Tuesday, August 31, 2010

ಜಗದೆಲ್ಲಾ ಕತ್ತಲಿಗೆ ನೀನಲ್ಲ ಬೆಳಕು.......

''ಛೇ ನಂಗೇ ಹೀಗಾಗ್ಬೇಕಾ?... ಪ್ರಪಂಚದಲ್ಲಿ ಕಷ್ಟ, ಸಮಸ್ಯೆ ಎಲ್ಲಾ ನನಗೋಸ್ಕರನೇ ಹುಟ್ಟಿದೆ ಅಂತಾ ಕಾಣುತ್ತೆ...

ಸೋಲಿಗೆ ಮುದುಡಿಕೊಳ್ಳುವ ಹತಾಶ ಮನಸ್ಸು ಗೊಣಗುಟ್ಟುವ ವಾಕ್ಯವೇ ಇದು.

ಬಹುಶ: ಈ ನಂಗೇ'' ಅನ್ನುವ ವಾಕ್ಯವಿದೆಯಲ್ಲಾ ಅದು ಯಾರನ್ನೂ ಬಿಟ್ಟಿಲ್ಲ. ಯಾವುದೇ ಸಮಸ್ಯೆ ಬಂದರೂ 'ನಂಗೇ ಹೀಗಾ?'' ಎಂದು ಯೋಚಿಸುವವರೇ ಹೆಚ್ಚು ವಿನಹ ಇಷ್ಟೇ ತಾನೆ ಹೆಚ್ಚೇನು ಆಗಿಲ್ಲವಲ್ಲ'' ಎಂದು ಧನಾತ್ಮಕವಾಗಿ ಯೋಚಿಸುವವರೇ ಇಲ್ಲ.

ಈ ಜಗತ್ತಿನಲ್ಲಿ ಯಾರ ಮನ ಹೊಕ್ಕು ನೋಡಿದರೂ ಏನೋ ನಿರಾಶೆ, ನೋವು, ಕೋಪ ಇರಬಹುದೇ ಹೊರತು; ನಾನು ತುಂಬಾ ಹ್ಯಾಪ್ಪಿ'' ಎಂದು ಯಾರೂ ಹೇಳುವುದಿಲ್ಲ. ಹಾಗಿದ್ರೆ ಈ ನೋವು ಇದ್ದಂತೆ ಖುಷಿ ಖುಷಿಯಾಗಿರೋಕೆ ಸಾಧ್ಯವಿಲ್ಲವಾ? ಖಂಡಿತಾ ಸಾಧ್ಯ. ನಮ್ಮನ್ನಾವರಿಸಿರುವ ಒತ್ತಡ, ಹತಾಶೆ, ದು:ಖ, ಕೋಪ ಎಲ್ಲವನ್ನೂ ಒತ್ತಟ್ಟಿಗೆ ಸರಿಸಿ ನೋಡಿದರೆ ಎಲ್ಲರೂ ಸುಖಿಯೇ. ಯಾಕೆಂದರೆ ಆನಂದದ ಹಿತಾನುಭವ ಇರುವುದು ನಮ್ಮಲ್ಲಿಯೇ...


ಜೀವದಲ್ಲಿ ಸುಖವನ್ನೇ ಒದ್ದುಕೊಂಡು ಬರುವವರು ಯಾರೂ ಇಲ್ಲ. ನೋವು ನಲಿವುಗಳನ್ನು ಎಲ್ಲರೂ ಎದುರಿಸಲೇಬೇಕು. ಇದಕ್ಕೆ ವಯಸ್ಸಿನ ಹಂಗಿಲ್ಲ. ಲಿಂಗ ಬೇದವಿಲ್ಲ. ಸ್ಕೂಲಿಗೆ ಹೋಗುವ ಪುಟ್ಟ ಮಗುವಿಗೂ ಹಲವಾರು ಸಮಸ್ಯೆಗಳು. ಟ್ಯೂಷನ್, ಹೋಂ ವಕರ್್ ಹಾವಳಿಯಲ್ಲಿ ಕಳೆದುಹೋಗುವ ಬಾಲ್ಯ. ಆಟವಾಡಿ ಕೇಕೆ ಹಾಕಬೇಕೆಂದರೂ ಅಪ್ಪ ಅಮ್ಮನ ಉರಿನೋಟ. ಎಲ್ಲಾ ಇರುವಾಗಲೂ ಯಾವುದೋ ಒಂದು ಇಲ್ಲದಿರುವ ನೋವಲ್ಲಿ ಬೆಳೆಯುತ್ತದೆ.

ಇನ್ನು ಹೆಣ್ಣುಮಕ್ಕಳ ವಿಷಯಕ್ಕೆ ಬಂದರೆ ಅವರಿಗೆ ಸಮಸ್ಯೆ ಬೆಟ್ಟದಷ್ಟು. ಸಣ್ಣ ನೋವು, ಸೋಲಿಗೂ ಕುಗ್ಗಿ ಹೋಗುತ್ತಾರೆ. ಅದೇ ಸಂತೋಷವಾದಾಗ ಬೆಟ್ಟದಷ್ಟು ಸಂಭ್ರಮಿಸುತ್ತಾರೆ. ಎಲ್ಲೋ ಸೋಲಾದಾಗ ಜೀವನವೇ ಕೈಕೊಟ್ಟಷ್ಟು ಕಂಗಾಲಾಗುತ್ತಾರೆ. ತಮ್ಮನ್ನಾವರಿಸಿರುವ ಸಮಸ್ಯೆಗಳ ಪರಿಹಾರಕ್ಕಿಂತಲೂ ಸಮಸ್ಯೆ ಬಗ್ಗೆಯೇ ತಲೆಕೆಡಿಸಿಕೊಳ್ಳುವ ಇವರು, ನಂಗೇ ಹೀಗಾಗುತ್ತಲ್ಲ'' ಎಂಬ ಉದ್ಗಾರದೊಂದಿಗೆ ಗಂಗಾ ಯಮುನಾ ಹರಿಸಿಬಿಡುತ್ತಾರೆ.

ವಾಸ್ತವದಲ್ಲಿ ಯಾವ ಸಮಸ್ಯೆ, ನೋವು, ನಲಿವುಗಳಾದರೂ ನಮ್ಮಿಂದಲೇ ಕ್ರಿಯೇಟ್ ಆಗಿರುತ್ತದೆಯೇ ಹೊರತು ಅದಾಗಿ ನಮ್ಮ ಮೇಲೆ ಬಂದೆರಗುವುದಿಲ್ಲ. ನೋಡುವ ದೃಷ್ಟಿ ಪಾಸಿಟಿವ್ ಆಗಿದ್ದರೆ ಆಕ್ಟೀವ್ ಆಗಿ ಜಿಗಿಯುತ್ತಾ ಮುಂದೆ ಸಾಗಬಹುದು. ಯಾವುದೇ ಸಮಸ್ಯೆಯಿದ್ದರೂ ನಿರ್ಮಲ ಚಿತ್ತದಿಂದ ನಸು ನಗುವಿನೊಂದಿಗೆ ಮುಂದಕ್ಕೆ ಸಾಗಿ. ಆನಂದ ಎಲ್ಲಿಯೋ ಇರುವುದಿಲ್ಲ. ಅದು ನಮ್ಮಲ್ಲೇ ಇದೆ. ಯಾವುದೇ ಪರಿಸ್ಥಿತಿಯಲ್ಲಿ ನಿರಾಳವಾಗಿರುವುದನ್ನು ಫೀಲ್ಗುಡ್'' ಅಥವಾ ಹಿತಾನುಭವ ಅನ್ನುತ್ತಾರೆ.

ಜೀವನದಲ್ಲಿ ಎನೇ ಬಂದರೂ ಡೋಂಟ್ ಕೇರ್ ಎಂದು ನಗುತ್ತಾ ಇರಬೇಕೆ. ಹಾಗಿದ್ದರೆ ಕೆಳಗಿನ ಅಂಶಗಳನ್ನು ಗಮನಿಸಿ.

ಎಲ್ಲರೂ ನಿಮ್ಮಂತವರೇ

ನಿಮ್ಮೆಲ್ಲಾ ದು:ಖಗಳಿಗೆ, ನೋವುಗಳಿಗೆ ಇನ್ನೊಬ್ಬರನ್ನಷ್ಟೇ ಹೊಣೆ ಮಾಡಬೇಡಿ. ನಿಮ್ಮ ಬಗ್ಗೆ ನಿಮಗೆ ಪಫರ್ೆಕ್ಟ್ ಎನ್ನುವ ಭಾವನೆ ಇರಬಹುದು. ಆದರೆ ನಿಮ್ಮ ಬೇಜಾರಿಗೆ ಕಾರಣವಾಗುವವರೂ ನಿಮ್ಮತೆಯೇ ಯೋಚಿಸುತ್ತಾರೆ ಎಂಬುದನ್ನು ಮರೆಯದಿರಿ

ಇದ್ದಂತೆಯೇ ಸ್ವೀಕರಿಸಿ

ಆತ್ಮೀಯರನ್ನು ಅವರ ಲೋಪಗಳ ಸಮೇತ ಸ್ವೀಕರಿಸಿ. ನಿಮ್ಮೊಂದಿಗೆ ನಿಮ್ಮವರೂ ಚೆನ್ನಾಗಿದ್ದರೆ ನೀವು ಹ್ಯಾಪ್ಪಿಯಾಗಿರುವುದರಲ್ಲಿ ಸಂಶಯವಿಲ್ಲ. ನೀವು ಸಂತೋಷವಾಗಿದ್ದಾಗ ಬೇರೆಯವರ ಜೀವನದಲ್ಲಿ ಆನಂದವನ್ನು ತುಂಬುವ ಪ್ರಯತ್ನ ಮಾಡಿ. ಎಲ್ಲರೂ ಚೆನ್ನಾಗಿರಲಿ ಎಂದು ಹಾರದೈಸುವಲ್ಲಿ ನೈಜ ಆನಂದವಿದೆ. ನಿಜವಾಗಿಯೂ ನಿಮ್ಮ ತಪ್ಪಿಲ್ಲದೆಯೇ ನಿಮಗೆ ದು:ಖವಾಗಿದ್ದರೆ ಅಂತವರ ಕಡೆಗೊಂದು ಕನಿಕರದ ನಗುಬೀರಿ ನೀವು ಮುನ್ನಡೆಯಿರಿ.

ಸಕಾರಾತ್ಮಕವಾಗಿ ಯೋಚಿಸಿ

ಒಂದು ವೇಳೆ ನಿಮ್ಮ ಪ್ರೀತಿ ಕೈಕೊಟ್ಟಿತು ಎಂದುಕೊಳ್ಳಿ ಭಗ್ನ ಪ್ರೇಮಿಯಾಗುವ ಬದಲು ಅದು ಪ್ರೀತಿ ನಿಜವೇ ಅಗಿದ್ದಲ್ಲಿ ಕೈಕೊಟ್ಟಿತ್ತಾದರೂ ಯಾಕೆ? ಎಂಬ ಪ್ರಶ್ನೆ ಮಾಡಿಕೊಳ್ಳಿ. ಅದು ಪ್ರೀತಿ ಆಗಿಲ್ಲದಿದ್ದರೆ ಮೋಸ ಹೋಗಿದ್ದೇ ಒಳ್ಳೆದಾಯಿತಲ್ಲವೇ?.ಹೀಗೆ ಸಕಾರಾತ್ಮಕವಾಗಿ ಯೋಚಿಸಿದರೆ ಎಲ್ಲವನ್ನೂ ಹಿಮ್ಮೆಟ್ಟಿ. ನನ್ನ ಗುರಿ ಮುಂದಿದೆ ಎಂಬ ಜಸ್ಟ್ ಸ್ಮೈಲ್ನೊಂದಿಗೆ ಮುಂದುವರೆಯಿರಿ. ನಿಮ್ಮ ನಿಧರ್ಾರವನ್ನು ಸಂಪೂರ್ಣವಾಗಿ ಸ್ವೀಕರಿಸಿ. ಎಲ್ಲವೂ ನಮ್ಮ ಒಳ್ಳೆಯದಕ್ಕೆ ಅಂದುಕೊಳ್ಳುವುದಷ್ಟೇ ಅಲ್ಲ. ಮನ:ಸ್ಪೂತರ್ಿಯಾಗಿ ಅಂಗೀಕರಿಸಬೇಕು. ಪ್ರತಿಕೂಲ ಪರಿಸ್ಥಿತಿಯಲ್ಲೂ ಅನುಕೂಲವನ್ನು ಹುಡುಕಬೇಕು.


ಕೋಪ ನಿಯಂತ್ರಿಸಿ:

ಕೋಪವನ್ನು ಮನಸ್ಸಿನಲ್ಲಿ ಅಡಗಿಸಿಕೊಳ್ಳುವುದು ಸರಿಯಲ್ಲ. ಹಾಗೆಂದು ಒಂದೇ ಸಲ ಸ್ಪೋಟಗೊಳಿಸುವುದೂ ಸರಿಯಲ್ಲ. ಬಲವಂತದಿಂದ ಮನಸ್ಸನ್ನು ಬೇರೆಡೆಗೆ ಹೊರಳಿಸಿ. ಕ್ರೀಡಾಪ್ರಿಯರಾಗಿದ್ದರೆ ಅದರತ್ತ ಗಮನಹರಿಸಿ. ಪುಸ್ತಕ ಅಥವಾ ಯೋಗಕ್ಕೆ ಮೊರೆಹೋಗುವುದು ಬೆಸ್ಟ್.


ಕೆಲಸದಲ್ಲಿ ನಿಷ್ಠೆ ಇರಲಿ

ನೀವು ಕೈಗೊಳ್ಳುವ ಕೆಲಸ ಯಾವುದೇ ಇರಲಿ ಪ್ರೀತಿಯಿಂದ ಮಾಡಿ. ಇದರಿಂದ ಮಾಡಿದ ಕೆಲಸದಲ್ಲಿ ತೃಪ್ತಿ ಇರುತ್ತದೆ. ಕೆಲಸದಲ್ಲಿ ನಿಷ್ಠೆ ಇದ್ದರೆ ಎಡವಟ್ಟಾಗಿ ದು:ಖ ಅನುಭವಿಸುವ ಪ್ರಮೆಯವೇ ಇಲ್ಲ.

ಉಲ್ಲಸಿತರಾಗಿರಿ

ಸದಾ ಉಲ್ಲಾಸಿತರಾಗಿರುವುದನ್ನು ಹಾಬಿಯಾಗಿ ಮಾಡಿಕೊಳ್ಳಿ. ಉತ್ತಮ ಆರೋಗ್ಯ, ದಿನಚರಿ ಮೈಗೂಡಿಸಿಕೊಳ್ಳ್ಳಿ. ಉತ್ತಮ ಹವ್ಯಾಸ ರೂಡಿಸಿಕೊಳ್ಳುವುದರಿಂದ ಸದಾ ಚೈತನ್ಯ ಚಿಲುಮೆಯಾಗಿರಬಹುದು. ಎಲ್ಲರೊಂದಿಗೂ ನಗುನಗುತ್ತಾ ವ್ಯವಹರಿಸಿ. ಇದು ನಿಮ್ಮ ವ್ಯಕ್ತಿತವಕ್ಕೊಂದು ಶೋಭೆ ತರುತ್ತದೆ.

ನೆರವಾಗಿ

ಕಷ್ಟದಲ್ಲಿರುವವರಿಗೆ ನೆರವಾಗುವುದು ಮಾನಸಿಕ ತೃಪ್ತಿ ನೀಡುತ್ತದೆ. ಅನ್ಯರಿಗೆ ಬೇಕಾದಾಗ ಸಹಾಯ ನೀಡಿ ಅದರಲ್ಲಿರುವ ಸುಖ ಅನುಭವಿಸಿದವರಿಗಷ್ಟೇ ತಿಳಿಯುತ್ತದೆ. ಆದರೆ ನಿಮ್ಮ ಸಹಾಯಕ್ಕೆ ಪ್ರತ್ಯುಪಕಾರ ಬಯಸಬೇಡಿ. ಸ್ವಚ್ಛ ಮನಸ್ಸಿನಿಂದ ಆನಂದ ಅನುಭವಿಸಲು ಸಾಧ್ಯವಿಲ್ಲ.

ಮೌನ, ವಿಶ್ರಾಂತಿ:

ಮೌನ ಅತ್ಯಂತ ಉತ್ತಮ ಔಷಧಿ. ನಿಮ್ಮ ಭಾವೋದ್ವೇಗವನ್ನು ಮೌನ ಕ್ರಮಬದ್ದಗೊಳಿಸುತ್ತದೆ. ಏಕಾಂತದಲ್ಲಿ ನಿಮ್ಮನ್ನು ನೀವು ತೆಗೆದುಕೊಳ್ಳಿ. ಸರಿ ತಪ್ಪುಗಳ ಬಗ್ಗೆ ವಿಮಶರ್ೆ ಮಾಡಿ. ಮನಸ್ಸು ಎಷ್ಟು ವಿಶ್ರಾಂತಗೊಳ್ಳುತ್ತದೋ ಅಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮನಸ್ಸು ಗೊಂದಲದಲ್ಲಿರುವಾಗ ಯಾವುದೇ ನಿಧರ್ಾರ ತೆಗೆದುಕೊಳ್ಳಬೇಡಿ. ಉತ್ತಮ ಆಹಾರ ಸೇವಿಸಿ. ಕಣ್ಣುತುಂಬಾ ನಿದ್ರಿಸಿ. ಇಲ್ಲಿಗೆ ಅರ್ಧ ಸಮಸ್ಯೆ ನೀಗುತ್ತದೆ. ಪ್ರಕ್ಷುಬ್ಧ ಮನಸ್ಸು ಶಾಂತವಾಗುತ್ತದೆ. ಆದರೆ ನಿದ್ದೆಗೆಂದು ಆಲ್ಕೋಹಾಲ್, ನಿದ್ದೆ ಮಾತ್ರೆಗಳ ಮೊರೆ ಹೋಗದಿರಿ. ಮನಸ್ಸು ಇನ್ನಷ್ಟು ವ್ಯಗ್ರಗೊಳ್ಳುತ್ತದೆ.

ಅಪಜಯ ಅಂಗೀಕರಿಸಿ

ಸೋಲನ್ನು ಒಪ್ಪಿಕೊಳ್ಳುವುದು ಹಿಂಸೆಯೇ ಸರಿ. ಆದರೆ ಅದು ಅನಿವಾರ್ಯ. ರಿಯಾಲಿಟಿಯನ್ನು ಸ್ವೀಕರಿಸಿ. ಸೋಲಾದಾಗ ನಿಮ್ಮಲ್ಲಿನ ದೋಷವೇನೆಂಬುದನ್ನು ಅರ್ಥ ಮಾಡಿಕೊಳ್ಳಿ. ಭವಿಷ್ಯದಲ್ಲಿ ಮತ್ತೆ ಆ ತಪ್ಪುಗಳನ್ನು ಮಾಡದಂತೆ ಕಾಳಜಿವಹಿಸಿ. ಆದರೆ ಸೋಲಿನ ವಿಮಶರ್ೆ ಮಾತ್ರ ನಿಯತ್ತಿನಲ್ಲಿ ನಡೆಯಲಿ.

ಪ್ರಕೃತಿಯನ್ನು ಆನಂದಿಸಿ

ಅರಳಿನಿಂತ ಹೂವು, ಸೂಯರ್ೋದಯ, ನವಿರಾದ ತಂಗಾಳಿ, ಮಳೆಯ ಅನುಭೂತಿ... ಪ್ರಕೃತಿ ಆನಂದದ ಅಡಿಪಾಯ. ಅವುಗಳನ್ನು ಅನುಭವಿಸಿ. ಪ್ರಪಂಚವನ್ನು ನೀವು ನೋಡುವ ನೋಟವೇ ಬದಲಾಗಿತ್ತದೆ.


ಸ್ಮೈಲ್ ಪ್ಲೀಸ್

ಕೊನೆಯದಾಗಿ ಜೀವನದಲ್ಲಿ ಘಟಿಸೋದು, ಎದುರಾಗೋದು ಎಲ್ಲವನ್ನೂ ಲೈಟ್ ಆಗಿ, ಸಿಂಪಲ್ ಸ್ಮೈಲ್ನೊಂದಿಗೆ ಸ್ವೀಕರಿಸಿ. ನಿಮ್ಮ ಲೈಫ್ ಲವ್ಲಿಯಾಗಿ ಲೈವ್ಲಿಯಾಗುವುದರಲ್ಲಿ ಸಂಶಯವಿಲ್ಲ.

ಇದೊಳ್ಳೆ ನಾಟಕ.....

ಯಾಕೋ ನಾಲ್ಕು ಗೋಡೆಗಳ ನಡುವಿನ ಬದುಕು ನಿರಸವೆನಿಸಿತ್ತು. ಮತ್ತೊಮ್ಮೆ ಹಳೆ ಲೈವ್ಲಿ ಬದುಕಿಗೆ ಕಾಲಿಡಬೇಕಿತ್ತು...ತುಂಬಾ ದಿನಗಳ ನಂತರ ಒಂದೊಳ್ಳೆ ನಾಟಕ ನೋಡಿದ. ಚಿಂತನೆಗೆ ಹಚ್ಚಿದ್ದು ಜಯಪ್ರಕಾಶ ಮಾವಿನಕುಳಿ ಅವರ ನಾಟಕ ರೂಪಾಂತರ.


ಆರು ದೃಶ್ಯಗಳಿಂದ ಕೂಡಿದ ರೂಪಾಂತರದ ಒಟ್ಟಾರೆ ಆಶಯ ಬದಲಾವಣೆ, ವ್ಯಕ್ತಿ ಸಮಾಜ, ಸಿದ್ದಾಂತ ಹೀಗೆ ಎಲ್ಲಾ ಹಂತದಲ್ಲೂ ಬದಲಾವಣೆಯನ್ನು ಬಯಸುವ ಮಾನಸಿಕ ಪ್ರಕ್ರಿಯೆಯೊಂದು ನಾಟಕದ ಒಳದನಿಯಾಗಿ ಕೆಲಸ ಮಾಡಿದೆ. ರೂಪಾಂತರ ಸಿದ್ದಾರ್ಥನ ಕಥೆ, ಬುದ್ಧನ ಕಥೆ, ಬೌದ್ಧ ಧರ್ಮದ ಕಥೆ. ಕೊನೆಗೆ ಯಶೋಧರೆಯ ವ್ಯಥೆಯ ಕಥೆ. ಯಶೋಧರೆಯ ಕಥೆಯೆಂದರೆ ಅದರಲ್ಲಿ ಯಶೋಧರಾ ನಾಟಕದ ಛಾಯೆಯಿಲ್ಲ. ಅದರ ಆಧುನಿಕ ರೂಪಾಂತರ. ರೂಪಾಂತರ ಬೌದ್ಧ ಧರ್ಮದ ಸಾಮಾಜಿಕ ಆಯಾಮಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಾದರೂ ಅದರಲ್ಲಿ ಬುದ್ಧ ಹಾಗೂ ಯಶೋಧರೆಯ ಒಳತೋಟಿಯೇ ಕಾಣಸಿಗುತ್ತದೆ.

ನಾಟಕದ ಅಧ್ಬುತ ಯಶಸ್ಸು ಇರುವುದು ಯಶೋಧರೆಯ ಪಾತ್ರ ರಚನೆಯಲ್ಲಿ. ಪತಿ ಸುಖದಿಂದ ವಂಚಿತಳಾದ ತುಂಬು ಯೌವನದ ಹೆಣ್ಣಾಗಿ, ತಾಯಿಯಾಗಿ, ಪುರುಷ ಸಮಾಜದ ಧೋರಣೆಯನ್ನು ಖಂಡಿಸುವ ಸ್ತ್ರಿಯಾಗಿ ಯಶೋಧರೆ ಮಿಂಚುತ್ತಾಳೆ.

ಅಗ್ನಿ ಸಾಕ್ಷಿಯಾಗಿ ಇಹಪರಗಳಲ್ಲಿ ಕಷ್ಟಸುಖಗಳಲ್ಲಿ ಸಮಭಾಗಿಯಾಗುತ್ತೇನೆಂದು ಪ್ರತಿಜ್ಷೆ ಮಾಡಿದ ಮೇಲೆ ಪತ್ನಿಯ ಒಪ್ಪಿಗೆಯಿಲ್ಲದೆ ಈ ವ್ಯವಸ್ಥೆಯನ್ನು ನಿರಾಕರಿಸಲು ಪುರುಷನಿಗೆ ಏನು ಅಧಿಕಾರವಿದೆ? ಇದು ಯಶೋಧರೆಯ ಮುಖ್ಯಪ್ರಶ್ನೆ ಹಾಗೂ ತಿರಸ್ಕರಿಸಲ್ಪಟ್ಟ ಎಲ್ಲಾ ಸ್ತ್ರೀಯರ ಪ್ರಶ್ನೆಯೂ ಹೌದು.

"ಹೆಣ್ಣು ಎಂದರೆ ಒಂದು ಗಿಡಮೂಲಿಕೆ ಅಲ್ಲವೇ?'' ಎಂದು ಯಶೋಧರೆ ಎಲ್ಲಾ ಸ್ತ್ರಿಯರ ಪರವಾಗಿ ಬುದ್ಧನನ್ನು ಕೇಳುತ್ತಾಳೆ. "ಮತ್ತೊಬ್ಬನನ್ನು ಕತ್ತಲೆ ಕೂಪದಲ್ಲಿ ಹಾಕಿ ಮೋಕ್ಷ ಸಾಧನೆ ಮಾಡಬೇಕೇನು? ಎನ್ನುತ್ತಾಳೆ. ಯಶೋಧರೆಯ ಈ ಎಲ್ಲಾ ಉತ್ತರಗಳಿಗೂ ಬುದ್ಧನದು "ಲೋಕ ಹಿತ'' ಎಂಬುದೇ ಉತ್ತರ. "ನನಗೆ ಉತ್ತರ ಕೊಟ್ಟು ಹೋಗಿ'' ಎಂದು ಯಶೋಧರೆ ಕೂಗುತ್ತಿರುವಾಗಲೇ ನಾಟಕವು ಮುಗಿಯುತ್ತದೆ.

ಉಳಿದಂತೆ ನಾಟಕ ಒಂದು ಹೊಸಮತ ಬರುವಾಗ ಸಲೀಸಾಗಿ ಸಮಾಜದ ಒಳಗೆ ಬರುವುದಿಲ್ಲ. ಹೊಸತನದ ಜೊತೆಗೆ ಹುಳುಕೂ ಬರಬಹುದು ಎಂಬುದನ್ನು ತಿಳಿಸುತ್ತದೆ. ನಾಟಕದ ತುಂಬೆಲ್ಲಾ ಬೌದ್ಧ ಧರ್ಮದ ಇನ್ನೊಂದು ಮುಖ ಗೋಚರಿಸುತ್ತದೆ. ಅತ್ಯಮೂಲ್ಯ ತತ್ವವೊಂದನ್ನು ಹೇಗೆ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು, ಫಲಾಯನವಾದಕ್ಕೆ ಹೇಗೆ ವೇದಿಕೆಯಾಗಬಹುದು ಎಂಬುದಕ್ಕೆ ನಾಟಕದ ಬಿಕ್ಷುಗಳ ಪಾತ್ರ ಉತ್ತರ ಕೊಡುತ್ತದೆ.

"ಹೆಂಡತಿ ಕಷ್ಟ ಇಲ್ಲ. ಊಟದ ಚಿಂತೆಯಿಲ್ಲ. ನಾಲ್ಕು ಮನೆ ಮುಂದೆ ಹೋಗು ಬುದ್ಧಂ ಶರಣಂ ಗಚ್ಛಾಮಿ ಎಂದರೆ ಸಾಕು ಯಾರೂ ಇಲ್ಲ ಎನ್ನಲ್ಲ" ಎಂಬ ಮಾತು ಬೌದ್ಧ ಧರ್ಮವನ್ನು ಸ್ವಹಿತಕ್ಕಾಗಿ ಬಳಸಿಕೊಂಡ ಒಂದು ಗುಂಪನ್ನು ಪ್ರತಿನಿಧಿಸುತ್ತದೆ. ಹಾಗೂ ಬೌದ್ಧ ಧರ್ಮದ ಅಧೋಗತಿಯ ಮನ್ಸೂಚನೆಯನ್ನೂ ನೀಡುತ್ತದೆ. ಹೊಸ ಧರ್ಮಕ್ಕೆ ಸೇರಿಯೂ ಹೆಣ್ಣು ಹೊನ್ನುಗಳ ವ್ಯಾಮೋಹವನ್ನು ಬಿಡದಿರುವ ಬಿಕ್ಷುಗಳು ಇವರೇ ನಾಟಕದಲ್ಲಿ ತುಂಬಿದ್ದಾರೆ.

ಒಟ್ಟಿನಲ್ಲಿ ಜಯಪ್ರಕಾಶ ಮಾವಿನಕುಳಿಯವರ "ರೂಪಾಂತರ'' ನಾಟಕ ಹೊಸ ದೃಷ್ಠಿಕೋನಕ್ಕೆ ಕನ್ನಡಿ ಹಿಡಿದಿದೆ.

ಭುವನೇಂದ್ರ ಕಾಲೇಜಿನ ರಂಗತಂಡ ಭುವನರಂಗ ಹೊಸ ಹೆಜ್ಜೆ ಇಟ್ಟಿದೆ. ಈ ವರ್ಷವಷ್ಟೇ ಹುಟ್ಟಿಕೊಂಡ ಕಾಲೇಜುರಂಗ ಭೂಮಿ ಉತ್ತಮ ನಾಟಕವೊಂದನ್ನು ಪ್ರೇಕ್ಷಕರಿಗೆ ಕಟ್ಟಿಕೊಂಡಿದೆ. ರಾಷ್ಟ್ರೀಯ ನಾಟಕ ಶಾಲೆಯ ಪಧವಿದರೆ ಎಸ್.ಮಾಲತಿ ಅವರ ನಿದರ್ೇಶನದಲ್ಲಿ ಕಾಲೇಜಿನ ರಂಗತಂಡ ಯಾವ ನುರಿತ ಕಲಾವಿದರಿಗೂ ಕಮ್ಮಿಯಿಲ್ಲ ಎಂಬುದನ್ನು ಸಾಭೀತುಪಡಿಸಿದೆ.

ಬುದ್ಧನ ಪಾತ್ರ ನಿರ್ವಹಿಸಿದ ಉಪನ್ಯಾಸಕ ಸುಧೀಂದ್ರ ನುರಿತ ಕಲಾವಿದ ಎಂಬುದನ್ನು ಪ್ರಾಮಾಣಿಕರಿಸಿದ್ದಾರೆ. ಯಶೋಧರೆಯ ಪಾತ್ರಕ್ಕೆ ಜೀವ ತುಂಬಿದ ಸ್ವಾತಿ ಎಂ. ನಾಟಕದ ಪ್ರಮುಖ ಆಕರ್ಷಣೆ. ಆಮ್ರಪಾಲಿ ಪಾತ್ರ ನಿರ್ವಹಿಸಿದ ಶ್ರುತಿ ರಾವ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ನಾಟಕದ ಕೇಂದ್ರ ಬಿಂದು ಸೂತ್ರದಾನ ಪಾತ್ರ ನಿರ್ವಹಿಸಿದ ಲೋಹಿತ್ ಎಸ್.ಕೆ. ಕೆ.ವಿಕ್ರಮ ನಾಯಕ್,ಎಂ.ಮಾಳವಿಕಾ, ಪ್ರಶಾಂತ್ ಪ್ರಭು,ಮಹೇಶ್ ಕುಮಾರ್,ವೆಂಕಟ್ರಾಜ್, ಶ್ರುತಿ ರಾವ್, ಕಾವ್ಯ.ಎನ್.ಡಿ,ವಿಘ್ನೇಷ್, ಗೌತಮಿ,ಚಂದ್ರಶೇಖರ್, ದೀಕ್ಷಿತ್, ಸಂತೋಷ್ ಪ್ರಭು, ಸುಬ್ರಹ್ಮಣ್ಯ, ಪ್ರಮೋದ್ ಕುಮಾರ್, ಪ್ರಥಮ್ ಕುಮಾರ್, ನಿಖಿಲಾ ಉಡುಪ, ವೀಣಾ, ಶ್ರುತಿ ಬಿ, ಸ್ಮಿತಾ, ಪ್ರಮಿಳ, ಅಮೃತಾ ರಂಗದ ಮೇಲಿದ್ದಾರೆ.

ಸತ್ಯನಾರಾಯಣ ಹೊನ್ನಾವರ ಹಾಗೂ ಉದಯಭಂಡಾರಿ ಹೊಳೆಗದ್ದೆ ಸಂಗೀತದಲ್ಲಿ ಕೆಲಸ ಮಾಡಿದ್ದಾರೆ. ವೇಷಭೂಷಣಗಳಿಂದ ನಾಟಕವನ್ನು ಇನ್ನಷ್ಟು ಚಂದವಾಗಿಸಿದವರು ಪುರುಷೋತ್ತಮ ತಲವಾಟ. ಪ್ರವೀಣ ಹಾಲ್ಮತ್ತೂರು ಬೆಳಕು ನೀಡಿದ್ದಾರೆ.

Monday, August 30, 2010

ಸಿನಿಮಾಕೆ ಹೋಗೋಣ ಬಾರಾ...

ಸಿನಿಮಾವನ್ನು 'ವಂಡರ್' ಆಗಿಯೇ ನೋಡಬೇಕೆಂದಿಲ್ಲ. ಸ್ವಲ್ಪ ಜಾಗೃತಾವಸ್ಥೆ ಇದ್ದರೆ ಸಾಕು. ಇಲ್ಲದಿದ್ದರೆ ನಮ್ಮೆಲ್ಲಾ ಜೀವನ ಶೈಲಿಯನ್ನು, ಹಾವಭಾವವನ್ನು, ನಿರ್ಧಾರಗಳನ್ನು ರೂಪಿಸುವ ಈ ಬೃಹತ್ ಮಾದ್ಯಮಕ್ಕೆ ಮರುಳಾಗಿ ವಂಡರ್ ಲೋಕದಲ್ಲಿಯೇ ಇರುತ್ತೇವೆ. ಪ್ರಪಂಚದ ಹಾಗೂ ಬದುಕಿನ ಎಲ್ಲಾ ಸಂಗತಿಗಳನ್ನು ಒಳಗೊಂಡ ಸಿನಿಮಾ ನಮ್ಮನ್ನು ನಿಮ್ಮನ್ನು ಮೂರ್ಖರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಬದಲಾಗಿ ಅರ್ಥ ಮಾಡಿಕೊಂಡರೆ ಸಿನಿಮಾ 'ಚಂದ'ವಾಗಿ ಕಾಣಿಸುತ್ತದೆ. ಈ ಚಂದ ನಿಮ್ಮನ್ನು ಚಿಂತನೆಗೆ ಹಚ್ಚುತ್ತದೆ. ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸುತ್ತದೆ.


ಹೀಗೆ ನೋಡಿ ಸಿನಿಮಾ.

ಮಬ್ಬುಗತ್ತಲು. ಪರದೆಯಲ್ಲಿ ಚಲಿಸುತ್ತಿರುವ ಚಿತ್ರಗಳು ಮನಸ್ಸನ್ನು ಹಿಡಿದಿಟ್ಟಿವೆ. ಅಮಲಿನತ್ತ ಚಿತ್ತವನ್ನು ಕೊಂಡೊಯ್ದಿದೆ. ಪ್ರೇಕ್ಷಕ ತಲ್ಲಿನನಾಗಿ ಬಿಟ್ಟಿದ್ದಾನೆ... ಇದು ಸಿನಿಮಾ. ಸಿನಿಮಾದ ಶಕ್ತಿಯೇ ಅಂತದ್ದು ಒಂದು ಪರದೆಯೊಳಗೆ ನಮ್ಮೆಲ್ಲಾ ಏಕಾಗ್ರತೆಯನ್ನು ಹಿಡಿದಿಡುತ್ತದೆ.ಸಿನಿಮಾ ಎಂದರೆ ಸಾಮಾನ್ಯವಾಗಿ ಅದು 'ಸುಂದರ'. ಅಲ್ಲಿ ಹಿರೋಯಿನ್ ಕಣ್ಣಿರು 'ಚಂದ'. ಹಿರೋನ ಅಬ್ಬರ ಸೂಪರ್. ಪ್ರೇಯಸಿಯ ಮಡಿಲಲ್ಲಿ ಪ್ರಾಣ ಬಿಡುವ ನಾಯಕನೂ ಚೆಂದವಾಗಿಯೇ ಕಾಣುತ್ತಾನೆ. ಸಿನಿಮಾ ತೆಗೆಯೋದೇ ಒಂದು ಚಂದಕ್ಕಾಗಿ. ಈ ಚೆಂದ ಖುಷಿಯ ಅಮಲನ್ನು ತಂದುಕೊಡುತ್ತದೆ. ಈ ಖುಷಿಯ ಅಮಲಿಗೆ ಮರುಳಾಗುವ ಮುನ್ನ ಸಣ್ಣ ಎಚ್ಚರವಿದ್ದರೆ ಸಿನಿಮಾ ಅರ್ಥ''ವಾಗುತ್ತದೆ. ಸಿನಿಮಾ 'ನೋಡುವ ಕಲೆ' ನಿಮ್ಮದಾಗುತ್ತದೆ. ಸಾಹಿತ್ಯಿಕ ಭಾಷೆಯಲ್ಲಿ ಅದನ್ನು 'ಅಫ್ರಿಶಿಯೇಷನ್' ಅಂತಾನೂ ಕರೆಯಬಹುದು. ಬೇಕಾದುದು ಸಣ್ಣ ಎಚ್ಚರ ಅಷ್ಟೆ. ಆದರೆ ಈ ಎಚ್ಚರ ಮೊದಲ ವೀಕ್ಷಣೆಯಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಸಿನಿಮಾದ ಕಥೆ ನಿಮ್ಮನ್ನು ಮರುಳು ಮಾಡಿಬಿಡುತ್ತದೆ. ಎರಡನೇ ಸಲ ನೋಡಿ ಆಗ ಸಿನಿಮಾ ಅರ್ಥವಾಗುತ್ತದೆ.


ಕ್ಯಾಮರಾ ಕಣ್ಣು
ಸಿನಿಮಾ ವೀಕ್ಷಣೆಗೆ ದಿನನಿತ್ಯದ ಆಗುಹೋಗುಗಳ ವೀಕ್ಷಣೆಗೂ ವ್ಯತ್ಯಾಸ ಇದೆ. ಸಿನಿಮಾವನ್ನು ನಾವು ಕ್ಯಾಮರಾ ಕಣ್ಣಿನಲ್ಲಿ ನೋಡುತ್ತೇವೆ. ಇಲ್ಲಿ ನಿರ್ದೇಶಕ ಯಾವುದನ್ನು ಪ್ರೇಕ್ಷಕರಿಗೆ ತೋರಿಸಬೇಕು ಎಂದು ಬಯಸುತ್ತಾನೋ ಅದನ್ನು ಮಾತ್ರ ನೀಡುತ್ತಾನೆ. ಸುತ್ತಲಿನ ಪ್ರಪಂಚ ನೋಡುವಾಗಿನ 'ಚಾಯ್ಸ್' ಇಲ್ಲಿ ಇಲ್ಲ. ನಿರ್ದೇಶಕ ಏನು ನೀಡುತ್ತಾನೋ ಅದನ್ನು ಮಾತ್ರ ನೋಡಬೇಕು. ಶಬ್ದ ಅಥವಾ ಮಾತಿನ ವಿಷಯಕ್ಕೆ ಬಂದರೆ ಸೌಂಡ್ ರೆಕಾಾಾರ್ಡಿಂಗ್ ಏನಾಗಿದೆಯೋ ಅದು ಮಾತ್ರ ನಮಗೆ ಕೇಳಿಸುತ್ತದೆ. ಸಿನಿಮಾ ನೋಡುವಾಗ ಈ ಅರಿವು ನಿಮ್ಮಲ್ಲಿ ಇರಲಿ.ಏನು ಹೇಳಿತು? ಎಷ್ಟು ಹೇಳಿತು? ಕ್ಯಾಮರಾ ಚಲಿಸುತ್ತಿದೆ ಎಂಬ ಗಮನ ಇದ್ದರೆ ಸಿನಿಮಾ ಏನು ಹೇಳಿತು ಎಷ್ಟು ಹೇಳಿತು ಮತ್ತು ಹೇಗೆ ಹೇಳಿತು ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಒಂದು ದೃಶ್ಯವನ್ನು ಯಾವ ಅರ್ಥಕ್ಕಾಗಿ ಹೇಳಿತು ಮತ್ತು ಹೊಸ ರೀತಿಯಾಗಿ ಹೇಳಿತೇ ಎಂಬ ಬಗ್ಗೆ ಗಮನಿಸಿ. ಗಿರೀಶ್ ಕಾಸರವಳ್ಳಿ ಅವರ ಸಿನಿಮಾ ದ್ವೀಪದಲ್ಲಿ ಕೊನೆಯ ದೃಶ್ಯವನ್ನು ಗಮನಿಸಿ. ನಟ ಅವಿನಾಶ್, ನಟಿ ಸೌಂದರ್ಯ ಹಾಗೂ ನೀರು ಈ ದೃಶ್ಯವನ್ನು ನೋಡಿ. ನಿರ್ದೇಶಕ ಅದನ್ನು ಯಾಕಾಗಿ ಹಾಕಿದ ಮತ್ತು ಯಾವ ರೀತಿ ಪ್ರಸ್ತುತಪಡಿಸಿದ ಎಂಬ ಬಗ್ಗೆ ಚಿಂತಿಸಿ ನೋಡಿ. ದ್ವೀಪ 'ಅರ್ಥ'ವಾಗುತ್ತದೆ.

ಸುತ್ತಲಿನ ಪರಿಸರ
ಸಿನಿಮಾದಲ್ಲಿ ನಟ ನಟಿಯರನ್ನು ಬಿಟ್ಟು ಇತರ ಸಂಗತಿಗಳನ್ನು ಎಷ್ಟು ಹೇಳಿತು ಎಂಬುದನ್ನು ನೋಡಿಕೊಳ್ಳಿ. ಕೇವಲ ನಟನಟಿಯರಿದ್ದರೆ ಸಿನಿಮಾ ಆಗುವುದಿಲ್ಲ. ಸುತ್ತಲಿನ ಪ್ರಕೃತಿಯನ್ನು ಒಳಗೊಂಡಾಗ ಮಾತ್ರ ಅಲ್ಲೊಂದು ಭಾವ ಸ್ಪುರಿಸುತ್ತದೆ. ಇದಕ್ಕಾಗಿಯೇ 'ಮುಂಗಾರು ಮಳೆ' ಯಾಕೆ ಯಶಸ್ವಿಯಾಯಿತು ಎಂಬ ಬಗ್ಗೆ ಸ್ವಲ್ಪ ಯೋಚಿಸಿದರೆ ನಿಮಗರ್ಥವಾಗುತ್ತದೆ. ಮಳೆ ಮತ್ತು ಪ್ರಕೃತಿಯನ್ನು ಕ್ಯಾಮರಾದಲ್ಲಿ ಹಿಡಿದಿಟ್ಟ ರೀತಿಯೇ ಸುಂದರ ಅದಕ್ಕಾಗಿ ಸಿನಿಮಾ 'ಚಂದ'ವಾಯಿತು. ಗಿರೀಶ್ ಕಾಸರವಳ್ಳಿ ಅವರ ದ್ವೀಪ ಚಿತ್ರವನ್ನು ಮತ್ತೊಮ್ಮೆ ಇಲ್ಲಿ ನೆನಯಬಹುದು. ಅವರು ನೀರು ಹಾಗೂ ಬೆಂಕಿಯನ್ನು ಸಮರ್ಥವಾಗಿ ಬಳಸಿಕೊಂಡ ರೀತಿ ಗಮನಿಸಿ. ದೀಪಾ ಮೆಹ್ತಾ ಅವರ 'ವಾಟರ್' ಚಿತ್ರಕೂಡಾ ಪ್ರಕೃತಿಯ ಮೂಲಕವೇ ಕಥೆಯನ್ನು ಹೇಳಿದೆ ಎಂಬುದನ್ನು ಸ್ಮರಿಸಬಹುದು.


ಎಷ್ಟು ಹೊತ್ತು
ಸಿನಿಮಾ ಯಾವತ್ತೂ ರಿಯಲ್ ಸ್ಪೀಡ್ನಲ್ಲಿ ನಡೆಯುವುದಿಲ್ಲ. ಕೆಲವು ಸನ್ನಿವೇಶಗಳನ್ನು ಬೇಗ ತೋರಿಸಬಹುದು ಇನ್ನ ಕೆಲವನ್ನು ನಿಧಾನವಾಗಿ ತೋರಿಸಬಹುದು. ಎಲ್ಲದರ ಉದ್ದೇಶವೆಂದರೆ ಏನನ್ನು ಹೇಳಬೇಕೋ ಅದನ್ನು ಹೇಳುವುದು. ಯಾವ ರೀತಿ ಹೇಳಿದರೆ ಸಿನಿಮಾದ ಚೆಲುವು ಇಮ್ಮಡಿಸುತ್ತದೆ ಎಂಬುದನ್ನು  ನಿರ್ದೇಶಕ ನಿರ್ಧರಿಸುತ್ತಾನೆ. ಪ್ರೇಕ್ಷಕರ ಉಸಿರು ಬಿಗಿ ಹಿಡಿಯುವಂತೆ ಮಾಡಲು ನಿರ್ದೇಶಕ ನಿಧಾನ ತಂತ್ರವನ್ನು ಬಳಸುತ್ತಾನೆ ಅಥವಾ ಅನಿರೀಕ್ಷಿವಾದುದನ್ನ ತಿಳಿಸಲು ಈ ತಂತ್ರ ಸಹಾಯವಾಗುತ್ತದೆ. ಅದಕ್ಕಾಗಿಯೇ ನಾಯಕ ಪ್ರಾಣ ಬಿಡುವ ಅಥವಾ ಪ್ರಾಣ ತೆಗೆಯುವ ಸಂದರ್ಭದಲ್ಲಿ ಬುಲೆಟ್ ನಿಧಾನವಾಗಿ ಸಾಗುತ್ತದೆ,. ನೆರೆದವರ ಮನದಲ್ಲಿ ದಿಗಿಲು ಆಶ್ಚರ್ಯ ಮನೆಮಾಡಿರುತ್ತದೆ... ಕೆಲವು ಸೆಕೆಂಡ್ ಗಳ ಕಾಲ ಈ ದೃಶ್ಯ ಪರದೆಯ ಮೇಲಿರುತ್ತದೆ. ಕಥೆ ಮುಂದುವರೆಯಲು ಕೆಲವೊಂದು ಸನ್ನಿವೇಶ ಪ್ರಮುಖ ಎಂದೆನಿಸಿದರೆ ಅದನ್ನು ಬೇಗ ತೋರಿಸಿಬಿಡುತ್ತಾನೆ. ಆದರೆ ಸಿನಿಮಾದ ಕಥೆಯ ಅಮಲಿನಲ್ಲಿ ಮುಳುಗಿದರೆ ಮಾತ್ರ ಇದನ್ನು ಗಮನಿಸಲು ಸಾಧ್ಯವಾಗುವುದಿಲ್ಲ.

ಸಂಗೀತ
ಸಿನಿಮಾ ಸಂಗೀತವೊಂದಿದೆ. ಅದು ಯಾವ ಸಂಗೀತ ಪ್ರಕಾರವೂ ಅಲ್ಲ. ಸಿನಿಮಾ ಸಂಗೀತ ಕೆಲವೊಮ್ಮೆ ಇರುತ್ತದೆ ಕೆಲವೊಮ್ಮೆ ಇರುವುದಿಲ್ಲ. ಕೆಲವೊಮ್ಮೆ ಹೆಚ್ಚಾಗುತ್ತದೆ. ಮಗದೊಮ್ಮೆ ಕಡಿಮೆಯಾಗುತ್ತದೆ ಇದನ್ನು ಗಮನಿಸಿದ್ದೀರಾ?. ಈ ಸಂಗೀತ ಸಿನಿಮಾಕ್ಕೆ ಹೊಸ ಅರ್ಥವನ್ನು ಕೊಡುತ್ತದೆ. ಸಂಗೀತ ಹೊಸತನವನ್ನು ನೀಡಿದೆಯಾ? ಎಂಬುದನ್ನು ಗಮನಿಸಬೇಕು.

ಮೌನ
ಶಬ್ದಕ್ಕಿಂತ ಹೆಚ್ಚಿನದನ್ನು ಮೌನ ಹೇಳುತ್ತದೆ. ಇಲ್ಲಿ ಮೌನ ಮಾತನಾಡುತ್ತದೆ. ಭೀಕರವಾದುದನ್ನು, ಆಶ್ಚರ್ಯವಾದುದನ್ನು ಸಮರ್ಥವಾಗಿ ಹೇಳುವುದೆಂದರೆ ಅದು ಮೌನ. ಮಾತಲ್ಲ. ಒಮ್ಮೊಮ್ಮೆ ಸಿನಿಮಾದ ಕ್ಲೈಮಾಕ್ಸ್ ಹೇಳಲು  ನಿರ್ದೇಶಕ ಮೌನದ ಮೊರೆ ಹೋಗುತ್ತಾನೆ. ಈ ಮೌನ ಸಿನಿಮಾದಲ್ಲಿ ಎಷ್ಟು ಸಲ ಬಳಕೆಯಾಗಿದೆ. ಇದರಿಂದ ಏನು ಹೇಳಲು ಸಾಧ್ಯವಾಯಿತು ಎಂಬುದನ್ನು ಗಮನಿಸಿ. ಸಿನಿಮಾದಲ್ಲಿ ಕೊಲೆಯಾಯಿತು ಎಂದಿಟ್ಟುಕೊಳ್ಳಿ ಅಲ್ಲಿ ಪ್ರಾಣ ಬಿಟ್ಟವನು ಗೋಳಿಡಬೇಕೆಂದಿಲ್ಲ. ನೀರವ ಮೌನವೊಂದಿದ್ದರೆ ಸಾಕಲ್ಲವೆ?.

ಕತ್ತಲು
ಸಿನಿಮಾದಲ್ಲಿ ಬೆಳಕಿನಷ್ಟೇ ಪ್ರಾಮುಖ್ಯತೆ ಕತ್ತಲಿಗಿರುತ್ತದೆ. ಇದು ಸಿನಿಮಾಕ್ಕೆ ನ್ಯಾಚುರಲ್ ಎಫೆಕ್ಟ್ ನೀಡುತ್ತದೆ. ಒಮ್ಮೊಮ್ಮೆ ಸಿನಿಮಾ ಬದುಕಿಗೆ ಹತ್ತಿರವಾಗಲು ಈ ಶೈಲಿಯೂ ಕಾರಣವಾಗುತ್ತದೆ. ಜಾಗತಿಕ ಸಿನಿಮಾದತ್ತ ಕಣ್ಣು ಹಾಯಿಸಿದರೆ ಮಬ್ಬುಗತ್ತಲಿನಲ್ಲಿ ಸಿನಿಮಾ ತಗೆಯುವ ನಿರ್ದೇಶಕರಿದ್ದಾರೆ.
ಇಷ್ಟೆಲ್ಲಾ ಸಂಗತಿಗಳನ್ನು ಒಳಗೊಂಡ ಸಿನಿಮಾದಲ್ಲಿ ಕೆಲವೊಂದು ಅಂಶಗಳನ್ನಾದರೂ ಗಮನಿಸದಿದ್ದರೆ ನಾವು ಮೋಸ ಹೋಗಿ ಬಿಡುತ್ತೇವೆ. ನಾವು ಸಿನಿಮಾವನ್ನು 'ವಂಡರ್' ಆಗಿಯೇ ನೋಡಬೇಕೆಂದಿಲ್ಲ. ಸ್ವಲ್ಪ ಜಾಗೃತಾವಸ್ಥೆ ಇದ್ದರೆ ಸಾಕು. ಇಲ್ಲದಿದ್ದರೆ ನಮ್ಮೆಲ್ಲಾ ಜೀವನ ಶೈಲಿಯನ್ನು, ಹಾವಭಾವವನ್ನು, ನಿಧರ್ಾರಗಳನ್ನು ರೂಪಿಸುವ ಈ ಬೃಹತ್ ಮಾದ್ಯಮಕ್ಕೆ ಮರುಳಾಗಿ ವಂಡರ್ ಲೋಕದಲ್ಲಿಯೇ ಇರುತ್ತೇವೆ. ಪ್ರಪಂಚದ ಹಾಗೂ ಬದುಕಿನ ಎಲ್ಲಾ ಸಂಗತಿಗಳನ್ನು ಒಳಗೊಂಡ ಸಿನಿಮಾ ನಮ್ಮನ್ನು ನಿಮ್ಮನ್ನು ಮೂರ್ಖರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಬದಲಾಗಿ ಅರ್ಥ ಮಾಡಿಕೊಂಡರೆ ಸಿನಿಮಾ 'ಚಂದ'ವಾಗಿ ಕಾಣಿಸುತ್ತದೆ. ಈ ಚಂದ ನಿಮ್ಮನ್ನು ಚಿಂತನೆಗೆ ಹಚ್ಚುತ್ತದೆ. ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸುತ್ತದೆ.

-ಗೀತಾ  ವಸಂತ್ ಇಜಿಮಾನ್