ್ನೆಲೆ ಏನು? ಅನ್ನುವುದನ್ನು ನೋಡಬಹುದು. ಪ್ರಕ್ರಿಯೆ ಹೀಗಿರಲಿ.

ಮೊದಲಿಗೆ, ವಿಡಿಯೋದ ಒಂದು ಪ್ರಮುಖ ಭಾಗದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ. ನಂತರ, ನಿಮ್ಮ ಮೊಬೈಲ್‌ನಲ್ಲಿರುವ ಗೂಗಲ್ ಲೆನ್ಸ್ (Google Lens) ಅಥವಾ ಗೂಗಲ್ ಇಮೇಜಸ್ (Google Images) ಬಳಸಿ ಆ ಸ್ಕ್ರೀನ್‌ಶಾಟ್ ಅನ್ನು ಅಪ್‌ಲೋಡ್ ಮಾಡಿ. ಇದು ಆ ಚಿತ್ರವನ್ನು ಬಳಸಿ  ಅಂತರ್ಜಾಲದಲ್ಲಿ ಲಭ್ಯವಿರುವ ಎಲ್ಲಾ ಸಾಮ್ಯ ಚಿತ್ರಗಳನ್ನು ಹುಡುಕುತ್ತದೆ. ಒಂದು ವೇಳೆ ಆ ಚಿತ್ರವು ಹಳೆಯ ಸುದ್ದಿಯಲ್ಲಿ, ಬೇರೆ ಘಟನೆಯಲ್ಲಿ ಅಥವಾ ಬೇರೆ ಸ್ಥಳದಲ್ಲಿ ಪ್ರಕಟವಾಗಿದ್ದರೆ, ಅದು ತಕ್ಷಣವೇ ನಿಮಗೆ ತಿಳಿಯುತ್ತದೆ.

ಟಿನ್‌ಐ (TinEye) ನಂತಹ ವೆಬ್‌ಸೈಟ್‌ಗಳನ್ನು ಕೂಡ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಬಳಸಿ ಹಿಮ್ಮುಖ ಹುಡುಕಾಟ ಮಾಡಬಹುದು. (ವಿವರಕ್ಕೆ ಮಾಧ್ಯಮ ಸಾಕ್ಷರತೆ ಭಾಗ-5 ನ್ನು ನೋಡಿ  https://sumageetha.blogspot.com/2025/09/fact-checking.html)

       ವಿಡಿಯೋ ಪರಿಶೀಲನೆಗೆ ಟೂಲ್ ಗಳು

ವೃತ್ತಿಪರರು ಮತ್ತು ಸತ್ಯಶೋಧಕರು ವಿಡಿಯೋಗಳನ್ನು ವಿಶ್ಲೇಷಿಸಲು ಕೆಲವು ವಿಶೇಷ ಟೂಲ್‌ಗಳನ್ನು ಬಳಸುತ್ತಾರೆ. ಇವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ನೀಡಲಾಗಿದೆ.

      ‌ ಇನ್ವಿಡ್ (InVID)

ಇದು ಬ್ರೌಸರ್ ಪ್ಲಗಿನ್ ಆಗಿದ್ದು, ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾ ಫೈರ್‌ಫಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಮೊಬೈಲ್ ಫೋನ್‌ಗಳಲ್ಲಿ ನೇರವಾಗಿ ಬಳಸಲು ಸಾಧ್ಯವಿಲ್ಲ. ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅಗತ್ಯ

ಬಳಸುವ ವಿಧಾನ:

  1. ನಿಮ್ಮ ಬ್ರೌಸರ್‌ನ ವೆಬ್ ಸ್ಟೋರ್‌ಗೆ ಹೋಗಿ "InVID & WeVerify" ಎಂದು ಹುಡುಕಿ ಅದರ ಎಕ್ಸ್‌ ಟೆನ್ಶನ್‌ ಅನ್ನು ಇನ್‌ಸ್ಟಾಲ್ ಮಾಡಿ.
  2. ನೀವು ಪರಿಶೀಲಿಸಬೇಕಾದ ಯೂಟ್ಯೂಬ್, ಫೇಸ್‌ಬುಕ್, ಅಥವಾ ಟ್ವಿಟ್ಟರ್ ವಿಡಿಯೋದ URL ಅನ್ನು ನಕಲಿಸಿ.
  3. InVID ಪ್ಲಗಿನ್ ತೆರೆದು "Keyframes" ಟ್ಯಾಬ್‌ನಲ್ಲಿ ವಿಡಿಯೋ URL ಅನ್ನು ಪೇಸ್ಟ್ ಮಾಡಿ. ಇದು ವಿಡಿಯೋವನ್ನು ಸಣ್ಣ ಚಿತ್ರಗಳಾಗಿ (ಕೀಫ್ರೇಮ್‌ಗಳು) ವಿಭಜಿಸುತ್ತದೆ.
  4. ನಂತರ ನೀವು ಈ ಕೀಫ್ರೇಮ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ  TinEye ನಲ್ಲಿ ಹಿಮ್ಮುಖ ಚಿತ್ರ ಹುಡುಕಾಟ ಮಾಡಬಹುದು. ಇದು ಆ ಚಿತ್ರಗಳು ಹಿಂದೆ ಎಲ್ಲಿ ಪ್ರಕಟವಾಗಿದ್ದವು ಎಂದು ತಿಳಿಸುತ್ತದೆ.

InVID ನ ಪ್ರಮುಖ ವೈಶಿಷ್ಟ್ಯಗಳು: ವಿಡಿಯೋವನ್ನು ಪ್ರಮುಖ ಚಿತ್ರಗಳಾಗಿ ವಿಂಗಡಿಸಿ ವಿಶ್ಲೇಷಿಸಲು ಸುಲಭಗೊಳಿಸುತ್ತದೆ. ಕೆಲವೊಮ್ಮೆ ವಿಡಿಯೋ ಮತ್ತು ಫೋಟೋಗಳ ಮೆಟಾಡೇಟಾ ಅಂದರೆ  ಸಮಯ, ಸ್ಥಳ, ಗಾತ್ರ ಇತ್ಯಾದಿ ವಿವರಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಚಿತ್ರಗಳಲ್ಲಿ ಮಾಡಿರುವ  ಎಡಿಟ್‌ ಅಂದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

  Amnesty International's YouTube Data Viewer

ಇದು ಯೂಟ್ಯೂಬ್ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇರುವ ಒಂದು ಸರಳ ಟೂಲ್

ಹೇಗೆ ಕೆಲಸ ಮಾಡುತ್ತದೆ?: ಪರಿಶೀಲಿಸಬೇಕಾದ ಯೂಟ್ಯೂಬ್ ವಿಡಿಯೋದ ಲಿಂಕ್ ಅನ್ನು  ಇಲ್ಲಿ ಪೇಸ್ಟ್ ಮಾಡಿದರೆ, ಅದು ವಿಡಿಯೋದ ಪ್ರಮುಖ ಕೀಫ್ರೇಮ್‌ಗಳನ್ನು ಹೊರತೆಗೆಯುತ್ತದೆ. ಆ ಚಿತ್ರಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಗೂಗಲ್ ಅಥವಾ ಇತರ ಸರ್ಚ್ ಇಂಜಿನ್‌ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಲು ಸಾಧ್ಯವಾಗುತ್ತದೆ. ಇದು ಯೂಟ್ಯೂಬ್ ವಿಡಿಯೋಗಳನ್ನು ಪರಿಶೀಲಿಸಲು  ಇರುವ ಅತ್ಯಂತ ಸುಲಭ ವಿಧಾನ.

     ವಿಡಿಯೋದ ಸಂದರ್ಭ (Context) ಪರಿಶೀಲನೆ

     ವಿಡಿಯೋ ನಕಲಿಯೇ ಅಥವಾ ನಿಜವೇ ಎಂದು ಖಚಿತಪಡಿಸಿಕೊಳ್ಳಲು  ನಮ್ಮ ಕಾಮನ್‌ ಸೆನ್ಸ್‌ ಕೂಡಾ ಸಾಕಾಗುತ್ತದೆ. ವಿಡಿಯೋದ (Context) ಸಂದರ್ಭವನ್ನು ವಿಶ್ಲೇಷಿಸುವುದರ ಮೂಲಕವೂ ಸತ್ಯಾಸತ್ಯತೆಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಯಾರು?: ವಿಡಿಯೋವನ್ನು ಯಾರು ಹಂಚಿಕೊಂಡಿದ್ದಾರೆ? ಅವರು ವಿಶ್ವಾಸಾರ್ಹ ವ್ಯಕ್ತಿಯೇ ಅಥವಾ ಸುದ್ದಿಸಂಸ್ಥೆಯೇ? ಅಜ್ಞಾತ ಮೂಲದಿಂದ ಬಂದ ವಿಡಿಯೋಗಳು ಅನುಮಾನಾಸ್ಪದವಾಗಿರುತ್ತವೆ.

ಎಲ್ಲಿ?: ವಿಡಿಯೋ ಯಾವ ಸ್ಥಳಕ್ಕೆ ಸೇರಿದೆ? ವಿಡಿಯೋದಲ್ಲಿರುವ ಕಟ್ಟಡಗಳು, ವಾಹನಗಳು ಅಥವಾ ರಸ್ತೆ ಚಿಹ್ನೆಗಳನ್ನು ಗಮನಿಸಿ. ಈ ಗುರುತುಗಳನ್ನು ಬಳಸಿ ಆ ವಿಡಿಯೋ ನಿಜವಾಗಿಯೂ ಹೇಳಲಾದ ಸ್ಥಳದ್ದೇ ಅಥವಾ ಅದೇ ಘಟನೆಗೆ ಸಂಬಂಧಿಸಿದ್ದೇ ಎಂದು ಖಚಿತಪಡಿಸಿಕೊಳ್ಳಬಹುದು.

ಯಾವಾಗ?: ವಿಡಿಯೋ ಯಾವ ದಿನಾಂಕ ಮತ್ತು ಸಮಯದಲ್ಲಿ ಚಿತ್ರೀಕರಿಸಲ್ಪಟ್ಟಿದೆ? ಹವಾಮಾನ, ನೆರಳು ಮತ್ತು ಸೂರ್ಯನ ಸ್ಥಾನವನ್ನು ಪರಿಶೀಲಿಸುವುದರಿಂದ ವಿಡಿಯೋದ ಸಮಯದ ಬಗ್ಗೆ ಸುಳಿವು ದೊರೆಯುತ್ತದೆ. ಇವುಗಳು ಸಂದರ್ಭಕ್ಕೆ ಹೊಂದಿಕೆಯಾಗದಿದ್ದರೆ, ವಿಡಿಯೋ ನಕಲಿ ಆಗಿರುವ ಸಾಧ್ಯತೆ ಇದೆ.

ಈ ಮೇಲೆ ಹೇಳಿದ  ವಿಧಾನಗಳು ಜನಸಾಮಾನ್ಯರಿಗೂ ಸತ್ಯವನ್ನು ತಿಳಿಯುವ ಮತ್ತು ಇತರರಿಗೆ ತಿಳಿಸುವ ವಿಧಾನವನ್ನು ತಿಳಿಸುತ್ತದೆ.  ಇಂತಹಾ ಟೂಲ್ಸ್ ಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ನಾವೆಲ್ಲರೂ ವೈಯಕ್ತಿಕವಾಗಿಯೂ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಸಹಾಯ ಮಾಡಬಹುದು.

(ಮುಂದಿನ ಭಾಗದಲ್ಲಿ: ಎಐ ವಿಡಿಯೋ  ಪರಿಶೀಲನೆ)

ಗೀತಾ ಎ.ಜೆ


Thursday, September 4, 2025

ಮೊಬೈಲ್‌ ಫೋನ್‌ ನಲ್ಲಿ ಪೋಟೋಗಳ ಸತ್ಯಾಸತ್ಯತೆ ಪರಿಶೀಲಿಸುವುದು (Fact Checking) ಹೇಗೆ?

 ಮಾಧ್ಯಮ ಸಾಕ್ಷರತೆ ಸರಣಿಯ  -5 ನೇ ಸಂಚಿಕೆಗೆ ಸ್ವಾಗತ. ಈ ಸಂಚಿಕೆಯಲ್ಲಿ ಮೊಬೈಲ್‌ ಫೋನ್‌ ನಲ್ಲಿ  ಪೋಟೋಗಳ ಸತ್ಯಾಸತ್ಯತೆ ಪರಿಶೀಲಿಸುವುದು ಹೇಗೆ? ಎನ್ನುವುದನ್ನು ತಿಳಿದುಕೊಳ್ಳೋಣ.

ಸುದ್ದಿ ಅಥವಾ ಮಾಹಿತಿಯ ಸತ್ಯಾಸತ್ಯತೆ ತಿಳಿಯಲು ನಮಗೆ ವಿಶೇಷವಾದ ಜ್ಞಾನ ಅಥವಾ ಕೌಶಲ್ಯಗಳು ಬೇಕಾಗಿಲ್ಲ. ಒಂದು ಕಾಮನ್‌ ಸೆನ್ಸ್‌ ಇದ್ದರೆ ಸಾಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಹಾಗೆ, ತಂತ್ರಜ್ಞಾನದ ಎಡವಟ್ಟುಗಳನ್ನು ತಂತ್ರಜ್ಞಾನದ ಮೂಲಕವೇ ಪರಿಹರಿಸಿಕೊಂಡರೆ ಆಯಿತು. ನಿಮ್ಮಲ್ಲಿರುವ ಆಂಡ್ರಾಯ್ಡ್‌ ಮೊಬೈಲ್‌ ಪೋನ್‌ ಮೂಲಕವೇ ಅತಿ ಸರಳ ವಿಧಾನಗಳಿಂದ ಸತ್ಯಶೋಧನೆಗೆ ಇಳಿಯಬಹುದು.

ಚಿತ್ರವನ್ನು ಪರಿಶೀಲಿಸುವುದು 

ಹೆಚ್ಚಿನ ಸಂದರ್ಭಗಳಲ್ಲಿ ನಕಲಿ ಪೋಟೋಗಳು, ತಿರುಚಿದ ಪೋಟೋಗಳು ಸುಳ್ಳುಸುದ್ದಿಯ ಜೊತೆಗೆ ಹರಿದಾಡುತ್ತಿರುತ್ತವೆ. ನಮಗೆ ಆಸಕ್ತಿ ಇದ್ದಲ್ಲಿ ಇಂತಹಾ ಪೋಟೋಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ನೀವು ಉಪಯೋಗಿಸಬಹುದಾದ ಕೆಲವೊಂದು ಟೂಲ್ಸ್ ಗಳ ಪರಿಚಯ ಇಲ್ಲಿದೆ

Google Reverse Image Search

  ಗೂಗಲ್‌ ಅಭಿವೃದ್ಧಿಪಡಿಸಿದ ರಿವರ್ಸ್‌ ಇಮೇಜ್‌ ಸರ್ಚ್‌ಬಹಳ ಉಪಯುಕ್ತ.ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಕ್ರೋಮ್ (Google Chrome) ಬ್ರೌಸರ್ ತೆರೆದು  images.google.com ಎಂದು ಟೈಪ್ ಮಾಡಿ. ಬ್ರೌಸರ್‌ನ ಮೇಲಿನ ಮೂರು ಚುಕ್ಕೆಗಳ ಮೇಲೆ () ಕ್ಲಿಕ್ ಮಾಡಿ ಮತ್ತು "Desktop site" ಅಥವಾ "Request Desktop Site" ಆಯ್ಕೆಯನ್ನು ಸಕ್ರಿಯಗೊಳಿಸಿ. ಅಲ್ಲಿ ನಿಮಗೆ ಕ್ಯಾಮೆರಾ ಐಕಾನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಚಿತ್ರವನ್ನು ಅಪ್‌ಲೋಡ್ ಮಾಡಿ ವಿವರವನ್ನು ಪಡೆದುಕೊಳ್ಳಿ. ಆ ಚಿತ್ರವನ್ನು ಮೊದಲು ಎಲ್ಲಿ ಪ್ರಕಟಿಸಲಾಗಿದೆ? ಆ ಚಿತ್ರದ ಜೊತೆಗೆ ಹರಡಿರುವ ಸುದ್ದಿ ಸತ್ಯವೋ ಸುಳ್ಳೋ ಎಂದು ಈ ಮೂಲಕ ಖಚಿತಪಡಿಸಿಕೊಳ್ಳಬಹುದು.

Google Lens (ಗೂಗಲ್ ಲೆನ್ಸ್)

 ಅಂತರ್ಜಾಲದಲ್ಲಿ ಸಂಶಯಾತ್ಪದ ಚಿತ್ರಗಳು ಕಂಡುಬಂದರೆ ಅದನ್ನು ಲಾಂಗ್‌ ಪ್ರೆಸ್‌ ಮಾಡಿ ಅದರಲ್ಲಿ Search with Google Lens ಎಂಬ  ಆಯ್ಕೆಯನ್ನು ಒತ್ತಿ ಅಥವಾ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್‌ಗಳಲ್ಲಿ ಗೂಗಲ್ ಲೆನ್ಸ್ ಎಂಬ ಆಯ್ಕೆ ಲಭ್ಯವಿದೆ  ನಿಮ್ಮ ಗ್ಯಾಲರಿಯಲ್ಲಿ ಯಾವುದೇ ಚಿತ್ರವನ್ನು ತೆರೆದು ಅಪ್ಲೋಡ್‌ ಮಾಡಿ. ಗೂಗಲ್ ಲೆನ್ಸ್ ಆ ಚಿತ್ರದ ಬಗ್ಗೆ ಸಂಬಂಧಿತ ಮಾಹಿತಿಯನ್ನು ಮತ್ತು ಅದೇ ರೀತಿಯ ಚಿತ್ರಗಳನ್ನು ಹುಡುಕಿ ಕೊಡುತ್ತದೆ. ನಿಮಗೆ ಬೇಕಾದ ವಿವರಗಳು ಸಿಗುತ್ತವೆ.

TinEye(ಟಿನ್‌ಐ)

 ನಿಮ್ಮ ಮೊಬೈಲ್‌ನಲ್ಲಿ ವೆಬ್ ಬ್ರೌಸರ್ ತೆರೆಯಿರಿ. ಅಡ್ರೆಸ್ ಬಾರ್‌ನಲ್ಲಿ tineye.com ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ. ಇದು ನಿಮ್ಮನ್ನು TinEye ನ ಅಧಿಕೃತ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಕ್ಯಾಮೆರಾ ಐಕಾನ್ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮ ಮೊಬೈಲ್ ಫೋನ್‌ನ ಫೈಲ್ ಮ್ಯಾನೇಜರ್ ಅಥವಾ ಗ್ಯಾಲರಿಯನ್ನು ತೆರೆಯುತ್ತದೆ. ನೀವು ಪರಿಶೀಲಿಸಬೇಕಾದ ಚಿತ್ರವನ್ನು ಆಯ್ಕೆ ಮಾಡಿ. ನಿಮಗೆ ಚಿತ್ರದ URL ಗೊತ್ತಿದ್ದರೆ, ನೀವು ಅದನ್ನು ಸರ್ಚ್ ಬಾರ್‌ನಲ್ಲಿ ನಮೂದಿಸಬಹುದು ಮತ್ತು ಸರ್ಚ್ ಬಟನ್ ಕ್ಲಿಕ್ ಮಾಡಬಹುದು.

ಗೂಗಲ್  ರಿವರ್ಸ್ ಇಮೇಜ್ ಸರ್ಚ್‌ಗೆ ಹೋಲಿಸಿದರೆ TinEye ಸ್ವಲ್ಪ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಚಿತ್ರವನ್ನು ಹುಡುಕುವಾಗ ಆ ಚಿತ್ರದ ಮೂಲ, ಅದರ  ಗಾತ್ರದ ವಿವರ, ಮತ್ತು ಅದನ್ನು ಸಂಪಾದಿಸಿದ ಆವೃತ್ತಿಗಳನ್ನು ತೋರಿಸುತ್ತದೆ. ಇದು ಪೋಟೋಗಳು ಎಷ್ಟು ಬಾರಿ ಬಳಸಲ್ಪಟ್ಟಿವೆ ಮತ್ತು ಅವುಗಳ ಇತಿಹಾಸವನ್ನು ಪತ್ತೆಹಚ್ಚಲು ಬಹಳ ಸಹಾಯಕವಾಗಿದೆ.

FotoForensics (ಫೋಟೊಫಾರೆನ್ಸಿಕ್ಸ್)

ಇದನ್ನು ಡಿಜಿಟಲ್ ಫೋಟೋಗಳ ತಾಂತ್ರಿಕ ವಿಶ್ಲೇಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ELA (Error Level Analysis) ಎಂಬ ತಂತ್ರವನ್ನು ಬಳಸಿ ಚಿತ್ರದಲ್ಲಿ ಮಾಡಿರುವ ಬದಲಾವಣೆಗಳನ್ನು ಗುರುತಿಸುತ್ತದೆ. ಒಂದು ಚಿತ್ರವನ್ನು ಸಂಪಾದಿಸಿದಾಗ, ಆ ಚಿತ್ರದ ವಿವಿಧ ಭಾಗಗಳಲ್ಲಿ ಇರುವ ತಪ್ಪುಗಳು ಅಥವಾ ಅಸಹಜತೆಗಳನ್ನು  ಗುರುತಿಸುತ್ತದೆ. ಚಿತ್ರದ ಯಾವ ಭಾಗವನ್ನು ಸಂಪಾದಿಸಲಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ.

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಬ್ರೌಸರ್‌ನಲ್ಲಿ fotoforensics.com ಎಂದು ಟೈಪ್ ಮಾಡಿ ವೆಬ್‌ಸೈಟ್‌ಗೆ ಭೇಟಿ ನೀಡಿ. ನೀವು ಪರಿಶೀಲಿಸಬೇಕಾದ ಚಿತ್ರ ಅಥವಾ ಚಿತ್ರದ URL ಲಿಂಕ್‌ ಅನ್ನು  ಅಪ್ಲೋಡ್‌ ಮಾಡಿ ವಿವರವನ್ನು ಪಡೆದುಕೊಳ್ಳಿ.

Fake Image Detector (ಫೇಕ್ ಇಮೇಜ್ ಡಿಟೆಕ್ಟರ್)

ಇದು ಆನ್‌ಲೈನ್‌ನಲ್ಲಿ ಲಭ್ಯವಿರುವ ಮತ್ತೊಂದು ಟೂಲ್. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಬ್ರೌಸರ್‌ನಲ್ಲಿ imageedited.com ಎಂಬ ವೆಬ್‌ಸೈಟ್‌ಗೆ ಭೇಟಿ ನೀಡಿ ಪೋಟೋ ಅಪ್ಲೋಡ್‌ ಮಾಡಿ..ಇದು ಪೋಟೋದ ಗುಣಮಟ್ಟ, ಅದರ ಮೆಟಾಡೇಟಾ, ಮತ್ತು Error Level Analysis (ELA) ವಿಶ್ಲೇಷಣೆಯನ್ನು ಆಧರಿಸಿ ಅದು ನಕಲಿಯೋ ಅಥವಾ ಅಸಲಿಯೋ ಎಂದು ತಿಳಿಸುತ್ತದೆ.

 (ಮುಂದಿನ ಸಂಚಿಕೆಯಲ್ಲಿ ವಿಡಿಯೋಗಳ ಸತ್ಯಾಸತ್ಯತೆ  ಪರಿಶೀಲನೆ ಹೇಗೆ?)

ಡಾ.ಗೀತಾ ಎ.ಜೆ

(ಮಾಹಿತಿ: ಗೂಗಲ್‌ ನ್ಯೂಸ್‌ ಇನಿಷಿಯೇಟಿವ್‌, ಟಿನ್‌ ಐ, ಫೋಟೊಫಾರೆನ್ಸಿಕ್ಸ್,ಫೇಕ್ ಇಮೇಜ್ ಡಿಟೆಕ್ಟರ್)


Tuesday, August 19, 2025

ಇಂದಿನ ಸುದ್ದಿ ನಾಳಿನ ರದ್ದಿಯಾಗಲಿ

 ‘ಇಂದಿನ ಸುದ್ದಿ ನಾಳಿನ ರದ್ದಿ’ , ‘News is a dairy product’  - ಈ ಮಾತು ಬಹಳ ಹಳೆಯದು. ಇಂದಿನ ಸುದ್ದಿ ನಾಳೆ ಮೌಲ್ಯ ಕಳೆದುಕೊಳ್ಳುತ್ತದೆ ಅನ್ನುವ ಅರ್ಥದಲ್ಲಿ ಕಟ್ಟಿಕೊಟ್ಟದ್ದು. ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯ ಸುತ್ತಾ ನಡೆಯುವ ಅಧ್ವಾನಗಳನ್ನು ನೋಡುತ್ತಾ ಇದ್ದರೆ, ʼಅಯ್ಯೋ ಯಾಕೆ ಈ ಸುದ್ದಿ  ರದ್ದಿಯಾಗ್ತಾ ಇಲ್ಲʼ, ʼಹುಳಿಯಾಗಿ ಸಿಂಕ್‌ಗೆ ಸೇರ್ತಾ ಇಲ್ಲʼ ಅನ್ನುತ್ತಾ ಮರುಗಬೇಕೆನಿಸುತ್ತಿದೆ. 

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹುದೊಡ್ಡ ಸದ್ದುಮಾಡುತ್ತಾ ಹರಿದಾಡುತ್ತಿರುವ ಹುರುಳಿಲ್ಲದ ಕಟ್ಟುಕಥೆಯನ್ನು ಗಮನಿಸುತ್ತಾ ಇದ್ದರೆ ಇದೊಂದು ವೇದಿಕೆ  ಯಾಕಾದ್ರೂ ಇಂತಹಾ ವ್ಯಕ್ತಿಗಳ ಕೈಗೆ ಸಿಕ್ಕಿಬಿಟ್ಟಿತೋ ಅಂತ ಅನಿಸುತ್ತಾ ಇದೆ. ಅದು ಸಮಾಜದ ಮೇಲೆ ಮಾಡುತ್ತಿರುವ ಪರಿಣಾಮ, ದೇಶದ ಆಸ್ತಿಯಾಗಬೇಕಿದ್ದ ಅತ್ಯಂತ ಮೌಲ್ಯಯುತ ಸಮಯವನ್ನು ಮೊಬೈಲ್‌ ಸ್ಕ್ರೀನ್‌ ಮುಂದೆ ಕಳೆಯುವ  ಯುವ ಪಡೆಯನ್ನು ನೋಡುತ್ತಾ ಇದ್ದರೆ ಇದಕ್ಕಿಂತಾ ದೊಡ್ಡ ಭಯೋತ್ಪಾನೆ ಇನ್ನೇನಿರಲು  ಸಾಧ್ಯ? ಎಂದೆನಿಸುತ್ತಾ ಇದೆ. ಮರುದಿನ ರದ್ದಿಯಾಗಿ ಕಸದ ಬುಟ್ಟಿಯಲ್ಲಿ ಸೇರದೆ, ಹುಳಿಯಾಗಿ ಗಟಾರಕ್ಕೆ ಇಳಿಯದೇ ವಾಸನೆ ಬೀರುತ್ತಾ ಸುತ್ತಲೇ ಸುಳಿದಾಡುತ್ತಿರುವಾಗ ಈ ಮಾಲಿನ್ಯದ ವಾತಾವರಣ ಸ್ವಚ್ಚವಾಗುವುದಾದರೂ ಹೇಗೆ ಎನ್ನುವ ಚಿಂತೆ ಸುದ್ದಿಯ ಮೌಲ್ಯ ತಿಳಿದವರಿಗಷ್ಟೇ ಗೊತ್ತು.

ಸುದ್ದಿ ಯಾಕೆ ರದ್ದಿಯಾಗಬೇಕು? ಡೈರಿ ಉತ್ಪನ್ನವಾಗಬೇಕು?

ಯಾವುದೇ ಡೈರಿ ಉತ್ಪನ್ನವಾರೂ ಅದನ್ನು ತಯಾರಿಸಲು ಒಂದು ಪ್ರಕ್ರಿಯೆ ಇರುತ್ತದೆ. ಹಾಲನ್ನು ಸಂಗ್ರಹಿಸಿ, ಹೆಪ್ಪುಗಟ್ಟಿಸಿ, ನಂತರ ಮೊಸರು, ಮಜ್ಜಿಗೆ ಅಥವಾ ಬೆಣ್ಣೆಯಾಗಲು ಒಂದು ನಿರ್ದಿಷ್ಠ ಸಮಯ ಬೇಕಾಗುತ್ತದೆ. ಈ ಪ್ರಕ್ರಿಯೆಗೆ ಒಳಪಡಿಸದೇಹಾಲನ್ನು ಹಾಗೇ ಇಟ್ಟರೆ ಆ ಹಾಲು  ಸುಮಾರು ೮ ರಿಂದ ೧೦ ಗಂಟೆಯೊಳಗೆ ಹುಳಿ ಹಿಡಿದು ಕೆಟ್ಟು ಹೋಗುತ್ತದೆ. ಇಂದು ನಾವು ಸಾಕ್ಷಿಯಾಗ್ತಾ ಇರುವುದು ಇಂತಹಾ ಘಟನೆಗಳಿಗಳಿಗೆ ಅನ್ನುವುದು ವಿಪರ್ಯಾಸ.  ಸಾಮಾಜಿಕ ಜಾಲತಾಣಗಳಲ್ಲಿ ಇದೇ ರೀತಿಯ ಸುದ್ದಿಯೆಂಬ ಕೆಟ್ಟ ಹಾಲನ್ನು ಮತ್ತೆ ಮತ್ತೆ ಉಪಯೋಗಿಸಿ, ದುರ್ನಾತ ಬೀರುವಂತಾಗುತ್ತಿದೆ. ಅನೇಕ ಯೂಟ್ಯೂಬ್‌ ಚಾನೆಲ್ ಗಳು, ಅಥವಾ ಸಾಮಾಜಿಕ ಜಾಲತಾಣಗಳ ಪುಟಗಳು ಈ ಕೆಲಸ ಮಾಡುತ್ತಿವೆ. ಅತ್ಯಂತ ಮಧುರವಾಗಿ ಸುದ್ದಿಯೆಂಬ ಹಾಲನ್ನು ಹೆಪ್ಪುಗಟ್ಟಿಸಿ ಗಟ್ಟಿ ಮೊಸರನ್ನು, ಸವಿಯಾದ ಬೆಣ್ಣೆಯನ್ನು ಕೊಡುವ ಕೆಲಸಮಾಡುವವರಿಲ್ಲ ಅಂತಲ್ಲ. ಅವರ ಸಂಖ್ಯೆ ಬಹಳ ಕಡಿಮೆ ಇದೆ.  

ದುಡ್ಡೊಂದೇ ಮಂತ್ರ ಅನ್ನುವ ವ್ಯಕ್ತಿಗಳ ಕೈಗೆ ಸಿಕ್ಕ ಈ ನವ ಮಾಧ್ಯಮದ ವೇದಿಕೆಗಳು  ತೀಕ್ಣ ಟೀಕೆಗಳಿಗೆ ಒಳಗಾಗುತ್ತಿವೆ. ಇಂತಹಾ ವ್ಯಕ್ತಿಗಳು ತಮ್ಮ ಕೈಯಲ್ಲಿ ಈ ಮಾಧ್ಯಮಗಳನ್ನು ಟೂಲ್‌ ಆಗಿ ಇಟ್ಟುಕೊಂಡು ನಡೆದ ಘಟನೆಗಳನ್ನು, ಅಥವಾ ಹುರುಳಿಲ್ಲದ ಆರೋಪಗಳನ್ನು, ಅದರ ಸತ್ಯಾಸತ್ಯತೆಯನ್ನು ಅರಿಯದೇ, ಆಳವಾದ ವಿಶ್ಲೇಷಣೆ ಇಲ್ಲದೆ ತಕ್ಷಣವೇ ಪ್ರಸಾರ ಮಾಡುವುದು ಮಾತ್ರ ಅಲ್ಲ , ಅದನ್ನೆ ತಿರುಚಿ, ಊಹಾಪೋಹ ಎನ್ನುವ ಉಪ್ಪು ಕಾರ ಸೇರಿಸಿ ಪ್ರಸಾರ ಮಾಡುತ್ತವೆ. ಆ ಸುದ್ದಿಯೆಂಬ ಹಾಲಿಗೆ  ಸತ್ಯದ, ತಾರ್ಕಿತ ಆಂಶಗಳನ್ನು ಸೇರಿಸಿ ಹೆಪ್ಪುಗಟ್ಟಿಸಿ, ಸಂಸ್ಕರಿಸದೇ ಇಟ್ಟಾಗ ಅದು ಹುಳಿ ಹಿಡಿದು ಕಟ್ಟುಹೋಗುತ್ತದೆ.  ಉದಾಹರಣೆಗೆ, ಒಂದು ರಾಜಕೀಯ ಹೇಳಿಕೆಯನ್ನು  ಅದರ ಪೂರ್ಣ ಸಂದರ್ಭದಿಂದ ತೆಗೆದು, ಕೇವಲ ಅಕ್ರೋಶ ಭರಿತ  ಶಿರ್ಷಿಕೆಯನ್ನು ನೀಡುವುದು ಅಥವಾ ಯಾವುದೋ ಸಮಾಜಮುಖಿ ಕೆಲಸ ಮಾಡುವ ಸಂಸ್ಥೆಯ ಬಗ್ಗೆ, ಮುಖಂಡರ ಬಗೆಗೆ ಮಾಡುವ ಆರೋಪವನ್ನೇ  ನಿಜ ಎಂದು ಬಿತ್ತರಿಸುತ್ತಾ ದಿನ, ತಿಂಗಳು, ವರ್ಷಗಟ್ಟಲೇ ಹುಳಿಯಾಗಿ ದುರ್ನಾತ ಬರುವಂತೆ  ಬಿಂಬಿಸುವುದು ಇತ್ಯಾದಿ.

ಹಾಳಾದ ಹಾಲು ಸಂಸ್ಕಾರ ಇಲ್ಲದೆ,  ಚೀಸ್‌ ಆಗದೇ, ಮಜ್ಜಿಗೆಯೂ ಆಗದೆ, ಹೇಗೆ ಇಡೀ ಮನೆಯ ವಾತಾವರಣವನ್ನು ಅಸಹ್ಯಕರವಾಗಿಸಬಹುದೋ ಹಾಗೆಯೇ  ಹಾಳಾಗಿ ಹುಳಿ ಹಿಡಿದ  ಸುದ್ದಿ  ನಮ್ಮ ಮಾನಸಿಕ ಸ್ವಾಸ್ಥ್ಯದ ಮೇಲೆ ಗಂಭಿರ ಪರಿಣಾಮ ಬೀರಬಹುದು. ಕೆಟ್ಟು ಹೋದ ಹಾಲು ನಮ್ಮ ಮಾನಸಿಕ ಸ್ವಾಸ್ಥ್ಯದ ಮೇಲೆ ಮಾತ್ರ ಆಲ್ಲ ದೈಹಿಕ ಆರೋಗ್ಯದ ಮೇಲೆ, ನಮ್ಮ ಮೌಲ್ಯಯುತವಾದ ಸಮಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಕಲ್ಪನೆಯೇ ನಮ್ಮನ್ನು ಆತಂಕಿತಗೊಳಿಸುತ್ತದೆ.

ಮಾನಸಿಕ ಅಜೀರ್ಣತೆ

ಸತ್ಯಾಸತ್ಯತೆಯಿಲ್ಲ, ಅರ್ಧಂಬರ್ಧ ಸುದ್ದಿಯನ್ನು ನಿರಂತರವಾಗಿ ಸೇವಿಸುವುದರಿಂದ ಮಾನಸಿಕ ಅಜೀರ್ಣತೆಯನ್ನು ಉಂಟಾಗಿ ಮನಸ್ಸು ಗೊಂದಲಗೊಳಗಾಗುತ್ತದೆ. ಸತ್ಯ ಯಾವುದು?, ಸುಳ್ಳು ಯಾವುದು ಎಂಬ ವಿಶ್ಲೇಷಣಾ ಶಕ್ತಿಯನ್ನು ಕಳೆದುಕೊಂಡು, ಕೇವಲ ಭಾವನಾತ್ಮಕ  ಪ್ರಕ್ರಿಯೆಗೆ ಒಳಗಾಗುತ್ತೇವೆ. ಒಂದು ಕ್ಷಣದ ಆಕ್ರೋಶ, ಮತ್ತೊಮ್ಮ ಕೋಪ, ಆತಂಕ ಇದೆಲ್ಲವೂ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅದು ನಮ್ಮ ದೈಹಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಸಮಾಜದ ಮೇಲೆ ಬೀರುವ ಪರಿಣಾಮವಂತೂ ಅತಿ ಬೀಕರ.

ಸಂಸ್ಕರಿಸದ ಸುದ್ದಿ ಸಮಾಜದಲ್ಲಿ ದ್ವೇಷ, ಸೈದ್ದಾಂತಿಕ ಯುದ್ದ, ಕೋಮು ಗಲಭೆಯನ್ನು ಸೃಷ್ಟಿ ಮಾಡಿ ಸೌಹಾರರ್ಧತೆಯನ್ನು ಹಾಳು ಮಾಡುತ್ತದೆ. ಸತ್ಯಾ ಸತ್ಯತೆ ಇಲ್ಲದೆ, ವ್ಯಕ್ತಿ, ಸಂಘಟನೆ, ಸಂಸ್ಥೆ, ಸಮುದಾಯದ ವಿರುದ್ಧ ಸುಳ್ಳು ಸುದ್ದಿ ಹರಡಿದಾಗ ಅದು ಜನರ ಭಾವನಾತ್ಮಕ ನಂಬಿಕೆಯನ್ನು ಘಾಸಿ ಮಾಡುತ್ತದೆ. ಸಮುದಾಯಗಳ ನಡುವೆ ನಂಬಿಕೆ ಕಳೆದುಕೊಳ್ಳಲು ಕಾರಣವಾಗುತ್ತದೆ. ಈ ಹುಳಿಯಾದ ಹಾಲು ಹದವಾಗಿ ಬೆರೆತ ಇಡೀ ಸಮಾಜದ ನಂಬಿಕೆಯೆಂಬ ಮೊಸರನ್ನು ಹಾಳು ಮಾಡುತ್ತದೆ. ಹಾಗಾಗಿ ಸುದ್ದಿ ರದ್ದಿಯಾಗಬೇಕಲ್ಲವೇ?. ಈ ರದ್ದಿಯನ್ನೇ ಹೆಕ್ಕಿ ಮತ್ತೆ ಮತ್ತೆ ಜನರಿಗೆ ನೀಡುತ್ತಾ ಇದ್ದರೆ ಅದಕ್ಕೆ ಬೆಲೆ ಇದೆಯೇ?.

ಹಾಗಾಗಿ  ಸಮಾಜದ ಒಳಿತಿಗಾಗಿ ಸತ್ಯಾಂಶವಿಲ್ಲದ, ಸರಿಯಾಗಿ ಸಂಸ್ಕರಿಸದ ಸುದ್ದಿ ರದ್ದಿಯಾಗಲೇಬೇಕು. ಆ ಹಾಲು ಗಟಾರಕ್ಕೆ ಸೇರಲೇ ಬೇಕು. ಉತ್ತಮ ಮಜ್ಜಿಗೆ, ಬೆಣ್ಣೆ ಅಥವಾ ಚೀಸ್‌ ತಯಾರಿಸಲು ಸಮಯ ಬೇಕು,  ಸಾವಾಧಾನ ಬೇಕು. ಅದೇ ರೀತಿ ಉತ್ತಮ ಸುದ್ದಿ ಸಿದ್ದಪಡಿಸಲು, ಅದರ ಹಿಂದೆ ಆಳವಾದ ಸಂಶೋಧನೆ, ಸತ್ಯಾಂಶಗಳ ಪರಿಶೀಲನೆ ಬೇಕೇ ಬೇಕು. ಇಷ್ಟಕ್ಕೂ  ಸಮಯ ಇಲ್ಲ ಅಂದರೆ ಒಬ್ಬ ಜನಸಮಾನ್ಯನಿಗೆ ಇರಬೇಕಾದ ಕನಿಷ್ಠ ತಾರ್ಕಿಯ ಯೋಚನೆಯ ಹಿನ್ನೆಲೆಯಾದರೂ ಇರಬೇಕು. ವಿವಿಧ ಆಯಾಮಗಳಲ್ಲಿ ಮಾಡಿದ ವಿಶ್ಲೇಷಣೆ ಮಾತ್ರ ಉತ್ತಮ ಬೆಣ್ಣೆಯಂತೆ, ಮಜ್ಜಿಗೆಯಂತೆ ನಮ್ಮ ಸುದ್ದಿ ಬೋಜನವನ್ನು ಸಮೃಧ್ದ ಗೊಳಿಸಬಹುದು. ನಮ್ಮ ಬೌದ್ದಿಕ ಚಿಂತನೆಗಳಿಗೆ ಪೌಷ್ಠಿಕಾಂಶ ಕೊಡಬಹುದು.  ಸುದ್ದಿಗಳು ಅಂದಂದೇ ಹೊಸದಾಗಿ, ಅಥವಾ ಹಳೆಸುದ್ದಿಯಾದರೂ ಹೊಸ ವಿಶ್ಲೇಷಣೆಯೊಂದಿಗೆ, ಹೊಸ ಮಾಹಿತಿಯೊಂದಿಗೆ ಬಂದರೆ ಮಾತ್ರ ನಮ್ಮ ಮನಸ್ಸಿಗೆ ಆರೋಗ್ಯ ಕೊಡಬಹುದು. ವಿಶ್ಲೇಷಣಾತ್ಮಕ, ಸಂಶೋಧನಾತ್ಮಕ  ಮಾಹಿತಿ ಮಾತ್ರ ನಮ್ಮ ಸುದ್ದಿ ಭೋಜನವನ್ನು ಸುಭಿಕ್ಷವಾಗಿಸಬಹುದು. ಹಾಗಾಗಿ ಇಂದಿನ ಸುದ್ದಿ ರದ್ದಿಯಾಗಲಿ. ವಾಸನೆಗಟ್ಟಿದ ಹಾಲು, ಹುಳಿಯಾದ ಮೊಸರನ್ನೇ ದಿನಾ ಉಣಿಸುವ ಕೆಲಸ ಮಾಡಬಾರದು.

ನಾವು ಓದುಗರಾಗಿ, ನೋಡುಗರಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದು ಇಷ್ಟೆ ನಮಗೆ ಬೇಕಾಗಿರುವುದು ಕ್ಷಣಾರ್ಧದಲ್ಲಿ ಹುಳಿ ಹಿಂಡಿದ ಹಾಲಲ್ಲ,  ಅಥವಾ ನಿನ್ನೆಯ ಹುಳಿ ಹಿಡಿದ, ಹಳಸಿದ ಹಾಲು ಕೂಡಾ ಅಲ್ಲ. ಹೊಸದಾದ, ತರ್ಕಬದ್ದವಾದ, ಸಂಶೋಧನೆಯ ಘಮವಿರುವ ತಾಜಾ ಹಾಲಿನಂತ ಸುದ್ದಿ. ನಿನ್ನೆಯದು ನಿನ್ನೆಗೇ ಇರಲಿ, ಅದು ರದ್ದಿಗೇ ಸೇರಲಿ, ಹೊಸ ಆಯಾಮರುವ ತಾಜಾ ಹಾಲಿನಂತ ಸುದ್ದಿ ನಮ್ಮ ಮಾನಸಿಕ ಆರೋಗ್ಯಕ್ಕೆ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದು.

 ಗೀತಾ ಎ.ಜೆ


Friday, December 2, 2022

ಸಮಾಜ, ಸಿನಿಮಾ ಮತ್ತು ಕಥನ

 ಸಿನೆಮಾ ಅಂದರೆ ಹಾಗೆನೇ ಅದೊಂದು ಮಾಯಾಲೋಕ. ಅದೊಂದು ಕನಸು. ಆದರೆ ಮಾಯಾಲೋಕದ ಕನಸು ಕಥೆಗಾರನ ಕಲ್ಪನೆಯ ಕಿನ್ನರ ಲೋಕದಿಂದಲೋ ಅಥವಾ ಚಂದಿರನ ಬೆಳಕ ಬೆರಗಿನಿಂದಲೇ ಅರಳಬೇಕೆಂದೆನಿಲ್ಲ. ಕನಸಿನ ಪ್ರೇರಣೆ, ಪ್ರಪಂಚದ ಯಾವುದೋ ಹಳ್ಳಿಗಾಡಿನ ಮನೆಯ ಅಂಗಳದಲ್ಲೇ ಅರಳಬಹುದು, ಕೆಲಸ ಅರಸಿಬಂದ ನಿರಾಶ್ರಿತ ಕುಟುಂಬವೊಂದರ ಡೇರೆಯ ಒಳಗಿನಿಂದಲೂ ಹೊರಹೊಮ್ಮಬಹುದು. ಅಥವಾ ವೈಭವೋಪೇತ ಅಪಾರ್ಟ್ಮೆಂಟ್ ಒಳಗಿರುವ ಜೀವಗಳ ಏಕತಾನತೆಯ ನಿಟ್ಟುಸಿರಿನ ನೀರವತೆಯಲ್ಲಿ ಸಾಕಾರವಾಗಬಹುದು. ಸಿನಿಮಾಕ್ಕೆ ಸಮಾಜ ಪ್ರೇರಣೆ, ಸಮಾಜಕ್ಕೆ ಸಿನಿಮಾ ಪ್ರೇರಣೆ.

*ಸಿನಿಮಾ ಮತ್ತು ಸಮಾಜ- ಅಂತರ್ಸಂಬಂಧ*

ಸಿನಿಮಾ ಸಮಾಜದ ಪ್ರತಿಬಿಂಬವಾ? ಅಥವಾ ಸಮಾಜ ಸಿನಿಮಾದ ಪ್ರತಿಬಿಂಬವಾ?. ನಿಜವಾಗಿಯೂ ಕಥೆಯ ಎಳೆ ಎಲ್ಲಿಂದ ಆರಂಭವಾಗುತ್ತದೆ? ಎನ್ನುವ ಜಿಜ್ಞಾಸೆ ಬಹುಶ: ಸಿನಿಮಾ ಜನಪ್ರಿಯ ಸಂಸ್ಕೃತಿಯ ಒಂದು ಭಾಗವಾಗಿ ಗುರುತಿಸಿಕೊಂಡ ಕಾಲದಿಂದಲೂ ಕಾಡಿದ ಮತ್ತು ಚರ್ಚೆಗೆ ಗ್ರಾಸವಾದ ವಿಷಯ. ಆದರೆ ಸಮಾಜ ಮತ್ತು ಸಿನಿಮಾ ಕಥನದ ಅಂತರ್ಸಂಬಂಧೀಯ ಪರಿಕಲ್ಪನೆ ಅರ್ಥವಾಗಬೇಕಾದರೆ ಹಾಗೂ ಆಯಾಕಾಲದ ಜನರಿಗೆ ಮನಸ್ಸಿಗೆ ಪ್ರಿಯವಾಗುವ ಸಿನಿಮಾವೊಂದು ಸೃಷ್ಟಿಯಾಗಬೇಕಾದರೆ ಭಾರತೀಯ ಸಿನಿಮಾ ಹುಟ್ಟಿದಲ್ಲಿಂದ ಇಲ್ಲಿವರೆಗಿನ ಪಯಣದ ಘಟ್ಟಗಳನ್ನು ಗಮನಿಸಿಬೇಕು ಹಾಗೂ ಇತಿಹಾಸದ ಮಜಲುಗಳಲ್ಲಿ ನಡೆದ ತಲ್ಲಣಗಳನ್ನು  ಅರ್ಥೈಸಿಕೊಳ್ಳಬೇಕು. ಬಹುಶ: ಸಿನಿಮಾ ಕಥನದ ಸೃಷ್ಟಿಕರ್ತನೊಬ್ಬನಿಗೆ ಇದು ಅರ್ಥವಾದರೆ ಮನಮುಟ್ಟುವ ಚಿತ್ರಕಥೆಯನ್ನು ಅವನು ಸುಲಭವಾಗಿ ತೆರೆಗೆ ಇಳಿಸುವ ಕಾಯಕ ಮಾಡಬಹುದು. ಸಿನಿಮಾ ಎಂದರೆ ಕೇವಲ ಕಲೆಯಲ್ಲ, ಅಥವಾ ವಾಣಿಜ್ಯ ಅಸ್ತçವೂ ಅಲ್ಲ, ಅದು ವ್ಯಕ್ತಿಯ ಭಾವನೆಗಳು ಹಾಗೂ ಸಮಕಾಲಿನ ಚಲನಶೀಲ ಸಮಾಜದ ಪ್ರತಿಬಿಂಬ ಎನ್ನುವುದು ಮೊದಲಿಗೆ ಮನದಟ್ಟಾದರೆ, ಕಲಾದೇವಿ ಜೊತೆಗೆ ಲಕ್ಷ್ಮೀಮದೇವಿಯ ಕೃಪಾಕಟಾಕ್ಷವೂ ಸಿಗಬಹುದು !.

ಸಿನಿಮಾ ಸಮೂಹ ಮಾಧ್ಯಮವೆಂಬ ಬೃಹತ್ ಸಾಗರದ ಒಂದು ಅಲೆ. ಯಾವುದೇ ಮಾಧ್ಯಮವಾಗಲಿ ಒಂದು ಸಮೂಹವನ್ನು ತಲುಪವು ಶಕ್ತಿಯನ್ನೂ ಯುಕ್ತಿಯನ್ನೂ ಗ್ರಹಿಸಿಕೊಳ್ಳದಿದ್ದರೆ ಅದು ಸಮೂಹ ಮಾಧ್ಯಮ ಎನಿಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾ ಮಾಧ್ಯಮವೂ ಅಷ್ಟೇ ಜನಸಮೂಹದ ಕಥೆಯನ್ನು, ದಿನನಿತ್ಯದ ಆಗುಹೋಗುಗಳನ್ನು ಒಂದಷ್ಟು ನೈಜತೆ, ಸ್ವಲ್ಪ ಕಲ್ಪನೆ ಹಾಗೂ ಪ್ರೇಕ್ಷಕರು ನೋಡಲು ಸಹ್ಯವಾಗಿಸುವ ಸೃಜನಶೀಲತೆಯ ಬೆರಕೆಯೊಂದಿಗೆ ಕಥನವನ್ನು ಕಟ್ಟಿಕೊಡಬೇಕಾಗುತ್ತದೆ. ಕಲ್ಪನಾಲೋಕವನ್ನು ಕಟ್ಟಿಕೊಡುವ ಭರದಲ್ಲಿ ಸಿನಿಮಾವೊಂದು ಜನಜೀವನದ ಕಥನವನ್ನು ನೇಪಥ್ಯಕ್ಕೆ ತಳ್ಳಿ ಸಮಾಜಮುಖಿಯಾಗುವ ಸಾಧ್ಯತೆಗೆ ಬೆನ್ನು ತಿರುಗಿಸುವ ಹಾಗಿಲ್ಲ. ಒಂದು ವೇಳೆ ಇಂಥಹಾ ಪ್ರಯತ್ನಗಳು ನಡೆದರೆ ಅದಕ್ಕೆ ಸಾರ್ವಕಾಲಿಕ ಮನ್ನಣೆ ಸಿಗುವುದಿಲ್ಲ.

ಸಿನಿಮಾ ಮತ್ತು ಸಮಾಜ - ಐತಿಹಾಸಿಕ ಹೆಜ್ಜೆಗಳು

ಭಾರತೀಯ ಸಿನಿಮಾರಂಗದ ಇತಿಹಾಸವನ್ನು ಸೂಕ್ಮಮವಾಗಿ ಅಭ್ಯಸಿಸಿದರೆ ಅದು ಚಲನಶೀಲ ಸಮಾಜದ ಕೈಗನ್ನಡಿ ಎಂಬುದನ್ನು ಮನದಟ್ಟು ಮಾಡುತ್ತದೆ. ೧೯೧೩ರಲ್ಲಿ ಭಾರತದ ಚಿತ್ರರಂಗದ ಇತಿಹಾಸದ ಮೊದಲ ಹೆಜ್ಜೆ ಆರಂಭವಾಯಿತು. ದಾದಾಸಾಹೆಬ್ ಪಾಲ್ಕೆ ಅವರರಾಜಾಹರಿಶ್ಚಂದ್ರ’ ಚಲನಚಿತ್ರ ಮುಂಬರುವ ದಿನಗಳಲ್ಲಿ ಸಿನಿಮಾ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗುವುದಕ್ಕೆ ಕಾರಣವಾಯಿತು. ಬೆಳ್ಳಿತೆರೆಯ ಅನೂಹ್ಯ ಬೆಳವಣಿಗೆ ಮತ್ತು ಜನಸಾಮಾನ್ಯರ ಭಾವನಾತ್ಮಕ ಬೆಂಬಲ ಚಿತ್ರರಂಗ ಬೃಹತ್ ಉದ್ಯಮವಾಗಿ ಬೆಳೆಯುವುದಕ್ಕೆ ಕಾರಣವಾಯಿತು. ೧೯೧೩ರಿಂದ ಆರಂಭವಾಗಿ ಇಲ್ಲಿಯವರೆಗೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರದ ಕಥನಗಳು ಒಂದೋ ಸಮಾಜದ ಆಗುಹೋಗುಗಳಿಂದ ಪ್ರೇರಿತವಾದುವು, ಅಥವಾ ಸಮಾಜದ ಆಗುಹೋಗುಗಳಿಗೆ ಪ್ರೇರಿತವಾದುವು. ಬಹುಶ: ಚಿತ್ರದ ಕಥೆಗಾರನೊಬ್ಬ ರಾಜಕೀಯ, ಸಾಮಾಜಿಕ ಬದಲಾವಣೆಗಳಿಗೆ ತಲ್ಲಣಗಳಿಗೆ ಕಿವಿಯಾಗದಿದ್ದರೆ ಪ್ರೇಕ್ಷಕರ ಮನತಟ್ಟುವ ಚಿತ್ರ ಮಾಡಲು ಸಾಧ್ಯವಿಲ್ಲ. ಆದರೆ ಕಾಯಕದಲ್ಲಿ ಸಿನಿಮಾ ಬೀರುವ ಪರಿಣಾಮಗಳ ನೈತಿಕ ಚೌಕಟ್ಟನ್ನು  ಗಮನಿಸದಿದ್ದರೆ ಒಂದೋ ಚಿತ್ರ ಎಡಬಹುದು ಅಥವಾ ಸಮಾಜ ಎಡವಬಹುದು.



ಭಾರತೀಯ ಸಿನಿಮಾ ಅಂದರೆ ಅದೊಂದು ಸಾಗರ, ಹಲವಾರು ಭಾಷೆಗಳಲ್ಲಿ, ವಿವಿಧ ರಾಜ್ಯಗಳಲ್ಲಿ ನಿರ್ಮಾಣವಾಗುವ ಚಿತ್ರಗಳು ಭಾರತೀಯ ಸಿನಿಮಾ ಎನ್ನುವ ಒಟ್ಟು ಸಮೂಹವನ್ನು ಪ್ರತಿಬಿಂಬಿಸುತ್ತವೆ. ಆದರೆ ಒಂದೊಂದು ಭಾಷೆಯ ಸಿನಿಮಾವೂ ಭಿನ್ನ. ಎಲ್ಲಾ ಸಿನಿಮಾಗಳ  ವಸ್ತು ವಿಷಯವನ್ನು ವಿಶ್ಲೇಷಿಸುತ್ತಾ ಸಿನಿಮಾ ಕಥನ ಕಟ್ಟುವ ಪ್ರಕ್ರಿಯೆ ಚರ್ಚಿಸುವುದು ಕಷ್ಟ. ಕಾರಣಕ್ಕಾಗಿ ಭಾರತದ ದೊಡ್ಡ ಸಿನಿಮಾರಂಗವಾದ ಹಿಂದಿ ಚಿತ್ರರಂಗಬಾಲಿವುಡ್ನ್ನು ಲೇಖನದ ವಸ್ತುವಾಗಿ ತಗೆದುಕೊಳ್ಳಲಾಗಿದೆ

ಚಲನಶೀಲ ಸಮಾಜ, ಮೌಲ್ಯಗಳ ಸಂಘರ್ಷ ಮತ್ತು ಸಿನಿಮಾ : ೧೯೪೦ರ ದಶಕದ ನಂತರ ಹಿಂದಿ ಚಿತ್ರರಂಗ ತನ್ನದೇ ರೂಪುರೇಷೆಯನ್ನು ತೆಗೆದುಕೊಳ್ಳಲು ಆರಂಭಿಸುತ್ತದೆ. ಬಹುಶ: ಸಮೂಹ ಮಾಧ್ಯಮಗಳ ಇತಿಹಾಸ ತೆಗೆದುಕೊಂಡರೆ ಅತಿ ಕಡಿಮೆ ಅವಧಿಯಲ್ಲಿ ಬಹುಬೇಗ ಜನಸಾಮಾನ್ಯರ ಮನಸ್ಸಿಗೆ ಲಗ್ಗೆಹಾಕಿದ್ದು ಸಿನಿಮಾ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. ೧೯೫೦ರ ದಶಕದಲ್ಲಿ ಬ್ರಿಟೀಷ್ ಇಂಡಿಯಾ ಮರೆಯಾಗಿ ಅಖಂಡ ಭಾರತ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಸಂದರ್ಭದಲ್ಲಿ ಹಿಂದಿ ಚಿತ್ರರಂಗದಲ್ಲಿ ಮುನ್ನಲೆಗೆ ಬಂದ ಚಿತ್ರಗಳಲ್ಲಿ ಆಂಗ್ಲರ ದಬ್ಬಾಳಿಕೆಯ ನೆರಳಾಗಿ ಕಾಡಿದ ಜಮಿನ್ದಾರಿ ಪದ್ಧತಿ, ಜನಸಾಮನ್ಯನ ಬದುಕು ಮತ್ತು ಹೋರಾಟದ ಕಥಾಹಂದರವೇ ಮುಖ್ಯ ಭೂಮಿಕೆಯಾಗುತ್ತದೆ. ೧೯೫೩ರಲ್ಲಿ ಬಿಮಲ್ರಾಯ್ ನಿರ್ದೇಶಿಸಿದದೋ ಬಿಗಾ ಜಮೀನ್, ೧೯೫೭ರಲ್ಲಿ ಬಿಡುಗಡೆಯಾದ ಗುರುದತ್ ನಿರ್ದೇಶಿಸಿ, ನಿರ್ಮಾಣ ಮಾಡಿದಪ್ಯಾಸಾ  ಮೊದಲಾದ ಚಿತ್ರಗಳು ಸಮಾಜವನ್ನು ಅಂದು ಕಾಡಿದ ಮತ್ತು ಕೂಡಿದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳ ಜೊತೆಗೆ ದೇಶ ಮತ್ತು ಸಮಾಜಕಟ್ಟುವ ಕ್ರಿಯೆಯಲ್ಲಿ ನಾಯಕತ್ವ ಪಡೆದುಕೊಂಡ ಮಹಾತ್ಮಾ ಗಾಂಧಿ ಮತ್ತು ಜವಹರಲಾಲ್ ನೆಹರೂ ಅವರ ಸಿದ್ಧಾಂತದ ಎಳೆಗಳು ಢಾಳಾಗಿ ಕಾಣಿಸಿಕೊಂಡವು. ಸಿನಿಮಾದಲ್ಲಿ ಬರುವ ಪಾತ್ರಗಳೂ ಬದಲಾವಣೆಯ ಪ್ರಕ್ರಿಯೆಗೆ ಒಳಗಾದವು. ಸಿನಿಮಾದ ನಾಯಕ/ಕಿ ಹಾಗೂ ಖಳನಾಯಕ ಅಂದಿನ ಸಮಾಜದಲ್ಲಿ ಬಿಂಬಿತವಾಗಿದ್ದ ನೈತಿಕ ಮತ್ತು ಅನೈತಿಕ ಮೌಲ್ಯಗಳನ್ನೇ ಪ್ರತಿಬಿಂಬಿಸುತ್ತಿದ್ದರು. ರೈತನ ಮಗನೊಬ್ಬ ನಾಯಕನಾದರೆ, ಜಮಿನ್ದಾರನೊಬ್ಬ ಖಳನಾಯಕನಾಗಿದ್ದ, ದುಡಿಯುವ ವರ್ಗ ಮತ್ತು ಆಳುವ ವರ್ಗದ ನಡುವಿನ ಸಂಘರ್ಷವೇ ಚಿತ್ರದ ಮುಖ್ಯ ಭೂಮಿಕೆಯಾಗಿತ್ತು. ಕಾಲಕಳೆದಂತೆ ನೈತಿಕ ಮತ್ತು ಅನೈತಿಕ ಮೌಲ್ಯಗಳ ಸಂಘರ್ಷವೇ ಕಥೆಯನ್ನು ಕಟ್ಟಿಕೊಟ್ಟರೂ ಇವನ್ನು ಬಿಂಬಿಸುವ ಪಾತ್ರಗಳು ಬದಲಾಗುತ್ತಾ ಹೋದವು. ಮೌಲ್ಯಗಳ ಸಂಘರ್ಷ ಸಾರ್ವಕಾಲಿಕವಾದರೂ ಸಮಾಜ ಚಲನಶೀಲ ಎನ್ನುವುದನ್ನು ಇಲ್ಲಿ ಗ್ರಹಿಸಿಕೊಳ್ಳಬೇಕಾಗುತ್ತದೆ. ಚಲನಶೀಲ ಸಮಾಜದ ಪರಿವರ್ತನೆಯ ಹಾದಿಯಲ್ಲಿ ಮೌಲ್ಯಗಳನ್ನು ಬಿಂಬಿಸುವ ವ್ಯಕ್ತಿಗಳು ಬದಲಾಗುತ್ತಾ ಹೋಗುತ್ತಾರೆ.

ಮಧ್ಯೆ ಸತ್ಯಜಿತ್ ರೇ ಯಂತಹಾ ಸಿನಿಮಾ ನಿರ್ದೇಶಕರು ಜನಸಾಮಾನ್ಯನ ಬದುಕಿನ ವಿವಿಧ ಪಲ್ಲಟಗಳನ್ನು, ಭಾವನಾತ್ಮಕ ಹೋರಾಟಗಳನ್ನು ಜೊತೆಗೆ ಸಾಮಾಜಿಕ ಕ್ರಾಂತಿ ಹಾಗೂ ಬೌದ್ಧಿಕ ಪುನರುಜ್ಜೀವನವನ್ನು ತೆರೆಮೇಲೆ ಬಿಂಬಿಸಲು ಆರಂಭಿಸಿದರು. ಕಥೆಯ ಕಲ್ಪನೆಗಿಂತಲೂ ನೈಜತೆಯನ್ನು ಸೃಜನಶೀಲತೆಯ ಲೇಪನದೊಂದಿಗೆ ತೆರೆಯ ಮೇಲೆ ನಿಚ್ಛಳವಾಗಿಸುವ ಅವರ ಪ್ರಯತ್ನವೂ ಯಶ ಕಂಡಿತು. ಆದರೆ ಉಳಿದಂತೆ ಬಹುತೇಕ ಚಿತ್ರಗಳು ವಿವಿಧ ಕ್ಷೇತ್ರಗಳಲ್ಲಿ  ಒಳಿತು ಮತ್ತು ಕೆಡುಕಿನ ಹೋರಾಟದ ವೈಭವೀಕರಣವನ್ನೇ ಕಥಾಹಂದರವಾಗಿ ತೆಗೆದುಕೊಳ್ಳಲು ಆರಂಭಿಸಿತು. ೧೯೭೦ ದಶಕದಲ್ಲಿ ದೇಶ ಕಂಡ ರಾಜಕೀಯ ಅಸ್ಥಿರತೆ, ಸಂಘರ್ಷ, ನಗರೀಕರಣ ಮೊದಲಾದುವುಗಳು ಸಿನಿಮಾಗಳ ಮೇಲೆ ಪ್ರಭಾವ ಬೀರಲಾರಂಭಿಸಿತು. ಬದಲಾವಣೆಆಂಗ್ರಿ ಯಂಗ್ಮ್ಯಾನ್ಸಿನಿಮಾಗಳು ಹುಟ್ಟಲು ನಾಂದಿ ಹಾಡಿತು. ದಬ್ಬಾಳಿಕೆ ಹಾಗೂ ಶೋಷಣೆಯ ವಿರುದ್ಧ ಹೋರಾಡುವ ಕಥಾನಾಯಕ ತೆರೆಯನ್ನು ಆಳಲು ಆರಂಭಿಸಿದ, ಖಳನಾಯಕನ ಪಾತ್ರದಲ್ಲಿ ಜಮಿನ್ದಾರಿ ವ್ಯಕ್ತಿಯ ಬದಲಾಗಿ, ಕಾರ್ಖಾನೆಯ ಮಾಲಿಕ, ವ್ಯಾಪಾರಿ, ಅಥವಾ ನಗರದ ಶ್ರೀಮಂತ ಉದ್ಯಮಿ ಬಂದುನಿA. ಸಿನಿಮಾಗಳು  ಮನರಂಜನೆಯ ಜೊತೆಗೆ ಸೂಕ್ಮವಾಗಿ ನಗರೀಕರಣದ ಪ್ರಭಾವ, ಹಳ್ಳ್ಳಿಯಿಂದ ನಗರದತ್ತ ಜನಸಾಮಾನ್ಯನ ವಲಸೆ, ಹಳ್ಳಿ ಮತ್ತು ನಗರದ ನಡುವಿನ  ಸಾಂಸ್ಕೃತಿಕ ಸಂಘರ್ಷಗಳು, ಗೊಂದಲಗಳನ್ನು ತಿಳಿಸಲು  ಪ್ರಯತ್ನಿಸಿದವು. ಕೆಲವೊಂದು ಸಿನಿಮಾಗಳಲ್ಲಿ ನಗರ, ಪಟ್ಟಣಗಳು ಮೌಲ್ಯರಹಿರ ಜೀವನದ ಕೇಂದ್ರವಾಗಿ, ಅನೈತಿಕತೆಯ ಅಗರವಾಗಿ ಕಂಡರೆ, ಹಳ್ಳಿ ಬದುಕಿನ ಮುಗ್ಧತೆ, ಪರಿಶುದ್ಧತೆ ಮತ್ತು ನೈತಿಕತೆಯ ಬಿಂಬ ಪ್ರತಿಫಲನವಾಗುತ್ತದೆ. ಬಹುಶ: ಸಿನಿಮಾಗಳು ಅಂದಿನ ಜನಸಾಮಾನ್ಯರ ಮನದಲ್ಲಿ ನಗರ ಅಥವಾ ಪಟ್ಟಣ ಹಾಗೂ ಅಲ್ಲಿ ವಾಸಿಸುವ ಜನರ ಮೇಲಿದ್ದ ಸಂಶಯವನ್ನೇ  ಕಥೆಯ ಎಳೆಯಾಗಿ ತೆಗೆದುಕೊಳ್ಳುವ ಕೆಲಸ ಮಾಡಿವೆ. ಬಹುಶ: ಸಿನಿಮಾಗಳು ಇಂತಹಾ ಕಥಾವಸ್ತುವನ್ನು ತೆಗೆದುಕೊಳ್ಳದೇ ಇದ್ದಿದ್ದರೆ ಜನಸಾಮಾನ್ಯರ ಮನಸ್ಸಿಗೆ ಒಪ್ಪಿತವಾಗುತ್ತಿರಲಿಲ್ಲ್ಲ. ಯಾವಾಗ ಸಿನಿಮಾವೊಂದು ಪ್ರೇಕ್ಷಕ ವರ್ಗಕ್ಕೆ ಅವರದೇ ಆದ ಅನುಭವಗಳನ್ನು ಸುಂದರವಾಗಿ ಕಟ್ಟಿಕೊಡುತ್ತವೆಯೋ ಆಗ ಅದು ವೀಕ್ಷಕ ಗಡಣಕ್ಕೆ ಆಪ್ತವಾಗುತ್ತದೆ.


ತದನಂತರದ ಬೆಳವಣಿಗೆ ಗಮನಿಸಿದರೆ ಶಿಕ್ಷಣ, ನಿರುದ್ಯೋಗ, ಶೋಷಣೆ, ಭೃಷ್ಟಾಚಾರವೇ ಚಿತ್ರದ ಮುಖ್ಯ ಕಥಾನಕವಾದುದನ್ನು ಚರ್ಚಿಸದೇ ಇರುವಂತಿಲ್ಲ, ಶಿಕ್ಷಿತ ಬಡ ನಿರುದ್ಯೋಗಿ ಯುವಕ ಹಾಗೂ ಭೃಷ್ಟ ಅಧಿಕಾರಿ, ರಾಜಕಾರಣಿ ಅಥವಾ ಪೊಲೀಸ್ ಅಧಿಕಾರಿಯ ನಡುವಿನ ಸಂಘರ್ಷ ತೆರೆಯ ಮೇಲೆ ರಾರಾಜಿಸಲು ಆರಂಭವಾಯಿತು. ಎಲ್ಲಾ ಕಥಾನಕಗಳು ಸಮಾಜ ಸಾಗುತ್ತಿರುವ ಹಾದಿಯನ್ನೇ ಬಿಂಬಿಸುತ್ತದೆ. ಭ್ರಷ್ಟಾಚಾರದ ಕರಿನರಳು ಎಲ್ಲಾ ಕ್ಷೇತ್ರವನ್ನು  ಆವರಿಸಿರುವುದು ಇಲ್ಲಿ ಕಂಡುಬರುತ್ತದೆ. ನಿಜಬದುಕಿನಲ್ಲಿ ಜನಸಾಮಾನ್ಯನನ್ನು ಕಾಡಿದ ಭೃಷ್ಟ ವ್ಯವಸ್ಥೆಯ ಹರಿಕಾರರು ತೆರೆಯಮೇಲೆವಿಲನ್ಆಗಿ ಪರಿವರ್ತನೆಗೊಂಡರು. ಕಾಲಬದಲಾದಂತೆ ಖಳನಾಯಕರು ಬಿಂಬಿಸುವ ಪಾತ್ರಗಳು ಬದಲಾದುದನ್ನು ಇಲ್ಲಿ ಗಮನಿಸಬಹುದು. ನಿಜ ಜೀವನದಲ್ಲಿ ನಡೆಯುವ ಸಾಮಾಜಿಕ- ಸಾಂಸ್ಕೃತಿಕ ಬದಲಾವಣೆಯೇ ತೆರೆಯ ಮೇಲಿನ ಕಥನ ಮತ್ತು ಪಾತ್ರವರ್ಗದ ಬದಲಾವಣೆಗೆ ಹಿನ್ನೆಲೆಯಾಗುತ್ತದೆ ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಬೇಕು.

ನಡುವೆ ಕಥನದಲ್ಲಿ ಇನ್ನೊಬ್ಬ ರೆಬೆಲ್ಸ್ಟಾರ್ ಬಂದುಹೋದುದನ್ನು ಅಲ್ಲಗಳೆಯುವಂತಿಲ್ಲ. ೮೦ ಹಾಗೂ ೯೦ರ ದಶಕಲ್ಲಿ ಬಂದ ಸಿನಿಮಾ ನಾಯಕನಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ವ್ಯವಸ್ಥೆಯಿಂದ ಯಾವುದೇ ಸಮಸ್ಯೆ ಇರಲಿಲ್ಲ. ನಾಯಕನ ರೆಬೆಲ್ ತನ್ನ ಕುಟುಂಬಸ್ಥರ ವಿರುದ್ಧವೇ ಆಗಿರುತ್ತದೆ. ತಾನು ಪ್ರೀತಿಸಿದ ಹುಡುಗ/ಗಿ ಯನ್ನು ಮದುವೆಯಾಗುವ ಪ್ರಕ್ರಿಯೆಯಲ್ಲಿ ಬಂದೊದಗುವ ತೊಡಕುಗಳೇ ಆತನ/ಕೆ ಹೋರಾಟಕ್ಕೆ ಪ್ರೇರಣೆಯಾಗುತ್ತದೆ. ತಾನು ಅತ್ಯಂತ ಗೌರವಿಸುವ ವ್ಯಕ್ತಿಯ ವಿರುದ್ಧವೇ ಎದೆತಟ್ಟಿನಿಂತು ತನ್ನ ಪ್ರೀತಿಗೆ ನ್ಯಾಯಕೊಡುವ ಆತನ ರೆಬೆಲ್ ಸುಖಾಂತ್ಯಕಾಣುತ್ತದೆ. ಇಂತಹಾ ಸಿನಿಮಾ ಕಥನದ ಹಾದಿಯನ್ನು ತದನಂತರ ಬಂದ ಬಹುತೇಕ ಸಿನಿಮಾಗಳು ತುಳಿದವು.

*ಮಾರುಕಟ್ಟೆ ಸೂತ್ರ ಹಾಗೂ ಜನಪ್ರೀಯ ಸಿನಿಮಾದ ಲಗ್ಗೆ*

೧೯೭೦ರ ದಶಕದ ನಂತರ ಸಿನಿಮಾ ವಾಣಿಜ್ಯ ಲೆಕ್ಕಾಚಾರದ ನೆರಳಿನ ನಂಟಿನ ಜೊತೆ ಬೆಳೆಯಲಾರಂಭಿಸಿತು. ನಿರ್ದೇಶಕನೊಬ್ಬ ಮಾರುಕಟ್ಟೆಯ ತಂತ್ರಗಾರಿಗೆ ಜೊತೆ ಗಳಿಕೆಯ ಬಾಲಕ್ಕೆ ಜೋತು ಬೀಳಲಾರಂಭಿಸಿದ. ಪ್ರೇಕ್ಷಕರನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಪ್ರೇರೇಪಿಸುವ ಕಥಾನಕಗಳನ್ನು ವೀಕ್ಷಕರು ಆಪ್ತವಾಗಿಸಿಕೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಲಾಯಿತುಸಿನಿಮಾ ಮಾರುಕಟ್ಟೆಯ ಸಿಧ್ಧ ಸೂತ್ರಗಳನ್ನು ಸಾಮೀಪ್ಯಕ್ಕೆ ತಂದುಕೊಂಡಹಾಗೆ ಸಮಾಜದ ಆಗುಹೋಗುಗಳಿಂದ, ಜನಸಾಮಾನ್ಯನ ಬದುಕಿನ ಚಿತ್ರಣಗಳಿಂದ ದೂರವಾಯಿತು.

ಇದೇ ಕಾಲಘಟ್ಟದಲ್ಲಿ ನೈತಿಕ ಚೌಕಟ್ಟನ್ನು ಮೀರಿನಿಂತ ಸಿನಿಮಾಗಳು ಬಂದವು, ಗ್ಯಾಂಗ್ಸ್ಟರ್ಗಳೇ ಹೀರೋಗಳಾಗಿ ಪ್ರೇಕ್ಷಕ ವರ್ಗದ ಭಾವನಾತ್ಮಕ ಬೆಂಬಲವನ್ನು ಸಿನಿಮಾದುದ್ದಕ್ಕೂ  ಪಡೆಯುವ ಕಾಲವೂ ಬಂತು, ಗ್ಯಾಂಗ್ಸ್ಟರ್ ಮಾಡುವ ಕೆಲಸವನ್ನು  ಸಮರ್ಥಿಸಿಕೊಳ್ಳುವ ಕಥಾನಕಗಳು, ನೈತಿಕ- ಅನೈತಿಕ ಸಂಘ಼ರ್ಷವನ್ನೇ ಮುಖ್ಯಭೂಮಿಕೆಯಾಗಿಟ್ಟುಕೊಂಡ ಸಿನಿಮಾ ಕ್ಷೇತ್ರದ ಪಥವನ್ನೇ ಬದಲಿಸಿದವು, ಬಹುಶ: ಒಂದೇ ತರಹದ ಕಥಾನಕಗಳನ್ನು ನೋಡಿ ಬೇಸತ್ತಿದ್ದ ಪ್ರೇಕ್ಷಕವರ್ಗ ಭಿನ್ನ ಚಿತ್ರವೊಂದನ್ನು ಒಪ್ಪಿಕೊಳ್ಳಲು ಆರಂಭಮಾಡಿತ್ತು. ಆದರೆ ಸಿನಿಮಾಗಳು ನೈತಿಕ ಪ್ರಶ್ನೆಯನ್ನು ಎತ್ತಿದ್ದು ಸುಳ್ಳಲ್ಲ. ಸಿನಿಮಾ ಸಾಹಿತ್ಯದ ಮೂಸೆಯಿಂದ ಹೊರಬಂದು, ನಾಯಕನ ಇಮೇಜ್ಗೆ ತಕ್ಕಹಾಗೆ ಚಿತ್ರಕಥೆ ಹಾಗೂ ಸಂಭಾಷಣೆಯ ಬರೆಯುವ ಪ್ರಕ್ರಿಯೆಗೆ ಒಳಗಾಯಿತು. ಸಿನಿಮಾ ವಾಸ್ತವ ಪ್ರಪಂಚದಿA ದೂರಾವಾಗಿಫ್ಯಾಂಟಸಿಲೋಕವನ್ನು ಸೃಷ್ಟಿಸುತ್ತಾ ಪ್ರೇಕ್ಷಕರ ಅಭಿರುಚಿಯನ್ನೂ ಬದಲಾಯಿಸುವ ಅಪಾಯಕಾರಿ ದಿನಗಳು ಆರಂಭವಾದವು. ಸಿನಿಮಾ ಮಾಧ್ಯಮ ಉದ್ಯಮವಾಯಿತು.

ಸಿನಿಮಾಗಳ ಮಾದರಿಯಲ್ಲಿ ಸಮಾಜದಲ್ಲಿ ಕೊಲೆ, ಸುಲಿಗೆಗಳು ನಡೆದದ್ದೂ ಸಿನಿಮಾ ಸಮಾಜದ ಮೇಲೆ ಎಂತಹಾ ಗಾಢ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಪುರಾವೆ. ಸಿನಿಮಾ ತನ್ನ ಕಥೆಯ ಮೂಲಕ, ಪಾತ್ರವರ್ಗದ ಮೂಲಕ ಒಂದುಇಮೇಜ್ನ್ನು ಸಮಾಜಕ್ಕೆ ಕೊಡುತ್ತದೆ, ಸಮಾಜ ಅದನ್ನು ತನ್ನೊಳಗೆ ಅತಿಸುಲಭವಾಗಿ ಸೇರಿಸಿಕೊಳ್ಳುತ್ತದೆ. ಇಂತಹಾ ಸಂದರ್ಭದಲ್ಲಿ ಕಥೆಗಾರನೊಬ್ಬನ, ನಿರ್ದೇಶಕನೊಬ್ಬನ  ನೈತಿಕತೆ ಖಂಡಿತವಾಗಿಯೂ ಕೆಲಸ ಮಾಡಬೇಕು. ಯಾವುದೇ ಸೃಜನಶೀಲ ಕಲೆಯೊಂದು ಮನರಂಜನೆಯ ಜೊತೆಗೆ ಸಮಾಜದ ಕಡೆಗೆ ತನ್ನ ಜವಾಬ್ಧಾರಿಯನ್ನೂ ನಿರ್ವಹಿಸಬೇಕಾಗುತ್ತದೆ. ಚಲನಶೀಲ ಸಮಾಜದಲ್ಲಿ ನನ್ನದೂ ಒಂದು ಪಾಲಿದೆ ಎಂದು ತನ್ನನ್ನು ತಾನು ಗುರುತಿಸಿಕೊಂಡು ಧನಾತ್ಮಕ ಬದಲಾವಣೆಗೆ ಕಾರಣವಾಗಬೇಕು.

*ಕಥಾನಾಯಕಿ ಮತ್ತುಅವಲಂಭಿತಸೂತ್ರ*

ನಡುವೆ ಕಥಾನಾಯಕಿಯ ಪಾತ್ರವನ್ನು ವಿಶ್ಲೇಷಿಸದಿದ್ದರೆ  ಲೇಖನ ಅಪೂರ್ಣವಾಗುತ್ತದೆ. ಸಿನಿಮಾ ಜನಸಮುದಾಯದ ಮನಸ್ಸಿಗೆ ಲಗ್ಗೆ ಇಟ್ಟ ಹೊಸತರಲ್ಲಿ ಪತಿಯೇ ಪರದೈವ, ಮುತೈದೆ ಭಾಗ್ಯ  ಎನ್ನುವ ಸಮಾಜದಲ್ಲಿ ಆಳವಾಗಿ ಬೇರೂರಿದ ಪತ್ನಿ ಧರ್ಮದ ಸಿದ್ಧಾಂತ ಹಾಗೂ ನಂಬಿಕೆಗಳಿಗೆ ಸಿನಿಮಾ ನಾಯಕಿಯೂ ಪ್ರತಿಬಿಂಬವಾಗಿದ್ದಳು, ಅದರಲ್ಲಿ ಸ್ವಲ್ಪ ಭಿನ್ನ ಎನಿಸಿದ ಪಾತ್ರಗಳಿದ್ದರೆ ಅದು ಖಂಡಿತವಾಗಿಯೂ ಖಳನಾಯಕಿಯ ಪಾತ್ರವೇ!. ಹಾಗಂತ ಮನರಂಜನೆಗೋಸ್ಕರ ಜನರನ್ನು ಚಿತ್ರಮಂದಿರದತ್ತ ಸೆಳೆಯಲುರೀಟಾ, ‘ಜಮೀಲಾ, ‘ರೋಸಿಯಂತಹ ಪಾತ್ರಗಳನ್ನು ಸೃಷ್ಟಿಸುತ್ತಿದ್ದದು ಮಾತ್ರ ವಿಪರ್ಯಾಸ!. ನಂತರದಲ್ಲಿ ನಗರೀಕರಣ, ಆಧುನೀಕರಣದ ನೆರಳೋ ಎಂಬಂತೆ ಮನರಂಜನೆಗೋಸ್ಕರ ಸೃಷ್ಟಿಸಿದಂತಹಾ ಪಾತ್ರಗಳೇ  ಹಿರೋಯಿನ್ ಅನಿಸಿಕೊಂಡವು. ಒಂದಷ್ಟು ಸಿನಿಮಾಗಳಲ್ಲಿ ಸಾಂಪ್ರಾದಾಯಿಕತೆಯ ನೆರಳಿನಿಂದ ಹೊರಬಂದು ಸ್ವಾವಲಂಬನೆಯ ಪ್ರತಿರೂಪವಾಗಿರುವ ಸ್ವಾಭಿಮಾನಿ ಹೆಣ್ಣನ್ನೂ ಚಿತ್ರಿಸಲಾಯಿತು. ಆದರೆ ಸಾಮಾಜಿಕ ಕಟ್ಟುಪಾಡುಗಳ ಫಲವಾಗಿ ಹೆಣ್ಣಿಗೆ ದೊರಕುವ ಎರಡನೇ ದರ್ಜೆಯ ಸದಸ್ಯತ್ವ ಸಿನಿಮಾದಲ್ಲೂ ದೊರಕಿದ್ದು ಬಹಳ ಚರ್ಚಿತವಾದ ವಿಷಯ. ಕಥಾನಾಯಕಿ ಎಂದಿಗೂ ನಾಯಕನಿಗೆ ಅವಲಂಭಿಸಿಕೊಂಡೇ ಇದ್ದಳು ಮತ್ತು ಈಗಲೂ ಇದ್ದಾಳೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಬಹುಶ: ಇಂತಹಾ ಪಾತ್ರಗಳನ್ನು ಕಥಾನಾಯಕಿ ಎನ್ನುವುದಕ್ಕಿಂತಚಿತ್ರ ತಾರೆಎಂದರೆ ಉತ್ತಮ. ಪ್ರೇಕ್ಷಕರ ಒಂದು ವರ್ಗವನ್ನು ಚಿತ್ರಮಂದಿರಗಳತ್ತ ಸೆಳೆಯಲು ಚಿತ್ರತಾರೆ ಒಂದು ತಂತ್ರವಾಗಿ ರೂಪಿತಗೊಂಡಳು.

*ಸಮಾಜದಲ್ಲಿ ಸ್ತ್ರೀಪರ ಚಿಂತನೆ ಮತ್ತು ಸಿನಿಮಾ ಕಥನ *

ಆದರೆ ೨೧ನೇ ಶತಮಾನಕ್ಕೆ ಲಗ್ಗೆ ಇಟ್ಟಂತೆ ಕೆಲವೊಂದು ಸಿನಿಮಾಗಳು ಭಿನ್ನ ಕಥಾನಕ ಕೊಟ್ಟು ಜನಮನ ಗೆಲ್ಲುವಲ್ಲಿ ಯಶಸ್ವಿಯಾದವು. ತಡವಾಗಿಯಾದರೂ  ಕೆಲವಾರು ಸಿನಿಮಾಗಳಲ್ಲಿ ಸ್ತೀಪಾತ್ರ ಮುಖ್ಯ ಭೂಮಿಕೆಯಾಗಿ ಹೊರಹೊಮ್ಮುತ್ತಾ ಅಥವಾ ನಾಯಕನಷ್ಟೇ ಮಹತ್ವದ ಪಾತ್ರವನ್ನು ನಾಯಕಿಗೆ ನೀಡುವ  ಮೂಲಕ ಸಿನಿಮಾರಂಗದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಚಿತ್ರರಂಗದ ಆರಂಭದಿAದಲೂ ಬಹುತೇಕ ಚಿತ್ರಗಳಲ್ಲಿ ಚಿತ್ರಣವಾಗುತ್ತಿದ್ದಅಭಲಾ ನಾರಿಎನ್ನುವ ಪರಿಕಲ್ಪನೆಗೆ ಬದಲಾಗಿ ಬೆರಳೆಣಿಕೆ ಚಿತ್ರಗಳಲ್ಲಾದರೂ ಅನ್ಯಾಯದ ವಿರುದ್ಧ ಹೋರಾಡುವ, ಶೋಷಣೆ ವಿರುದ್ದ ದ್ವನಿಯೆತ್ತುವ ಪಾತ್ರಗಳಾಗಿ ಬಿಂಬಿಸಲಾಗುತ್ತಿದೆ. ಬಹುಶ: ಇದು ಸಮಾಜದಲ್ಲಿ ಮಹಿಳೆಯ ಅಸ್ತಿತ್ವ ಹಾಗೂ ಸ್ಥಾನಮಾನದಲ್ಲಾದ ಬದಲಾವಣೆಯ ಪರಿಣಾಮದ ಫಲ ಎಂದರೂ ತಪ್ಪಿಲ್ಲ. ಆದರೆ ಇದರರ್ಥ ಸ್ರಿ ಪಾತ್ರವೇ ಮುಖ್ಯ ಭೂಮಿಕೆಯಾಗಿದ್ದ ಚಿತ್ರಗಳು ಇರಲಿಲ್ಲ ಎಂದರ್ಥವಲ್ಲ. ಅಲ್ಲೊಂದು ಇಲ್ಲೊಂದು ಎಂಬಂತೆ ಬೆರಳೆಣಿಕೆಯ ಚಿತ್ರಗಳು ನಿರ್ಮಾಣವಾಗಿ ಪ್ರದರ್ಶನ ಕಂಡಿದ್ದವು ಚಿತ್ರಗಳು ೧೯೬೦ರ ದಶಕದಲ್ಲಿ ಆರಂಭವಾದ ಮಹಿಳಾ ಪರ ಚರ್ಚೆಗಳು, ಮಹಿಳಾವಾದಿ ಚಿಂತನೆಗಳನ್ನು  ತೆರೆಯ ಮೇಲೆ ಬಿಂಬಿಸಲು ಪ್ರಯತ್ನಿಸಿದ್ದವು. ೧೯೫೭gಲ್ಲಿ ತೆರೆಕಂಡಮದರ್ ಇಂಡಿಯಾಸಿನಿಮಾ ಬಹುಶ: ಸ್ರೀ ಪಾತ್ರದ ಚಿತ್ರಗಳ ಮುನ್ನುಡಿಯಾಗಿ ಗೋಚರಿಸುತ್ತದೆ೧೯೮೭ರಮಿರ್ಚಿ ಮಸಾಲಾ, ೧೯೯೪ರ ರದಲ್ಲಿ ಬಂದಬ್ಯಾಂಡಿಟ್ ಕ್ವೀನ್ಇದಕ್ಕೆ ಉದಾಹರಣೆ ಆದರೆ ನಾಯಕನಟನ ಅರ್ಭಟವೇ ಮುಖ್ಯವಾಗಿದ್ದ ಜನಪ್ರೀಯ ಸಿನಿಮಾಗಳ  ಮಧ್ಯೆ ಇಂತಹಾ ಸಿನಿಮಾಗಳಿಗೆ ಸ್ತಿç ಪಾತ್ರಗಳ ಚಿತ್ರಣವನ್ನು ಪುನರ್ವಿಮರ್ಶೆ ಮಾಡಲು ಸಾಧ್ಯವಾಗಲಿಲ್ಲ. ಸಿನಿಮಾ ಸಿದ್ಧ ಸೂತ್ರಗಳ ತೆಕ್ಕೆಯೊಳಗೆ ವಿಜೃಂಭಿಸುತ್ತಿತ್ತು. ಆದರೆ ಅಮದಿನ ಮಹಿಳಾ ಪ್ರಧಾನ ಚಿತ್ರಗಳಿಗೆ ಇಂದಿಗೂ ಮನ್ನಣೆ ಇದೆ ಎಂಬುದನ್ನು ಮರೆಯುವಂತಿಲ್ಲ.



 ಆದರೆ ೨೧ನೇ ಶತಮಾನದ ಆರಂಭದ ತರುವಾಯ ಮಹಿಳಾ ಪ್ರಧಾನ ಚಿತ್ರಗಳ ಸಂಖ್ಯೆ ಬಹುಮಟ್ಟಿಗೆ ಅಲ್ಲದಿದ್ದರೂ  ವರ್ಷಕ್ಕೊಂದು ಎನ್ನುವಂತೆ ತೆರೆಕಾಣಲು ಆರಂಭವಾಯಿತು. ಬದಲಾವಣೆ ೨೧ನೇ ಶತಮಾನದಲ್ಲಿ ಹೆಣ್ಣು ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ಕಥೆಯ ಪ್ರತಿಬಿಂಬ ಎಂದೂ ವಿಶ್ಲೇಷಿಸಬಹುದು. ಅಸ್ತಿತ್ವ (೨೦೦೦), ಚಾಂದಿನಿ ಬಾರ್ (೨೦೦೧), ನೊ ವನ್ ಕಿಲ್ಲ್ಡ್ ಜೆಸ್ಸಿಕಾ (೨೦೧೧), ಕಹಾನಿ (೨೦೧೨), ಇಂಗ್ಲೀಷ್ ವಿಂಗ್ಲೀಷ್ (೨೦೧೨), ಕ್ವೀನ್ (೨೦೧೪), ಮರ್ದಾನಿ (೨೦೧೪). ಮೆರಿ ಕೋಮ್ (೨೦೧೪), ನೀರಜಾ (೨೦೧೬), ಪಿಂಕ್ (೨೦೧೭), ಮಾಮ್ (೨೦೧೭), ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ(೨೦೧೭) ಮೊದಲಾದುವುಗಳು ಸ್ತ್ರೀಯ ಬದುಕಿನ ತಲ್ಲಣಗಳಿಗೆ, ಹೊರಾಟಗಳಿಗೆ ಹಾಗೂ ಯಶಸ್ಸಿಗೆ ಮನ್ನಣೆ ಇದೆ ಎಂಬುದಕ್ಕೆ ನಿದರ್ಶನ.

*ಬದಲಾಗುತ್ತಿರುವ ಕಥನ ಮತ್ತು ಭರವಸೆ*

 ಬಹಶ: ೨೦೧೫ರ ನಂತರ ಹಿಂದಿ ಸಿನಿಮಾ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷಾ ಸಿನಿಮಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಕಾಣಬಹುದು. ಹಳೆನೀರು ನಿಧಾನವಾಗಿ ಹರಿದುಹೋಗಿ ಹೊಸನೀರು ನುಗ್ಗತ್ತಿದೆ. ಹೊಸಮುಖಗಳು ಪರಿಚಯವಾಗುತ್ತಿವೆ. ಇದೂ ಸಿನಿಮಾ ಕತೆಯಾಗಬಹುದಾ? ಎಂದು ಒಂದುಕಾಲದಲ್ಲಿ ಕೇಳಬಹುದಾಗಿದ್ದ ಕಥೆಗಳೆಲ್ಲವೂ ಸಿನಿಮಾವಾಗುತ್ತಿದೆ. ಸಣ್ಣ ಪೇಟೆಯ ಗಲ್ಲಿಯ ಹುಡುಗ ಅಥವಾ ಹುಡುಗಿಯೇ ಪಾತ್ರವೇ ಚಿತ್ರದ ನಾಯಕ/ಕಿ ಯಾಗುತ್ತಿದೆ. ‘ಕಾನ್ಸ್ಟಿಪೇಷನ್ನಂತಹಾ ಸಾಮಾಜಿಕವಾಗಿ ಚರ್ಚೆಯಾಗದ ವಿಷಯವೊಂದು  ಕಥಾ ಹಂದರವಾಗಿ  ‘ಪಿಕೂನಂತಹ ಸಿನಿಮಾ ಪ್ರೇಕ್ಷಕರ ಜನಮನ ಗೆಲ್ಲುತ್ತಿದೆ. ನಿಗದಿಯಾಗಿದ್ದ ಮದುವೆ ಅರ್ಧಕ್ಕೆ ಮುರಿದುಬಿದ್ದಾಗ ಹುಡುಗಿಯೊಬ್ಬಳೇ ದೇಶಸುತ್ತುವ ಹೆಣ್ಣಿನ ಕಥೆಯೊಂದನ್ನು (ಕ್ವೀನ್) ಪ್ರೇಕ್ಷಕ ಗೆಲ್ಲಿಸುತ್ತಿದ್ದಾನೆಮಧ್ಯಮ ವರ್ಗದ ಕುಟುಂಬ ಅಥವಾ ಜನಸಮುದಾಯದಲ್ಲಿ ನಡೆಯುವ ಕಥೆಯನ್ನು ಜನ ಒಪ್ಪಿಕೊಳ್ಳಲಾರಂಭಿಸಿದ್ದಾರೆ. ಬಹುಶಐಷಾರಾಮಿ ಮನೆಯಲ್ಲಿ ಬೆಳೆದು, ಕ್ಷಣಾರ್ಧದಲ್ಲಿ ಅನಾಯಾಸವಾಗಿ ಪ್ಯಾರೀಸ್ನಲ್ಲಿ ಡ್ಯುಯೆಟ್ ಹಾಡುವ ನಾಯಕ- ನಾಯಕಿ, ನಾಯಕನ ಒಂದೇ ಏಟಿಗೆ ಮುಕಾಡೆ ಮಲಗುವ ರೌಡಿ, ಪ್ರೀತಿಯೇ ಅಂತಿಮ ಎನ್ನುವ ಕಥೆ ತಡವಾಗಿಯಾದರೂ ನೈಜತೆಗಿಂತ ದೂರ ಎನ್ನುವುದು ಪ್ರೇಕ್ಷಕರಿಗೆ ಅರ್ಥವಾದಂತಿದೆ. ತಮ್ಮ ನಡುವೆ ನಡೆಯುವ ಸಾಮಾನ್ಯ ಘಟನೆಗಳನ್ನೇ  ತೆರೆಯ ಮೇಲೆ ಕಾಣುವ ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರೇಕ್ಷಕರ ಅಭಿರುಚಿ ಬದಲಾಗಿದೆಕಥೆಗಾರ- ನಿರ್ದೇಶಕ- ನಟ ಹೊಸಬರಾದರೂ ಭಿನ್ನ ಕಥಾನಕವನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ.



ಒಟ್ಟಿನಲ್ಲಿ ಸಿನಿಮಾದ ಈಗಿನ ಕಾಲಘಟ್ಟ ಒಂದರ್ಥದಲ್ಲಿಗೋಲ್ಡನ್ ಏಜ್ . ಚಿತ್ರರಚನೆಗಾರ, ನಿರ್ದೇಶಕ, ನಾಯಕ ನಟ/ಟಿ, ಸಹಕಲಾವಿದರು, ತಾಂತ್ರಿಕ ವರ್ಗ ಎಲ್ಲರೂ ಗುರುತಿಸಲ್ಪಡುತ್ತಿದ್ದಾರೆ. ಕಲಾವಿದ, ನಿರ್ದೇಶಕ ಅಥವಾ ಕಥೆಗಾರ ತನ್ನ ಯಶಸ್ಸಿನ ಇತಿಹಾಸದ ನೆರಳಲ್ಲಿ ಮುಂದಡಿಯಿಡಲು ಈಗಿನ ಕಾಲಘಟ್ಟದಲ್ಲಿ ಸಾಧ್ಯವಿಲ್ಲ. ಪ್ರತಿಯೊಂದು ಹೊಸ ಅವಕಾಶ ಬಂದಾಗಲೂ ತನ್ನನ್ನು ತಾನು ಸಮರ್ಥ ಎನ್ನುವುದನ್ನು ಸಾಭೀತು ಮಾಡಬೇಕಾಗುತ್ತದೆ. ಕಥಾನಕವೂ ಅಷ್ಟೇ ತನ್ನಲ್ಲೊಂದು ಪ್ರೇಮಕಥೆಯಿದೆ, ಮಚ್ಚುಲಾಂಗುಗಳ ಅಬ್ಬರವಿದೆ ಎನ್ನುವ ಕಥೆಗಳ ನಡುವೆ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸಿಗೆ ಬೆಳೆದುನಿಂತ ಮಕ್ಕಳ ತಂದೆ- ತಾಯಿ ಮತ್ತೊಂದು ಕೂಸಿನ ಆಗಮನದಲ್ಲಿದ್ದಾರೆ ಎನ್ನುವಬದಾಯಿ ಹೋಎನ್ನುವ ಕಥೆಯೇ ಮೇಲುಗೈ ಸಾಧಿಸುತ್ತದೆ.

ಒಟ್ಟಿನಲ್ಲಿ ಪ್ರೇಕ್ಷಕ ವರ್ಗ ಕಥನದಲ್ಲಿ ಏಕತಾನತೆಯನ್ನು ಬಯಸುವುದಿಲ್ಲ. ಕಾಲಸರಿದಂತೆ ಸಮಾಜವೂ ಬದಲಾಗುತ್ತದೆ ಅದರ ಜೊತೆ ಪ್ರೇಕ್ಷಕರ ಮನಸ್ಥಿತಿಯೂ ಬದಲಾಗುತ್ತದೆ. ಸೂಕ್ಷ್ಮಕ್ಮಮಗಳನ್ನು ಕತೆಗಾರನೊಬ್ಬ ಅರಿತರೆ, ವೀಕ್ಷಕರು ಒಪ್ಪುವ ಚಿತ್ರಕತೆಗಳನ್ನು ಬರೆಯಬಲ್ಲ.

ಗೀತಾವಸಂತ್, ಇಜಿಮಾನ್

(‘ಸಿನಿಚಿಂತನ’ ಪುಸ್ತಕದಲ್ಲಿ ಪ್ರಕಟವಾದ ಲೇಖನ)