Friday, September 26, 2025

ಕೃತಕ ಬುದ್ಧಿಮತ್ತೆ (AI) ಚಿತ್ರ ಮತ್ತುವಿಡಿಯೋಗಳನ್ನು ಗುರುತಿಸುವುದು

ಕೃತಕ ಬುದ್ಧಿಮತ್ತೆಯನ್ನು ಬಳಸಿ  ಚಿತ್ರಗಳನ್ನು ವಿಡಿಯೋಗಳನ್ನು ಸೃಷ್ಟಿಸುವುದು ಸುಲಭ.  ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸೃಷ್ಟಿ ಮಾಡುತ್ತಿರುವ  ಚಿತ್ರಗಳು ಮತ್ತು ವಿಡಿಯೋಗಳ ಉದ್ದೇಶ ಒಳ್ಳೆಯದೇ ಆಗಿದ್ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅದು ಯಾವುದೋ ವ್ಯಕ್ತಿಯ, ಸಂಘ ಸಂಸ್ಥೆಯ ತೇಜೋವಧೆಯ ದುರುದ್ದೇಶದಿಂದ ಬಳಕೆಯಾದರೆ ಅದು ಸಮಾಜ ಘಾತಕವೇ.  ವಿಡಿಯೋಗಳು ಅತ್ಯಾಕರ್ಷಕವಾಗಿದೆ ಎನ್ನುವ ಕಾರಣಕ್ಕಷ್ಟೇ ಅದು ಹೇಳುತ್ತಿರುವ ಕಥೆಯನ್ನು ನಂಬಬೇಕಾಗಿಲ್ಲ. ಆದ್ದರಿಂದ ನಾವು ವೀಕ್ಷಿಸುತ್ತಿರುವ ವಿಡಿಯೋ ಸಹಜ ದೃಶ್ಯವೇ ಅಥವಾ ಕೃತಕವಾಗಿ ರಚಿಸಿದ್ದೇ ಎನ್ನುವ ಜ್ಞಾನ ಇರಬೇಕಾಗುತ್ತದೆ.

ಕೃತಕ ಬುದ್ಧಿಮತ್ತೆ (AI)  ಚಿತ್ರ ಹಾಗೂ ವಿಡಿಯೋಗಳ ಬಗ್ಗೆ ನಿಮಗಿದು ತಿಳಿದಿರಲಿ

೧. ಚಿತ್ರಗಳು:

ಪರಿಪಕ್ವ, ಪರಿಪೂರ್ಣ: AI-ರಚಿತ ಚಿತ್ರಗಳು ವಾವ್‌ ಎನಿಸುವಷ್ಟು  ಸುಂದರವಾಗಿರುತ್ತವೆ.  ʼ೧೮ರ ಹರೆಯದ ಹುಡುಗಿʼ ಎಂದರೆ, ನಾವು ಸಿನಿಮಾದಲ್ಲಿ ನೋಡುತ್ತೇವಲ್ಲ ಅಂತಹಾ ಪರಿಪೂರ್ಣ ಸೌಂದರ್ಯ. "ನಂಬಲು ಕಷ್ಟ" ಎನ್ನುವಷ್ಟು  ಸುಂದರವಾಗಿರುತ್ತದೆ!.  ಚರ್ಮ ಎಂದರೆ ಅಷ್ಟು ನುಣುಪು, ಅಷ್ಟು ನಾಜೂಕು. ನೈಸರ್ಗಿಕವಾಗಿ  ಚರ್ಮದಲ್ಲಿ ಇರಬಹುದಾದ  ರಂಧ್ರಗಳು, ಅಸಮವಾದ ಮುಖದ ಲಕ್ಷಣಗಳು ಅಥವಾ ಅಸ್ತವ್ಯಸ್ತವಾದ ಕೂದಲು ಇರುವುದಿಲ್ಲ. ಬದಲಿಗೆ, ಎಲ್ಲವೂ  ಪರಿಪೂರ್ಣವಾಗಿ, ನಯವಾಗಿ ಕಾಣಿಸುತ್ತವೆ.

ಹಿನ್ನೆಲೆ: ಹಿನ್ನೆಲೆಗಳು ಮಸುಕಾಗಿ ಅಥವಾ ಕೃತಕ ಎನಿಸುವ ವಸ್ತುಗಳನ್ನು, ಮರ ಗಿಡಗಳನ್ನು ಹೊಂದಿರಬಹುದು. ವಿರೂಪಗೊಂಡ ಅಥವಾ ನಿಮ್ಮನ್ನು ಗೊಂದಲಗೊಳಿಸುವ ವಸ್ತುಗಳು ಇರಬಹುದು.

ಅಕ್ಷರಗಳು ಮತ್ತು ಪದಗಳು:  AI, ಸ್ಪಷ್ಟ ಪದಗಳನ್ನು ಮತ್ತು ಸಹಜ ಎನಿಸುವ ಅಕ್ಷರಗಳನ್ನು ರಚಿಸುವಲ್ಲಿ ಇನ್ನೂ ಪರಿಪೂರ್ಣತೆ ಸಾಧಿಸಿಲ್ಲ.  ಚಿತ್ರದ ಹಿನ್ನೆಲೆಯಲ್ಲಿ ಯಾವುದಾದರೂ ಫಲಕಗಳಿದ್ದಲ್ಲಿ  ಅಥವಾ ಪುಸ್ತಕಗಳಿದ್ದಲ್ಲಿಅದರ  ಮೇಲಿನ ಅಕ್ಷರಗಳು ಗೊಂದಲಮಯವಾಗಿರುತ್ತದೆ.

ನೆರಳು ಬೆಳಕಿನಾಟ: ವ್ಯಕ್ತಿಯ ಮುಖದ ಮೇಲೆ ಬೆಳಕು ಸರಿಯಾಗಿ ಬೀಳದಿದ್ದರೆ, ಅಥವಾ  ಸುತ್ತಲಿರುವ ಬೆಳಕು ಮತ್ತು ನೆರಳು ಹೊಂದಿಕೆಯಾಗದಿದ್ದರೆ, ಅದು ನಕಲಿ ಚಿತ್ರ ಆಗಿರಬಹುದು.

ಮೆಟಾಡೇಟಾ ವಿಶ್ಲೇಷಣೆ:  ಚಿತ್ರದ ಗುಣಲಕ್ಷಣಗಳನ್ನು ("Properties" ಅಥವಾ "Get Info") ಪರಿಶೀಲಿಸಿ. ಇದು ಫೈಲ್ ರಚಿಸಲು ಬಳಸಿದ ಸಾಫ್ಟ್ವೇರ್ ಮತ್ತು ಸಮಯವನ್ನು ತಿಳಿಸುತ್ತದೆ.

೨. ವೀಡಿಯೊಗಳು

ಧ್ವನಿ ಮತ್ತು ದೃಶ್ಯದ ಅಸಮಂಜಸತೆ: ಮಾತನಾಡುವ ವ್ಯಕ್ತಿಯ ತುಟಿಗಳ ಚಲನೆ ಧ್ವನಿಯೊಂದಿಗೆ ಹೊಂದಾಣಿಕೆ ಆಗುತ್ತಿದೆಯೇ ಎಂದು ಪರಿಶೀಲಿಸಿ. ಅಥವಾ ಧ್ವನಿ ಯಲ್ಲಿ ಯಾವುದೇ ಏರಿಳಿತವಿಲ್ಲದೆ ಯಾಂತ್ರಿಕವಾಗಿದೆಯೇ ಎಂದು ಗಮನಿಸಿ. ಹಾಗಿದ್ದರೆ ಅದು ಕೃತಕವಾಗಿರಬಹುದು.

ಅಸ್ವಾಭಾವಿಕ ಚಲನೆ: ವಿಡಿಯೋದಲ್ಲಿರುವ ವ್ಯಕ್ತಿಯ ಮುಖದ ಭಾವನೆಗಳು, ಕಣ್ಣುಗಳ ಮಿಟುಕಿಸುವಿಕೆ ಅಥವಾ ತುಟಿಗಳ ಚಲನೆ ಅಸ್ವಾಭಾವಿಕವಾಗಿದೆಯೇ ಎಂದು ಗಮನಿಸಿ. ವೀಡಿಯೊದಲ್ಲಿನ ಚಲನೆಗಳು ಯಾಂತ್ರಿಕವಾಗಿ (robotic) ಅಥವಾ ನಡುಗಿದಂತೆ ಇದ್ದರೆ ಅದು ಕೃತಕ ವಿಡಿಯೋ

ಮಸುಕಾದ (Blurry) ಭಾಗಗಳು: ನಕಲಿ ವಿಡಿಯೋಗಳಲ್ಲಿ ಹೆಚ್ಚಾಗಿ ವ್ಯಕ್ತಿಯ ಮುಖದ ಸುತ್ತಲಿನ ಭಾಗಗಳು ಮಸುಕಾಗಿ ಅಥವಾ ಸರಿಯಾದ ರೂಪದಲ್ಲಿರುವುದಿಲ್ಲ ಎನ್ನುವುದನ್ನು  ಗಮನಿಸಿ.

ಈ ಮೇಲಿನ ವಿಧಾನಗಳಿಂದ ನಿಮ್ಮ ಸಂಶಯ ಪರಿಹಾರವಾಗದಿದ್ದರೆ  ವಿಶ್ವಾಸಾರ್ಹ  ಸತ್ಯಶೋಧನಾ  ಸಂಸ್ಥೆಗಳ (Fact-Checking Organizations) ಸಹಾಯ  ಪಡೆಯಬಹುದು.

ನಿಮ್ಮ ಕೈಯಲ್ಲಿರುವ ವಿಡಿಯೋ ನಕಲಿಯೇ ಎಂದು ಅನುಮಾನವಿದ್ದರೆ, ಪ್ರಮುಖ ಸತ್ಯಶೋಧನಾ ಸಂಸ್ಥೆಗಳ ವೆಬ್ಸೈಟ್ಗಳನ್ನು ಪರಿಶೀಲಿಸಿ. ಸಂಸ್ಥೆಗಳು ನಕಲಿ ವಿಡಿಯೋಗಳು ಮತ್ತು ಸುದ್ದಿಗಳನ್ನು ಈಗಾಗಲೇ ಪರಿಶೀಲಿಸಿ ಅದರ ಕುರಿತು ವರದಿ ಪ್ರಕಟಿಸಿರುತ್ತವೆ.

ಭಾರತದಲ್ಲಿನ ಕೆಲವು ಪ್ರಮುಖ ಸಂಸ್ಥೆಗಳು: ಬೂಮ್ಲೈವ್ (BOOM Live), ಆಲ್ಟ್ನ್ಯೂಸ್ (Alt News), ಮತ್ತು ಇಂಡಿಯಾ ಟುಡೆ ಫ್ಯಾಕ್ಟ್ಚೆಕ್‌ (India Today Fact Check). ಇವುಗಳು ತಮ್ಮ ವೆಬ್ಸೈಟ್ನಲ್ಲಿ ಪರಿಶೀಲಿಸಿದ ಮಾಹಿತಿಗಳನ್ನು ಪ್ರಕಟಿಸುತ್ತವೆ.

ಚಿತ್ರ ಮತ್ತು ವೀಡಿಯೊ ಪತ್ತೆಹಚ್ಚುವ ತಂತ್ರಜ್ಞಾನ ಆಧಾರಿತ ಟೂಲ್ ಗಳು: Hive AI-Generated Content Detection: Sensity AI,  Deepware, Sightengine ಮೊದಲಾದ ಟೂಲ್ ಗಳು  ಚಿತ್ರಗಳು, ವೀಡಿಯೊಗಳು ಮತ್ತು ಧ್ವನಿಯನ್ನು ಸ್ಕ್ಯಾನ್ ಮಾಡಿ, ಅವು ನಕಲಿಯೇ ಅಥವಾ ನೈಜವೇ ಎಂದು  ತಿಳಿಸುತ್ತವೆ. ಇದು ಪೇಯ್ಡ್‌ ಸೇವೆ ಆದ್ದರಿಂದ ಕಂಪನಿಗಳು ಖರೀದಿಸಬಹುದು.

AI ತಂತ್ರಜ್ಞಾನ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವುದರಿಂದ,  ಅವುಗಳನ್ನು ಪತ್ತೆಹಚ್ಚುವ ಸಾಧನಗಳೂ ನಿರಂತರವಾಗಿ ವಿಕಸನಗೊಳ್ಳುತ್ತಿವೆ.  ಆದ್ದರಿಂದ, ಕೇವಲ ಒಂದು ಮೂಲವನ್ನಷ್ಟೇ  ಸತ್ಯಾಂಶ ಪತ್ತೆಗೆ ಅವಲಂಬಿಸುವುದು ಸೂಕ್ತವಲ್ಲ. ಯಾವುದೇ ಸುದ್ದಿಯ ಭಾಗವಾಗಿರುವ ಚಿತ್ರ ಅಥವಾ ವೀಡಿಯೊವನ್ನು ಹಲವಾರು ವಿಶ್ವಾಸಾರ್ಹ ಸುದ್ದಿ ಮೂಲಗಳಲ್ಲಿ ಪರಿಶೀಲಿಸುವುದು ಉತ್ತಮ.

(ಮುಂದಿನ ಭಾಗದಲ್ಲಿ: ಅಂತರ್ಜಾಲದಲ್ಲಿ ಲಭ್ಯವಿರುವ Fact checking ತರಬೇತಿಗಳು)

                                                                                                                          ಗೀತಾ ಎ.ಜೆ


Friday, September 12, 2025

ನಕಲಿ ವಿಡಿಯೋಗಳ ಸತ್ಯಾಸತ್ಯತೆ (fact checking) ತಿಳಿಯುವುದು ಹೇಗೆ?

 ಮಾಧ್ಯಮ ಸಾಕ್ಷರತೆ ಸರಣಿಯ  -  6 ನೇ ಸಂಚಿಕೆಗೆ ಸ್ವಾಗತ. ಈ ಸಂಚಿಕೆಯಲ್ಲಿ ನಕಲಿ ವಿಡಿಯೋಗಳ  ಸತ್ಯಾಸತ್ಯತೆ ಪರಿಶೀಲಿಸುವುದು ಹೇಗೆ? ಎನ್ನುವುದನ್ನು ತಿಳಿದುಕೊಳ್ಳೋಣ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೊಮ್ಮೆ ಮುಖ್ಯವಾಹಿನಿ ಅಂತೆನಿಸಿಕೊಂಡ ಮಾಧ್ಯಮಗಳಲ್ಲೂ ನಕಲಿ ವಿಡಿಯೋಗಳು ಮತ್ತು ತಪ್ಪು ಮಾಹಿತಿಗಳ ಹರಿದಾಡುತ್ತಿರುತ್ತವೆ.  ಇಂತಹ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಸವಾಲಿನ ಕೆಲಸವಾದರೂ, ಕೆಲವು  ತಂತ್ರಗಳು ಹಾಗೂ ಟೂಲ್ಸ್‌  ಗಳನ್ನು ಬಳಸಿಕೊಂಡು  ಅವುಗಳ ನಿಜಾಂಶವನ್ನು ಗುರುತಿಸಬಹುದು.

ಹಿಮ್ಮುಖ ಚಿತ್ರ ಹುಡುಕಾಟ (Reverse Image Search)

ನಕಲಿ ವಿಡಿಯೋಗಳನ್ನು ಪರಿಶೀಲಿಸುವಲ್ಲಿ ಮೊಟ್ಟಮೊದಲು  ಮಾಡಬಹುದಾದ ಪ್ರಮುಖ ಹಂತವೆಂದರೆ ಹಿಮ್ಮುಖ ಚಿತ್ರ ಹುಡುಕಾಟ (Reverse Image Search). ನಮಗೆಲ್ಲಾ ಗೊತ್ತಿರುವ ಹಾಗೆ ವಿಡಿಯೋ ಎಂದರೆ ಅದು ಹಲವಾರು ಚಿತ್ರಗಳ ಸಂಗ್ರಹ. ಆ ಚಿತ್ರಗಳು ವೇಗವಾಗಿ ಚಲಿಸುವಾಗ ಅದು ನಮಗೆ ಚಲಿಸುವ ದೃಶ್ಯದ ಕಲ್ಪನೆಯನ್ನು ಕೊಡುತ್ತದೆ.  ಆದ್ದರಿಂದ, ವಿಡಿಯೋದ ಪ್ರಮುಖ ಭಾಗದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು  ಅಂತರ್ಜಾಲದಲ್ಲಿ  ಹುಡುಕುವ ಮೂಲಕ, ಆ ಚಿತ್ರ ದ ಹಿನ್ನೆಲೆ ಏನು? ಅನ್ನುವುದನ್ನು ನೋಡಬಹುದು. ಪ್ರಕ್ರಿಯೆ ಹೀಗಿರಲಿ.

ಮೊದಲಿಗೆ, ವಿಡಿಯೋದ ಒಂದು ಪ್ರಮುಖ ಭಾಗದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ. ನಂತರ, ನಿಮ್ಮ ಮೊಬೈಲ್‌ನಲ್ಲಿರುವ ಗೂಗಲ್ ಲೆನ್ಸ್ (Google Lens) ಅಥವಾ ಗೂಗಲ್ ಇಮೇಜಸ್ (Google Images) ಬಳಸಿ ಆ ಸ್ಕ್ರೀನ್‌ಶಾಟ್ ಅನ್ನು ಅಪ್‌ಲೋಡ್ ಮಾಡಿ. ಇದು ಆ ಚಿತ್ರವನ್ನು ಬಳಸಿ  ಅಂತರ್ಜಾಲದಲ್ಲಿ ಲಭ್ಯವಿರುವ ಎಲ್ಲಾ ಸಾಮ್ಯ ಚಿತ್ರಗಳನ್ನು ಹುಡುಕುತ್ತದೆ. ಒಂದು ವೇಳೆ ಆ ಚಿತ್ರವು ಹಳೆಯ ಸುದ್ದಿಯಲ್ಲಿ, ಬೇರೆ ಘಟನೆಯಲ್ಲಿ ಅಥವಾ ಬೇರೆ ಸ್ಥಳದಲ್ಲಿ ಪ್ರಕಟವಾಗಿದ್ದರೆ, ಅದು ತಕ್ಷಣವೇ ನಿಮಗೆ ತಿಳಿಯುತ್ತದೆ.

ಟಿನ್‌ಐ (TinEye) ನಂತಹ ವೆಬ್‌ಸೈಟ್‌ಗಳನ್ನು ಕೂಡ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಬಳಸಿ ಹಿಮ್ಮುಖ ಹುಡುಕಾಟ ಮಾಡಬಹುದು. (ವಿವರಕ್ಕೆ ಮಾಧ್ಯಮ ಸಾಕ್ಷರತೆ ಭಾಗ-5 ನ್ನು ನೋಡಿ  https://sumageetha.blogspot.com/2025/09/fact-checking.html)

       ವಿಡಿಯೋ ಪರಿಶೀಲನೆಗೆ ಟೂಲ್ ಗಳು

ವೃತ್ತಿಪರರು ಮತ್ತು ಸತ್ಯಶೋಧಕರು ವಿಡಿಯೋಗಳನ್ನು ವಿಶ್ಲೇಷಿಸಲು ಕೆಲವು ವಿಶೇಷ ಟೂಲ್‌ಗಳನ್ನು ಬಳಸುತ್ತಾರೆ. ಇವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ನೀಡಲಾಗಿದೆ.

      ‌ ಇನ್ವಿಡ್ (InVID)

ಇದು ಬ್ರೌಸರ್ ಪ್ಲಗಿನ್ ಆಗಿದ್ದು, ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾ ಫೈರ್‌ಫಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಮೊಬೈಲ್ ಫೋನ್‌ಗಳಲ್ಲಿ ನೇರವಾಗಿ ಬಳಸಲು ಸಾಧ್ಯವಿಲ್ಲ. ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅಗತ್ಯ

ಬಳಸುವ ವಿಧಾನ:

  1. ನಿಮ್ಮ ಬ್ರೌಸರ್‌ನ ವೆಬ್ ಸ್ಟೋರ್‌ಗೆ ಹೋಗಿ "InVID & WeVerify" ಎಂದು ಹುಡುಕಿ ಅದರ ಎಕ್ಸ್‌ ಟೆನ್ಶನ್‌ ಅನ್ನು ಇನ್‌ಸ್ಟಾಲ್ ಮಾಡಿ.
  2. ನೀವು ಪರಿಶೀಲಿಸಬೇಕಾದ ಯೂಟ್ಯೂಬ್, ಫೇಸ್‌ಬುಕ್, ಅಥವಾ ಟ್ವಿಟ್ಟರ್ ವಿಡಿಯೋದ URL ಅನ್ನು ನಕಲಿಸಿ.
  3. InVID ಪ್ಲಗಿನ್ ತೆರೆದು "Keyframes" ಟ್ಯಾಬ್‌ನಲ್ಲಿ ವಿಡಿಯೋ URL ಅನ್ನು ಪೇಸ್ಟ್ ಮಾಡಿ. ಇದು ವಿಡಿಯೋವನ್ನು ಸಣ್ಣ ಚಿತ್ರಗಳಾಗಿ (ಕೀಫ್ರೇಮ್‌ಗಳು) ವಿಭಜಿಸುತ್ತದೆ.
  4. ನಂತರ ನೀವು ಈ ಕೀಫ್ರೇಮ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ  TinEye ನಲ್ಲಿ ಹಿಮ್ಮುಖ ಚಿತ್ರ ಹುಡುಕಾಟ ಮಾಡಬಹುದು. ಇದು ಆ ಚಿತ್ರಗಳು ಹಿಂದೆ ಎಲ್ಲಿ ಪ್ರಕಟವಾಗಿದ್ದವು ಎಂದು ತಿಳಿಸುತ್ತದೆ.

InVID ನ ಪ್ರಮುಖ ವೈಶಿಷ್ಟ್ಯಗಳು: ವಿಡಿಯೋವನ್ನು ಪ್ರಮುಖ ಚಿತ್ರಗಳಾಗಿ ವಿಂಗಡಿಸಿ ವಿಶ್ಲೇಷಿಸಲು ಸುಲಭಗೊಳಿಸುತ್ತದೆ. ಕೆಲವೊಮ್ಮೆ ವಿಡಿಯೋ ಮತ್ತು ಫೋಟೋಗಳ ಮೆಟಾಡೇಟಾ ಅಂದರೆ  ಸಮಯ, ಸ್ಥಳ, ಗಾತ್ರ ಇತ್ಯಾದಿ ವಿವರಗಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಚಿತ್ರಗಳಲ್ಲಿ ಮಾಡಿರುವ  ಎಡಿಟ್‌ ಅಂದರೆ ಬದಲಾವಣೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

  Amnesty International's YouTube Data Viewer

ಇದು ಯೂಟ್ಯೂಬ್ ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇರುವ ಒಂದು ಸರಳ ಟೂಲ್

ಹೇಗೆ ಕೆಲಸ ಮಾಡುತ್ತದೆ?: ಪರಿಶೀಲಿಸಬೇಕಾದ ಯೂಟ್ಯೂಬ್ ವಿಡಿಯೋದ ಲಿಂಕ್ ಅನ್ನು  ಇಲ್ಲಿ ಪೇಸ್ಟ್ ಮಾಡಿದರೆ, ಅದು ವಿಡಿಯೋದ ಪ್ರಮುಖ ಕೀಫ್ರೇಮ್‌ಗಳನ್ನು ಹೊರತೆಗೆಯುತ್ತದೆ. ಆ ಚಿತ್ರಗಳ ಮೇಲೆ ಕ್ಲಿಕ್ ಮಾಡುವ ಮೂಲಕ ಗೂಗಲ್ ಅಥವಾ ಇತರ ಸರ್ಚ್ ಇಂಜಿನ್‌ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಲು ಸಾಧ್ಯವಾಗುತ್ತದೆ. ಇದು ಯೂಟ್ಯೂಬ್ ವಿಡಿಯೋಗಳನ್ನು ಪರಿಶೀಲಿಸಲು  ಇರುವ ಅತ್ಯಂತ ಸುಲಭ ವಿಧಾನ.

     ವಿಡಿಯೋದ ಸಂದರ್ಭ (Context) ಪರಿಶೀಲನೆ

     ವಿಡಿಯೋ ನಕಲಿಯೇ ಅಥವಾ ನಿಜವೇ ಎಂದು ಖಚಿತಪಡಿಸಿಕೊಳ್ಳಲು  ನಮ್ಮ ಕಾಮನ್‌ ಸೆನ್ಸ್‌ ಕೂಡಾ ಸಾಕಾಗುತ್ತದೆ. ವಿಡಿಯೋದ (Context) ಸಂದರ್ಭವನ್ನು ವಿಶ್ಲೇಷಿಸುವುದರ ಮೂಲಕವೂ ಸತ್ಯಾಸತ್ಯತೆಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

ಯಾರು?: ವಿಡಿಯೋವನ್ನು ಯಾರು ಹಂಚಿಕೊಂಡಿದ್ದಾರೆ? ಅವರು ವಿಶ್ವಾಸಾರ್ಹ ವ್ಯಕ್ತಿಯೇ ಅಥವಾ ಸುದ್ದಿಸಂಸ್ಥೆಯೇ? ಅಜ್ಞಾತ ಮೂಲದಿಂದ ಬಂದ ವಿಡಿಯೋಗಳು ಅನುಮಾನಾಸ್ಪದವಾಗಿರುತ್ತವೆ.

ಎಲ್ಲಿ?: ವಿಡಿಯೋ ಯಾವ ಸ್ಥಳಕ್ಕೆ ಸೇರಿದೆ? ವಿಡಿಯೋದಲ್ಲಿರುವ ಕಟ್ಟಡಗಳು, ವಾಹನಗಳು ಅಥವಾ ರಸ್ತೆ ಚಿಹ್ನೆಗಳನ್ನು ಗಮನಿಸಿ. ಈ ಗುರುತುಗಳನ್ನು ಬಳಸಿ ಆ ವಿಡಿಯೋ ನಿಜವಾಗಿಯೂ ಹೇಳಲಾದ ಸ್ಥಳದ್ದೇ ಅಥವಾ ಅದೇ ಘಟನೆಗೆ ಸಂಬಂಧಿಸಿದ್ದೇ ಎಂದು ಖಚಿತಪಡಿಸಿಕೊಳ್ಳಬಹುದು.

ಯಾವಾಗ?: ವಿಡಿಯೋ ಯಾವ ದಿನಾಂಕ ಮತ್ತು ಸಮಯದಲ್ಲಿ ಚಿತ್ರೀಕರಿಸಲ್ಪಟ್ಟಿದೆ? ಹವಾಮಾನ, ನೆರಳು ಮತ್ತು ಸೂರ್ಯನ ಸ್ಥಾನವನ್ನು ಪರಿಶೀಲಿಸುವುದರಿಂದ ವಿಡಿಯೋದ ಸಮಯದ ಬಗ್ಗೆ ಸುಳಿವು ದೊರೆಯುತ್ತದೆ. ಇವುಗಳು ಸಂದರ್ಭಕ್ಕೆ ಹೊಂದಿಕೆಯಾಗದಿದ್ದರೆ, ವಿಡಿಯೋ ನಕಲಿ ಆಗಿರುವ ಸಾಧ್ಯತೆ ಇದೆ.

ಈ ಮೇಲೆ ಹೇಳಿದ  ವಿಧಾನಗಳು ಜನಸಾಮಾನ್ಯರಿಗೂ ಸತ್ಯವನ್ನು ತಿಳಿಯುವ ಮತ್ತು ಇತರರಿಗೆ ತಿಳಿಸುವ ವಿಧಾನವನ್ನು ತಿಳಿಸುತ್ತದೆ.  ಇಂತಹಾ ಟೂಲ್ಸ್ ಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ನಾವೆಲ್ಲರೂ ವೈಯಕ್ತಿಕವಾಗಿಯೂ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಸಹಾಯ ಮಾಡಬಹುದು.

(ಮುಂದಿನ ಭಾಗದಲ್ಲಿ: ಎಐ ವಿಡಿಯೋ  ಪರಿಶೀಲನೆ)

ಗೀತಾ ಎ.ಜೆ


Thursday, September 4, 2025

ಮೊಬೈಲ್‌ ಫೋನ್‌ ನಲ್ಲಿ ಪೋಟೋಗಳ ಸತ್ಯಾಸತ್ಯತೆ ಪರಿಶೀಲಿಸುವುದು (Fact Checking) ಹೇಗೆ?

 ಮಾಧ್ಯಮ ಸಾಕ್ಷರತೆ ಸರಣಿಯ  -5 ನೇ ಸಂಚಿಕೆಗೆ ಸ್ವಾಗತ. ಈ ಸಂಚಿಕೆಯಲ್ಲಿ ಮೊಬೈಲ್‌ ಫೋನ್‌ ನಲ್ಲಿ  ಪೋಟೋಗಳ ಸತ್ಯಾಸತ್ಯತೆ ಪರಿಶೀಲಿಸುವುದು ಹೇಗೆ? ಎನ್ನುವುದನ್ನು ತಿಳಿದುಕೊಳ್ಳೋಣ.

ಸುದ್ದಿ ಅಥವಾ ಮಾಹಿತಿಯ ಸತ್ಯಾಸತ್ಯತೆ ತಿಳಿಯಲು ನಮಗೆ ವಿಶೇಷವಾದ ಜ್ಞಾನ ಅಥವಾ ಕೌಶಲ್ಯಗಳು ಬೇಕಾಗಿಲ್ಲ. ಒಂದು ಕಾಮನ್‌ ಸೆನ್ಸ್‌ ಇದ್ದರೆ ಸಾಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಹಾಗೆ, ತಂತ್ರಜ್ಞಾನದ ಎಡವಟ್ಟುಗಳನ್ನು ತಂತ್ರಜ್ಞಾನದ ಮೂಲಕವೇ ಪರಿಹರಿಸಿಕೊಂಡರೆ ಆಯಿತು. ನಿಮ್ಮಲ್ಲಿರುವ ಆಂಡ್ರಾಯ್ಡ್‌ ಮೊಬೈಲ್‌ ಪೋನ್‌ ಮೂಲಕವೇ ಅತಿ ಸರಳ ವಿಧಾನಗಳಿಂದ ಸತ್ಯಶೋಧನೆಗೆ ಇಳಿಯಬಹುದು.

ಚಿತ್ರವನ್ನು ಪರಿಶೀಲಿಸುವುದು 

ಹೆಚ್ಚಿನ ಸಂದರ್ಭಗಳಲ್ಲಿ ನಕಲಿ ಪೋಟೋಗಳು, ತಿರುಚಿದ ಪೋಟೋಗಳು ಸುಳ್ಳುಸುದ್ದಿಯ ಜೊತೆಗೆ ಹರಿದಾಡುತ್ತಿರುತ್ತವೆ. ನಮಗೆ ಆಸಕ್ತಿ ಇದ್ದಲ್ಲಿ ಇಂತಹಾ ಪೋಟೋಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ನೀವು ಉಪಯೋಗಿಸಬಹುದಾದ ಕೆಲವೊಂದು ಟೂಲ್ಸ್ ಗಳ ಪರಿಚಯ ಇಲ್ಲಿದೆ

Google Reverse Image Search

  ಗೂಗಲ್‌ ಅಭಿವೃದ್ಧಿಪಡಿಸಿದ ರಿವರ್ಸ್‌ ಇಮೇಜ್‌ ಸರ್ಚ್‌ಬಹಳ ಉಪಯುಕ್ತ.ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಕ್ರೋಮ್ (Google Chrome) ಬ್ರೌಸರ್ ತೆರೆದು  images.google.com ಎಂದು ಟೈಪ್ ಮಾಡಿ. ಬ್ರೌಸರ್‌ನ ಮೇಲಿನ ಮೂರು ಚುಕ್ಕೆಗಳ ಮೇಲೆ () ಕ್ಲಿಕ್ ಮಾಡಿ ಮತ್ತು "Desktop site" ಅಥವಾ "Request Desktop Site" ಆಯ್ಕೆಯನ್ನು ಸಕ್ರಿಯಗೊಳಿಸಿ. ಅಲ್ಲಿ ನಿಮಗೆ ಕ್ಯಾಮೆರಾ ಐಕಾನ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಚಿತ್ರವನ್ನು ಅಪ್‌ಲೋಡ್ ಮಾಡಿ ವಿವರವನ್ನು ಪಡೆದುಕೊಳ್ಳಿ. ಆ ಚಿತ್ರವನ್ನು ಮೊದಲು ಎಲ್ಲಿ ಪ್ರಕಟಿಸಲಾಗಿದೆ? ಆ ಚಿತ್ರದ ಜೊತೆಗೆ ಹರಡಿರುವ ಸುದ್ದಿ ಸತ್ಯವೋ ಸುಳ್ಳೋ ಎಂದು ಈ ಮೂಲಕ ಖಚಿತಪಡಿಸಿಕೊಳ್ಳಬಹುದು.

Google Lens (ಗೂಗಲ್ ಲೆನ್ಸ್)

 ಅಂತರ್ಜಾಲದಲ್ಲಿ ಸಂಶಯಾತ್ಪದ ಚಿತ್ರಗಳು ಕಂಡುಬಂದರೆ ಅದನ್ನು ಲಾಂಗ್‌ ಪ್ರೆಸ್‌ ಮಾಡಿ ಅದರಲ್ಲಿ Search with Google Lens ಎಂಬ  ಆಯ್ಕೆಯನ್ನು ಒತ್ತಿ ಅಥವಾ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್‌ಗಳಲ್ಲಿ ಗೂಗಲ್ ಲೆನ್ಸ್ ಎಂಬ ಆಯ್ಕೆ ಲಭ್ಯವಿದೆ  ನಿಮ್ಮ ಗ್ಯಾಲರಿಯಲ್ಲಿ ಯಾವುದೇ ಚಿತ್ರವನ್ನು ತೆರೆದು ಅಪ್ಲೋಡ್‌ ಮಾಡಿ. ಗೂಗಲ್ ಲೆನ್ಸ್ ಆ ಚಿತ್ರದ ಬಗ್ಗೆ ಸಂಬಂಧಿತ ಮಾಹಿತಿಯನ್ನು ಮತ್ತು ಅದೇ ರೀತಿಯ ಚಿತ್ರಗಳನ್ನು ಹುಡುಕಿ ಕೊಡುತ್ತದೆ. ನಿಮಗೆ ಬೇಕಾದ ವಿವರಗಳು ಸಿಗುತ್ತವೆ.

TinEye(ಟಿನ್‌ಐ)

 ನಿಮ್ಮ ಮೊಬೈಲ್‌ನಲ್ಲಿ ವೆಬ್ ಬ್ರೌಸರ್ ತೆರೆಯಿರಿ. ಅಡ್ರೆಸ್ ಬಾರ್‌ನಲ್ಲಿ tineye.com ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ. ಇದು ನಿಮ್ಮನ್ನು TinEye ನ ಅಧಿಕೃತ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಕ್ಯಾಮೆರಾ ಐಕಾನ್ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮ ಮೊಬೈಲ್ ಫೋನ್‌ನ ಫೈಲ್ ಮ್ಯಾನೇಜರ್ ಅಥವಾ ಗ್ಯಾಲರಿಯನ್ನು ತೆರೆಯುತ್ತದೆ. ನೀವು ಪರಿಶೀಲಿಸಬೇಕಾದ ಚಿತ್ರವನ್ನು ಆಯ್ಕೆ ಮಾಡಿ. ನಿಮಗೆ ಚಿತ್ರದ URL ಗೊತ್ತಿದ್ದರೆ, ನೀವು ಅದನ್ನು ಸರ್ಚ್ ಬಾರ್‌ನಲ್ಲಿ ನಮೂದಿಸಬಹುದು ಮತ್ತು ಸರ್ಚ್ ಬಟನ್ ಕ್ಲಿಕ್ ಮಾಡಬಹುದು.

ಗೂಗಲ್  ರಿವರ್ಸ್ ಇಮೇಜ್ ಸರ್ಚ್‌ಗೆ ಹೋಲಿಸಿದರೆ TinEye ಸ್ವಲ್ಪ ಹೆಚ್ಚು ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಚಿತ್ರವನ್ನು ಹುಡುಕುವಾಗ ಆ ಚಿತ್ರದ ಮೂಲ, ಅದರ  ಗಾತ್ರದ ವಿವರ, ಮತ್ತು ಅದನ್ನು ಸಂಪಾದಿಸಿದ ಆವೃತ್ತಿಗಳನ್ನು ತೋರಿಸುತ್ತದೆ. ಇದು ಪೋಟೋಗಳು ಎಷ್ಟು ಬಾರಿ ಬಳಸಲ್ಪಟ್ಟಿವೆ ಮತ್ತು ಅವುಗಳ ಇತಿಹಾಸವನ್ನು ಪತ್ತೆಹಚ್ಚಲು ಬಹಳ ಸಹಾಯಕವಾಗಿದೆ.

FotoForensics (ಫೋಟೊಫಾರೆನ್ಸಿಕ್ಸ್)

ಇದನ್ನು ಡಿಜಿಟಲ್ ಫೋಟೋಗಳ ತಾಂತ್ರಿಕ ವಿಶ್ಲೇಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ELA (Error Level Analysis) ಎಂಬ ತಂತ್ರವನ್ನು ಬಳಸಿ ಚಿತ್ರದಲ್ಲಿ ಮಾಡಿರುವ ಬದಲಾವಣೆಗಳನ್ನು ಗುರುತಿಸುತ್ತದೆ. ಒಂದು ಚಿತ್ರವನ್ನು ಸಂಪಾದಿಸಿದಾಗ, ಆ ಚಿತ್ರದ ವಿವಿಧ ಭಾಗಗಳಲ್ಲಿ ಇರುವ ತಪ್ಪುಗಳು ಅಥವಾ ಅಸಹಜತೆಗಳನ್ನು  ಗುರುತಿಸುತ್ತದೆ. ಚಿತ್ರದ ಯಾವ ಭಾಗವನ್ನು ಸಂಪಾದಿಸಲಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ.

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಬ್ರೌಸರ್‌ನಲ್ಲಿ fotoforensics.com ಎಂದು ಟೈಪ್ ಮಾಡಿ ವೆಬ್‌ಸೈಟ್‌ಗೆ ಭೇಟಿ ನೀಡಿ. ನೀವು ಪರಿಶೀಲಿಸಬೇಕಾದ ಚಿತ್ರ ಅಥವಾ ಚಿತ್ರದ URL ಲಿಂಕ್‌ ಅನ್ನು  ಅಪ್ಲೋಡ್‌ ಮಾಡಿ ವಿವರವನ್ನು ಪಡೆದುಕೊಳ್ಳಿ.

Fake Image Detector (ಫೇಕ್ ಇಮೇಜ್ ಡಿಟೆಕ್ಟರ್)

ಇದು ಆನ್‌ಲೈನ್‌ನಲ್ಲಿ ಲಭ್ಯವಿರುವ ಮತ್ತೊಂದು ಟೂಲ್. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಬ್ರೌಸರ್‌ನಲ್ಲಿ imageedited.com ಎಂಬ ವೆಬ್‌ಸೈಟ್‌ಗೆ ಭೇಟಿ ನೀಡಿ ಪೋಟೋ ಅಪ್ಲೋಡ್‌ ಮಾಡಿ..ಇದು ಪೋಟೋದ ಗುಣಮಟ್ಟ, ಅದರ ಮೆಟಾಡೇಟಾ, ಮತ್ತು Error Level Analysis (ELA) ವಿಶ್ಲೇಷಣೆಯನ್ನು ಆಧರಿಸಿ ಅದು ನಕಲಿಯೋ ಅಥವಾ ಅಸಲಿಯೋ ಎಂದು ತಿಳಿಸುತ್ತದೆ.

 (ಮುಂದಿನ ಸಂಚಿಕೆಯಲ್ಲಿ ವಿಡಿಯೋಗಳ ಸತ್ಯಾಸತ್ಯತೆ  ಪರಿಶೀಲನೆ ಹೇಗೆ?)

ಡಾ.ಗೀತಾ ಎ.ಜೆ

(ಮಾಹಿತಿ: ಗೂಗಲ್‌ ನ್ಯೂಸ್‌ ಇನಿಷಿಯೇಟಿವ್‌, ಟಿನ್‌ ಐ, ಫೋಟೊಫಾರೆನ್ಸಿಕ್ಸ್,ಫೇಕ್ ಇಮೇಜ್ ಡಿಟೆಕ್ಟರ್)