Friday, September 12, 2025

ನಕಲಿ ವಿಡಿಯೋಗಳ ಸತ್ಯಾಸತ್ಯತೆ (fact checking) ತಿಳಿಯುವುದು ಹೇಗೆ?

 ಮಾಧ್ಯಮ ಸಾಕ್ಷರತೆ ಸರಣಿಯ  -  6 ನೇ ಸಂಚಿಕೆಗೆ ಸ್ವಾಗತ. ಈ ಸಂಚಿಕೆಯಲ್ಲಿ ನಕಲಿ ವಿಡಿಯೋಗಳ  ಸತ್ಯಾಸತ್ಯತೆ ಪರಿಶೀಲಿಸುವುದು ಹೇಗೆ? ಎನ್ನುವುದನ್ನು ತಿಳಿದುಕೊಳ್ಳೋಣ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೊಮ್ಮೆ ಮುಖ್ಯವಾಹಿನಿ ಅಂತೆನಿಸಿಕೊಂಡ ಮಾಧ್ಯಮಗಳಲ್ಲೂ ನಕಲಿ ವಿಡಿಯೋಗಳು ಮತ್ತು ತಪ್ಪು ಮಾಹಿತಿಗಳ ಹರಿದಾಡುತ್ತಿರುತ್ತವೆ.  ಇಂತಹ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಸವಾಲಿನ ಕೆಲಸವಾದರೂ, ಕೆಲವು  ತಂತ್ರಗಳು ಹಾಗೂ ಟೂಲ್ಸ್‌  ಗಳನ್ನು ಬಳಸಿಕೊಂಡು  ಅವುಗಳ ನಿಜಾಂಶವನ್ನು ಗುರುತಿಸಬಹುದು.

ಹಿಮ್ಮುಖ ಚಿತ್ರ ಹುಡುಕಾಟ (Reverse Image Search)

ನಕಲಿ ವಿಡಿಯೋಗಳನ್ನು ಪರಿಶೀಲಿಸುವಲ್ಲಿ ಮೊಟ್ಟಮೊದಲು  ಮಾಡಬಹುದಾದ ಪ್ರಮುಖ ಹಂತವೆಂದರೆ ಹಿಮ್ಮುಖ ಚಿತ್ರ ಹುಡುಕಾಟ (Reverse Image Search). ನಮಗೆಲ್ಲಾ ಗೊತ್ತಿರುವ ಹಾಗೆ ವಿಡಿಯೋ ಎಂದರೆ ಅದು ಹಲವಾರು ಚಿತ್ರಗಳ ಸಂಗ್ರಹ. ಆ ಚಿತ್ರಗಳು ವೇಗವಾಗಿ ಚಲಿಸುವಾಗ ಅದು ನಮಗೆ ಚಲಿಸುವ ದೃಶ್ಯದ ಕಲ್ಪನೆಯನ್ನು ಕೊಡುತ್ತದೆ.  ಆದ್ದರಿಂದ, ವಿಡಿಯೋದ ಪ್ರಮುಖ ಭಾಗದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು  ಅಂತರ್ಜಾಲದಲ್ಲಿ  ಹುಡುಕುವ ಮೂಲಕ, ಆ ಚಿತ್ರ ದ ಹಿನ್ನೆಲೆ ಏನು? ಅನ್ನುವುದನ್ನು ನೋಡಬಹುದು. ಪ್ರಕ್ರಿಯೆ ಹೀಗಿರಲಿ.

ಮೊದಲಿಗೆ, ವಿಡಿಯೋದ ಒಂದು ಪ್ರಮುಖ ಭಾಗದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ. ನಂತರ, ನಿಮ್ಮ ಮೊಬೈಲ್‌ನಲ್ಲಿರುವ ಗೂಗಲ್ ಲೆನ್ಸ್ (Google Lens) ಅಥವಾ ಗೂಗಲ್ ಇಮೇಜಸ್ (Google Images) ಬಳಸಿ ಆ ಸ್ಕ್ರೀನ್‌ಶಾಟ್ ಅನ್ನು ಅಪ್‌ಲೋಡ್ ಮಾಡಿ. ಇದು ಆ ಚಿತ್ರವನ್ನು ಬಳಸಿ  ಅಂತರ್ಜಾಲದಲ್ಲಿ ಲಭ್ಯವಿರುವ ಎಲ್ಲಾ ಸಾಮ್ಯ ಚಿತ್ರಗಳನ್ನು ಹುಡುಕುತ್ತದೆ. ಒಂದು ವೇಳೆ ಆ ಚಿತ್ರವು ಹಳೆಯ ಸುದ್ದಿಯಲ್ಲಿ, ಬೇರೆ ಘಟನೆಯಲ್ಲಿ ಅಥವಾ ಬೇರೆ ಸ್ಥಳದಲ್ಲಿ ಪ್ರಕಟವಾಗಿದ್ದರೆ, ಅದು ತಕ್ಷಣವೇ ನಿಮಗೆ ತಿಳಿಯುತ್ತದೆ.

ಟಿನ್‌ಐ (TinEye) ನಂತಹ ವೆಬ್‌ಸೈಟ್‌ಗಳನ್ನು ಕೂಡ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಬಳಸಿ ಹಿಮ್ಮುಖ ಹುಡುಕಾಟ ಮಾಡಬಹುದು. (ವಿವರಕ್ಕೆ ಮಾಧ್ಯಮ ಸಾಕ್ಷರತೆ ಭಾಗ-5 ನ್ನು ನೋಡಿ  https://sumageetha.blogspot.com/2025/09/fact-checking.html)

       ವಿಡಿಯೋ ಪರಿಶೀಲನೆಗೆ ಟೂಲ್ ಗಳು

ವೃತ್ತಿಪರರು ಮತ್ತು ಸತ್ಯಶೋಧಕರು ವಿಡಿಯೋಗಳನ್ನು ವಿಶ್ಲೇಷಿಸಲು ಕೆಲವು ವಿಶೇಷ ಟೂಲ್‌ಗಳನ್ನು ಬಳಸುತ್ತಾರೆ. ಇವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ನೀಡಲಾಗಿದೆ.

      ‌ ಇನ್ವಿಡ್ (InVID)

ಇದು ಬ್ರೌಸರ್ ಪ್ಲಗಿನ್ ಆಗಿದ್ದು, ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾ ಫೈರ್‌ಫಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಮೊಬೈಲ್ ಫೋನ್‌ಗಳಲ್ಲಿ ನೇರವಾಗಿ ಬಳಸಲು ಸಾಧ್ಯವಿಲ್ಲ. ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅಗತ್ಯ

ಬಳಸುವ ವಿಧಾನ:

  1. ನಿಮ್ಮ ಬ್ರೌಸರ್‌ನ ವೆಬ್ ಸ್ಟೋರ್‌ಗೆ ಹೋಗಿ "InVID & WeVerify" ಎಂದು ಹುಡುಕಿ ಅದರ ಎಕ್ಸ್‌ ಟೆನ್ಶನ್‌ ಅನ್ನು ಇನ್‌ಸ್ಟಾಲ್ ಮಾಡಿ.
  2. ನೀವು ಪರಿಶೀಲಿಸಬೇಕಾದ ಯೂಟ್ಯೂಬ್, ಫೇಸ್‌ಬುಕ್, ಅಥವಾ ಟ್ವಿಟ್ಟರ್ ವಿಡಿಯೋದ URL ಅನ್ನು ನಕಲಿಸಿ.
  3. InVID ಪ್ಲಗಿನ್ ತೆರೆದು "Keyframes" ಟ್ಯಾಬ್‌ನಲ್ಲಿ ವಿಡಿಯೋ URL ಅನ್ನು ಪೇಸ್ಟ್ ಮಾಡಿ. ಇದು ವಿಡಿಯೋವನ್ನು ಸಣ್ಣ ಚಿತ್ರಗಳಾಗಿ (ಕೀಫ್ರೇಮ್‌ಗಳು) ವಿಭಜಿಸುತ್ತದೆ.
  4. ನಂತರ ನೀವು ಈ ಕೀಫ್ರೇಮ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ  TinEye ನಲ್ಲಿ ಹಿಮ್ಮುಖ ಚಿತ್ರ ಹುಡುಕಾಟ ಮಾಡಬಹುದು. ಇದು ಆ ಚಿತ್ರಗಳು ಹಿಂದೆ ಎಲ್ಲಿ ಪ್ರಕಟವಾಗಿದ್ದವು ಎಂದು ತಿಳಿಸುತ್ತದೆ.

InVID ನ ಪ್ರಮುಖ ವೈಶಿಷ್ಟ್ಯಗಳು: ವಿಡಿಯೋವನ್ನು ಪ್ರಮುಖ ಚಿತ್ರಗಳಾಗಿ ವಿಂಗಡಿಸಿ ವಿಶ್ಲೇಷಿಸಲು ಸುಲಭಗೊಳಿಸುತ್ತದೆ. ಕೆಲವೊಮ್ಮೆ ವಿಡಿಯೋ ಮತ್ತು ಫೋಟೋಗಳ ಮೆಟಾಡೇಟಾ ಅಂದರೆ  ಸಮಯ, ಸ್ಥಳ, ಗಾತ್ರ ಇತ್ಯಾದಿ ವಿವರಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಚಿತ್ರಗಳಲ್ಲಿ ಮಾಡಿರುವ  ಎಡಿಟ್‌ ಅಂದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

  Amnesty International's YouTube Data Viewer

ಇದು ಯೂಟ್ಯೂಬ್ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇರುವ ಒಂದು ಸರಳ ಟೂಲ್

ಹೇಗೆ ಕೆಲಸ ಮಾಡುತ್ತದೆ?: ಪರಿಶೀಲಿಸಬೇಕಾದ ಯೂಟ್ಯೂಬ್ ವಿಡಿಯೋದ ಲಿಂಕ್ ಅನ್ನು  ಇಲ್ಲಿ ಪೇಸ್ಟ್ ಮಾಡಿದರೆ, ಅದು ವಿಡಿಯೋದ ಪ್ರಮುಖ ಕೀಫ್ರೇಮ್‌ಗಳನ್ನು ಹೊರತೆಗೆಯುತ್ತದೆ. ಆ ಚಿತ್ರಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಗೂಗಲ್ ಅಥವಾ ಇತರ ಸರ್ಚ್ ಇಂಜಿನ್‌ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಲು ಸಾಧ್ಯವಾಗುತ್ತದೆ. ಇದು ಯೂಟ್ಯೂಬ್ ವಿಡಿಯೋಗಳನ್ನು ಪರಿಶೀಲಿಸಲು  ಇರುವ ಅತ್ಯಂತ ಸುಲಭ ವಿಧಾನ.

     ವಿಡಿಯೋದ ಸಂದರ್ಭ (Context) ಪರಿಶೀಲನೆ

     ವಿಡಿಯೋ ನಕಲಿಯೇ ಅಥವಾ ನಿಜವೇ ಎಂದು ಖಚಿತಪಡಿಸಿಕೊಳ್ಳಲು  ನಮ್ಮ ಕಾಮನ್‌ ಸೆನ್ಸ್‌ ಕೂಡಾ ಸಾಕಾಗುತ್ತದೆ. ವಿಡಿಯೋದ (Context) ಸಂದರ್ಭವನ್ನು ವಿಶ್ಲೇಷಿಸುವುದರ ಮೂಲಕವೂ ಸತ್ಯಾಸತ್ಯತೆಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಯಾರು?: ವಿಡಿಯೋವನ್ನು ಯಾರು ಹಂಚಿಕೊಂಡಿದ್ದಾರೆ? ಅವರು ವಿಶ್ವಾಸಾರ್ಹ ವ್ಯಕ್ತಿಯೇ ಅಥವಾ ಸುದ್ದಿಸಂಸ್ಥೆಯೇ? ಅಜ್ಞಾತ ಮೂಲದಿಂದ ಬಂದ ವಿಡಿಯೋಗಳು ಅನುಮಾನಾಸ್ಪದವಾಗಿರುತ್ತವೆ.

ಎಲ್ಲಿ?: ವಿಡಿಯೋ ಯಾವ ಸ್ಥಳಕ್ಕೆ ಸೇರಿದೆ? ವಿಡಿಯೋದಲ್ಲಿರುವ ಕಟ್ಟಡಗಳು, ವಾಹನಗಳು ಅಥವಾ ರಸ್ತೆ ಚಿಹ್ನೆಗಳನ್ನು ಗಮನಿಸಿ. ಈ ಗುರುತುಗಳನ್ನು ಬಳಸಿ ಆ ವಿಡಿಯೋ ನಿಜವಾಗಿಯೂ ಹೇಳಲಾದ ಸ್ಥಳದ್ದೇ ಅಥವಾ ಅದೇ ಘಟನೆಗೆ ಸಂಬಂಧಿಸಿದ್ದೇ ಎಂದು ಖಚಿತಪಡಿಸಿಕೊಳ್ಳಬಹುದು.

ಯಾವಾಗ?: ವಿಡಿಯೋ ಯಾವ ದಿನಾಂಕ ಮತ್ತು ಸಮಯದಲ್ಲಿ ಚಿತ್ರೀಕರಿಸಲ್ಪಟ್ಟಿದೆ? ಹವಾಮಾನ, ನೆರಳು ಮತ್ತು ಸೂರ್ಯನ ಸ್ಥಾನವನ್ನು ಪರಿಶೀಲಿಸುವುದರಿಂದ ವಿಡಿಯೋದ ಸಮಯದ ಬಗ್ಗೆ ಸುಳಿವು ದೊರೆಯುತ್ತದೆ. ಇವುಗಳು ಸಂದರ್ಭಕ್ಕೆ ಹೊಂದಿಕೆಯಾಗದಿದ್ದರೆ, ವಿಡಿಯೋ ನಕಲಿ ಆಗಿರುವ ಸಾಧ್ಯತೆ ಇದೆ.

ಈ ಮೇಲೆ ಹೇಳಿದ  ವಿಧಾನಗಳು ಜನಸಾಮಾನ್ಯರಿಗೂ ಸತ್ಯವನ್ನು ತಿಳಿಯುವ ಮತ್ತು ಇತರರಿಗೆ ತಿಳಿಸುವ ವಿಧಾನವನ್ನು ತಿಳಿಸುತ್ತದೆ.  ಇಂತಹಾ ಟೂಲ್ಸ್ ಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ನಾವೆಲ್ಲರೂ ವೈಯಕ್ತಿಕವಾಗಿಯೂ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಸಹಾಯ ಮಾಡಬಹುದು.

(ಮುಂದಿನ ಭಾಗದಲ್ಲಿ: ಎಐ ವಿಡಿಯೋ  ಪರಿಶೀಲನೆ)

ಗೀತಾ ಎ.ಜೆ


No comments:

Post a Comment