Tuesday, August 31, 2010

ಇದೊಳ್ಳೆ ನಾಟಕ.....

ಯಾಕೋ ನಾಲ್ಕು ಗೋಡೆಗಳ ನಡುವಿನ ಬದುಕು ನಿರಸವೆನಿಸಿತ್ತು. ಮತ್ತೊಮ್ಮೆ ಹಳೆ ಲೈವ್ಲಿ ಬದುಕಿಗೆ ಕಾಲಿಡಬೇಕಿತ್ತು...ತುಂಬಾ ದಿನಗಳ ನಂತರ ಒಂದೊಳ್ಳೆ ನಾಟಕ ನೋಡಿದ. ಚಿಂತನೆಗೆ ಹಚ್ಚಿದ್ದು ಜಯಪ್ರಕಾಶ ಮಾವಿನಕುಳಿ ಅವರ ನಾಟಕ ರೂಪಾಂತರ.


ಆರು ದೃಶ್ಯಗಳಿಂದ ಕೂಡಿದ ರೂಪಾಂತರದ ಒಟ್ಟಾರೆ ಆಶಯ ಬದಲಾವಣೆ, ವ್ಯಕ್ತಿ ಸಮಾಜ, ಸಿದ್ದಾಂತ ಹೀಗೆ ಎಲ್ಲಾ ಹಂತದಲ್ಲೂ ಬದಲಾವಣೆಯನ್ನು ಬಯಸುವ ಮಾನಸಿಕ ಪ್ರಕ್ರಿಯೆಯೊಂದು ನಾಟಕದ ಒಳದನಿಯಾಗಿ ಕೆಲಸ ಮಾಡಿದೆ. ರೂಪಾಂತರ ಸಿದ್ದಾರ್ಥನ ಕಥೆ, ಬುದ್ಧನ ಕಥೆ, ಬೌದ್ಧ ಧರ್ಮದ ಕಥೆ. ಕೊನೆಗೆ ಯಶೋಧರೆಯ ವ್ಯಥೆಯ ಕಥೆ. ಯಶೋಧರೆಯ ಕಥೆಯೆಂದರೆ ಅದರಲ್ಲಿ ಯಶೋಧರಾ ನಾಟಕದ ಛಾಯೆಯಿಲ್ಲ. ಅದರ ಆಧುನಿಕ ರೂಪಾಂತರ. ರೂಪಾಂತರ ಬೌದ್ಧ ಧರ್ಮದ ಸಾಮಾಜಿಕ ಆಯಾಮಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಾದರೂ ಅದರಲ್ಲಿ ಬುದ್ಧ ಹಾಗೂ ಯಶೋಧರೆಯ ಒಳತೋಟಿಯೇ ಕಾಣಸಿಗುತ್ತದೆ.

ನಾಟಕದ ಅಧ್ಬುತ ಯಶಸ್ಸು ಇರುವುದು ಯಶೋಧರೆಯ ಪಾತ್ರ ರಚನೆಯಲ್ಲಿ. ಪತಿ ಸುಖದಿಂದ ವಂಚಿತಳಾದ ತುಂಬು ಯೌವನದ ಹೆಣ್ಣಾಗಿ, ತಾಯಿಯಾಗಿ, ಪುರುಷ ಸಮಾಜದ ಧೋರಣೆಯನ್ನು ಖಂಡಿಸುವ ಸ್ತ್ರಿಯಾಗಿ ಯಶೋಧರೆ ಮಿಂಚುತ್ತಾಳೆ.

ಅಗ್ನಿ ಸಾಕ್ಷಿಯಾಗಿ ಇಹಪರಗಳಲ್ಲಿ ಕಷ್ಟಸುಖಗಳಲ್ಲಿ ಸಮಭಾಗಿಯಾಗುತ್ತೇನೆಂದು ಪ್ರತಿಜ್ಷೆ ಮಾಡಿದ ಮೇಲೆ ಪತ್ನಿಯ ಒಪ್ಪಿಗೆಯಿಲ್ಲದೆ ಈ ವ್ಯವಸ್ಥೆಯನ್ನು ನಿರಾಕರಿಸಲು ಪುರುಷನಿಗೆ ಏನು ಅಧಿಕಾರವಿದೆ? ಇದು ಯಶೋಧರೆಯ ಮುಖ್ಯಪ್ರಶ್ನೆ ಹಾಗೂ ತಿರಸ್ಕರಿಸಲ್ಪಟ್ಟ ಎಲ್ಲಾ ಸ್ತ್ರೀಯರ ಪ್ರಶ್ನೆಯೂ ಹೌದು.

"ಹೆಣ್ಣು ಎಂದರೆ ಒಂದು ಗಿಡಮೂಲಿಕೆ ಅಲ್ಲವೇ?'' ಎಂದು ಯಶೋಧರೆ ಎಲ್ಲಾ ಸ್ತ್ರಿಯರ ಪರವಾಗಿ ಬುದ್ಧನನ್ನು ಕೇಳುತ್ತಾಳೆ. "ಮತ್ತೊಬ್ಬನನ್ನು ಕತ್ತಲೆ ಕೂಪದಲ್ಲಿ ಹಾಕಿ ಮೋಕ್ಷ ಸಾಧನೆ ಮಾಡಬೇಕೇನು? ಎನ್ನುತ್ತಾಳೆ. ಯಶೋಧರೆಯ ಈ ಎಲ್ಲಾ ಉತ್ತರಗಳಿಗೂ ಬುದ್ಧನದು "ಲೋಕ ಹಿತ'' ಎಂಬುದೇ ಉತ್ತರ. "ನನಗೆ ಉತ್ತರ ಕೊಟ್ಟು ಹೋಗಿ'' ಎಂದು ಯಶೋಧರೆ ಕೂಗುತ್ತಿರುವಾಗಲೇ ನಾಟಕವು ಮುಗಿಯುತ್ತದೆ.

ಉಳಿದಂತೆ ನಾಟಕ ಒಂದು ಹೊಸಮತ ಬರುವಾಗ ಸಲೀಸಾಗಿ ಸಮಾಜದ ಒಳಗೆ ಬರುವುದಿಲ್ಲ. ಹೊಸತನದ ಜೊತೆಗೆ ಹುಳುಕೂ ಬರಬಹುದು ಎಂಬುದನ್ನು ತಿಳಿಸುತ್ತದೆ. ನಾಟಕದ ತುಂಬೆಲ್ಲಾ ಬೌದ್ಧ ಧರ್ಮದ ಇನ್ನೊಂದು ಮುಖ ಗೋಚರಿಸುತ್ತದೆ. ಅತ್ಯಮೂಲ್ಯ ತತ್ವವೊಂದನ್ನು ಹೇಗೆ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು, ಫಲಾಯನವಾದಕ್ಕೆ ಹೇಗೆ ವೇದಿಕೆಯಾಗಬಹುದು ಎಂಬುದಕ್ಕೆ ನಾಟಕದ ಬಿಕ್ಷುಗಳ ಪಾತ್ರ ಉತ್ತರ ಕೊಡುತ್ತದೆ.

"ಹೆಂಡತಿ ಕಷ್ಟ ಇಲ್ಲ. ಊಟದ ಚಿಂತೆಯಿಲ್ಲ. ನಾಲ್ಕು ಮನೆ ಮುಂದೆ ಹೋಗು ಬುದ್ಧಂ ಶರಣಂ ಗಚ್ಛಾಮಿ ಎಂದರೆ ಸಾಕು ಯಾರೂ ಇಲ್ಲ ಎನ್ನಲ್ಲ" ಎಂಬ ಮಾತು ಬೌದ್ಧ ಧರ್ಮವನ್ನು ಸ್ವಹಿತಕ್ಕಾಗಿ ಬಳಸಿಕೊಂಡ ಒಂದು ಗುಂಪನ್ನು ಪ್ರತಿನಿಧಿಸುತ್ತದೆ. ಹಾಗೂ ಬೌದ್ಧ ಧರ್ಮದ ಅಧೋಗತಿಯ ಮನ್ಸೂಚನೆಯನ್ನೂ ನೀಡುತ್ತದೆ. ಹೊಸ ಧರ್ಮಕ್ಕೆ ಸೇರಿಯೂ ಹೆಣ್ಣು ಹೊನ್ನುಗಳ ವ್ಯಾಮೋಹವನ್ನು ಬಿಡದಿರುವ ಬಿಕ್ಷುಗಳು ಇವರೇ ನಾಟಕದಲ್ಲಿ ತುಂಬಿದ್ದಾರೆ.

ಒಟ್ಟಿನಲ್ಲಿ ಜಯಪ್ರಕಾಶ ಮಾವಿನಕುಳಿಯವರ "ರೂಪಾಂತರ'' ನಾಟಕ ಹೊಸ ದೃಷ್ಠಿಕೋನಕ್ಕೆ ಕನ್ನಡಿ ಹಿಡಿದಿದೆ.

ಭುವನೇಂದ್ರ ಕಾಲೇಜಿನ ರಂಗತಂಡ ಭುವನರಂಗ ಹೊಸ ಹೆಜ್ಜೆ ಇಟ್ಟಿದೆ. ಈ ವರ್ಷವಷ್ಟೇ ಹುಟ್ಟಿಕೊಂಡ ಕಾಲೇಜುರಂಗ ಭೂಮಿ ಉತ್ತಮ ನಾಟಕವೊಂದನ್ನು ಪ್ರೇಕ್ಷಕರಿಗೆ ಕಟ್ಟಿಕೊಂಡಿದೆ. ರಾಷ್ಟ್ರೀಯ ನಾಟಕ ಶಾಲೆಯ ಪಧವಿದರೆ ಎಸ್.ಮಾಲತಿ ಅವರ ನಿದರ್ೇಶನದಲ್ಲಿ ಕಾಲೇಜಿನ ರಂಗತಂಡ ಯಾವ ನುರಿತ ಕಲಾವಿದರಿಗೂ ಕಮ್ಮಿಯಿಲ್ಲ ಎಂಬುದನ್ನು ಸಾಭೀತುಪಡಿಸಿದೆ.

ಬುದ್ಧನ ಪಾತ್ರ ನಿರ್ವಹಿಸಿದ ಉಪನ್ಯಾಸಕ ಸುಧೀಂದ್ರ ನುರಿತ ಕಲಾವಿದ ಎಂಬುದನ್ನು ಪ್ರಾಮಾಣಿಕರಿಸಿದ್ದಾರೆ. ಯಶೋಧರೆಯ ಪಾತ್ರಕ್ಕೆ ಜೀವ ತುಂಬಿದ ಸ್ವಾತಿ ಎಂ. ನಾಟಕದ ಪ್ರಮುಖ ಆಕರ್ಷಣೆ. ಆಮ್ರಪಾಲಿ ಪಾತ್ರ ನಿರ್ವಹಿಸಿದ ಶ್ರುತಿ ರಾವ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ನಾಟಕದ ಕೇಂದ್ರ ಬಿಂದು ಸೂತ್ರದಾನ ಪಾತ್ರ ನಿರ್ವಹಿಸಿದ ಲೋಹಿತ್ ಎಸ್.ಕೆ. ಕೆ.ವಿಕ್ರಮ ನಾಯಕ್,ಎಂ.ಮಾಳವಿಕಾ, ಪ್ರಶಾಂತ್ ಪ್ರಭು,ಮಹೇಶ್ ಕುಮಾರ್,ವೆಂಕಟ್ರಾಜ್, ಶ್ರುತಿ ರಾವ್, ಕಾವ್ಯ.ಎನ್.ಡಿ,ವಿಘ್ನೇಷ್, ಗೌತಮಿ,ಚಂದ್ರಶೇಖರ್, ದೀಕ್ಷಿತ್, ಸಂತೋಷ್ ಪ್ರಭು, ಸುಬ್ರಹ್ಮಣ್ಯ, ಪ್ರಮೋದ್ ಕುಮಾರ್, ಪ್ರಥಮ್ ಕುಮಾರ್, ನಿಖಿಲಾ ಉಡುಪ, ವೀಣಾ, ಶ್ರುತಿ ಬಿ, ಸ್ಮಿತಾ, ಪ್ರಮಿಳ, ಅಮೃತಾ ರಂಗದ ಮೇಲಿದ್ದಾರೆ.

ಸತ್ಯನಾರಾಯಣ ಹೊನ್ನಾವರ ಹಾಗೂ ಉದಯಭಂಡಾರಿ ಹೊಳೆಗದ್ದೆ ಸಂಗೀತದಲ್ಲಿ ಕೆಲಸ ಮಾಡಿದ್ದಾರೆ. ವೇಷಭೂಷಣಗಳಿಂದ ನಾಟಕವನ್ನು ಇನ್ನಷ್ಟು ಚಂದವಾಗಿಸಿದವರು ಪುರುಷೋತ್ತಮ ತಲವಾಟ. ಪ್ರವೀಣ ಹಾಲ್ಮತ್ತೂರು ಬೆಳಕು ನೀಡಿದ್ದಾರೆ.

No comments:

Post a Comment