Sunday, November 29, 2020

ಸಾಹಸಿ ‌ಸಿನಿಮಾಗಳ ಸ್ಪೂರ್ತಿ ಸೆವೆನ್ ಸಮುರಾಯ್


 ದಟ್ಟ ಕಾನನದ ಮಧ್ಯೆ ಪುಟ್ಟ ಹಳ್ಳಿ. ಅಲ್ಲಿನ ಶ್ರಮ ಜೀವಿಗಳಿಗೆ ವ್ಯವಸಾಯವೇ ಜೀವಾಳ. ತಾವು ಬೆಳೆದ ಬೆಳೆಯಲ್ಲಿ ಹೊಟ್ಟೆಹೊರೆದು ಉಳಿಕೆಯಾದುದರಲ್ಲಿ ಇತರ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿರುತ್ತಾರೆ. ಸ್ವಾವಲಂಬೀ ಜೀವನ ಬದುಕುತ್ತಿರುವವರಿಗೆ ಇತ್ತೀಚೆಗೆ ಊರಾಚೆ ಕಾಡಿನಲ್ಲಿರುವ ಡಕಾಯಿತರ ಗುಂಪಿನ ದಾಳಿಯದೇ ಚಿಂತೆ. ಇದ್ದಕ್ಕಿದ್ದಂತೆ ಮದಗಜಗಳಂತೆ ಊರಿಗೆ ನುಗ್ಗಿ ಆಹಾರ ಧಾನ್ಯ ಸೇರಿದಂತೆ ಹೆಣ್ಣು- ಹೊನ್ನು ಎಲ್ಲವನ್ನೂ ಹೊತ್ತೊಯ್ಯುವ ಅವರು ಊರ ಜನರ ನಿದ್ದೆಗೆಡಿಸಿರುತ್ತಾರೆ. ಇಷ್ಟರಲ್ಲಿ ಉಪಾಯವೊಂದು ಹೊಳೆಯುತ್ತರೆ, ಡಕಾಯಿತರನ್ನು ಮಣಿಸಲು ಸೂಕ್ತ ಪರಾಕ್ರಮಿಯ ಹುಡುಕಾಟ ನಡೆಸಬೇಕು...

ಅರೆ.... ಈ ಕಥೆ ರಮೇಶ್ ಸಿಪ್ಪಿ ಅವರ ಶೋಲೆಯಂತಿದೆ... ಅಲ್ಲಲ್ಲ ಇದು ಅಮೀರ್ ಖಾನ್ ಅಭಿನಯದ ಮೇಲಾ ಸಿನಿಮಾದ ಎಳೆ... ಇಲ್ಲ ಇದು ಹಾಲಿವುಡ್ ಸಿನಿಮಾ ಮ್ಯಾಗ್ನಿಫಿಷಿಯೆಂಟ್ ಸೆವೆನ್, ಅದೂ ಅಲ್ಲ 1961 ರ ಗನ್ಸ್ ಆಫ್ ನವರೋನ್ .  ಹಾದಲ್ಲ... ಈ ಎಲ್ಲಾ ಸಿನಿಮಾಗಳ ಎಳೆ ಒಂದೇ ಇದೆ, ಆದರೆ ಪ್ರಸ್ತುತಿ ಮಾತ್ರ ಒಂದಕ್ಕೊಂದು ಭಿನ್ನ. ಪಸ್ತುತಪಡಿಸಿದ ಕಥನಗಳು ವಿಭಿನ್ನವಾದರೂ, ಆಶಯ ಮತ್ತು ಕಥೆಯ ಮೂಲ ಒಂದೇ. ಹೌದು ಈ ಎಲ್ಲ ಸಿನಿಮಾಗಳ ಸ್ಫೂರ್ತಿ ಜಾಗತಿಕ ಸಿನಿಮಾ ಕಂಡ ಅತ್ಯದ್ಭುತ ಸಿನಿಮಾ ನಿರ್ದೆಶಕ  ಜಪಾನಿ  ಸಿನಿಮಾಗಳ  ದೈತ್ಯ ಆಕಿರಾ ಕುರೋಸಾವಾರ ಸೆವೆನ್ ಸಮುರಾಯ್.  ದೃಶ್ಯಜಗತ್ತಿನ ಷೇಕ್ಸ್ ಫಿಯರ್ ಎಂದು ಕರೆಯಲ್ಪಡುವ ಆಕಿರಾ ಕುರೋಸೋವಾರ 1954ರ ಚಿತ್ರ ಸೆವೆನ್ ಸಮುರಾಯ್ ಸಿನಿಮಾ ಜಗತ್ತಿನ ಅದ್ಭುತ ವಿಸ್ಮಯ. ಜಪಾನಿ ಸಾಹಸಿ ಸಮುರಾಯ್ ಗಳ ಕಥನಗಳನ್ನೆ ಮುಖ್ಯ ಭೂಮಿಕೆಯನ್ನಾಗಿಸಿ ತನ್ನ ಪ್ರತಿಯೊಂದು ಮಾಸ್ಟರ್ ಪೀಸ್ ಸಿನಿಮಾಗಳಿಗೆ ಮಾಂತ್ರಿಕ ಸ್ಪರ್ಶ ನೀಡಿದ ಕುರೋಸಾವಾ, ಸಮುರಾಯ್ ಸಿನಿಮಾಗಳು ಎಂದೇ ಕರೆಯಲ್ಪಡುವ ಸಿನಿಮಾ 'ಕಲ್ಟ್ ' ಒಂದಕ್ಕೆ ಮುನ್ನುಡಿ ಇಟ್ಟವರು. ಸಾಹಸಿ ಸಿನಿಮಾಗಳಲ್ಲೂ ಮಾನವೀಯ ಪಾಠಗಳನ್ನು ಅತ್ಯಂತ ಜಾಣ್ಮೆಯಿಂದ ಹೆಣೆದ ಕುರೋಸಾವಾ ತನ್ನ ಸಿನಿಮಾದ ಪ್ರತಿ ದೃಶ್ಯಗಳಿಗೂ, ಶಾಟ್ ಗಳಿಗೂ ಸೃಜನಾತ್ಮಕ ಆಯಾಮಗಳನ್ನು ನೀಡಿದ್ದಾರೆ. ಪ್ರತಿ ಶಾಟ್ ಗಳ ಹಿಂದೆಯೂ ಒಂದು ಥಿಯರಿಯನ್ನೇ ಬರೆಯಬಹುದಾದ ಪಾಠಗಳನ್ನು ಸಿನಿಮಾ ಅಧ್ಯಯನದ ವಲಯಕ್ಕೆ ನೀಡಿದ ಕೀರ್ತಿ ಕುರೋಸಾವಾಗೆ ಸಲ್ಲುತ್ತದೆ.



ಜಾಗತಿಕ ಸಿನಿಮಾದಲ್ಲಿ ಸೆವೆನ್ ಸಮುರಾಯ್ ಸ್ಫೂರ್ತಿ

1954ರಲ್ಲಿ ತೆರೆಕಂಡ ಸೆವೆನ್ ಸಮುರಾಯ್ ಸಿನಿಮಾದ ಜಾಡನ್ನು ಅರಸುತ್ತಾ ಹೋದರೆ ಪ್ರತಿ ದೇಶದಲ್ಲೂ ಪ್ರತೀ ಭಾಷೆಯಲ್ಲೂ ನಿರ್ಮಿತವಾದ ಆಕ್ಷನ್ ಚಿತ್ರಗಳಲ್ಲಿ  ಈ ಸಿನಿಮಾದ ಪ್ರಭಾವದ ದಟ್ಟ ಛಾಯೆಯನ್ನು ಗಮನಿಸಬಹುದು.  ಸುಮಾರು ಆರು ದಶಕಗಳಷ್ಟು ಕಾಲ ಗೊತ್ತಿದ್ದೋ, ಗೊತ್ತಿಲ್ಲದೆಯೋ ಇದರ ನೆರಳಿನಡಿಯಲ್ಲಿಯೇ ಸಿನಿಮಾ ನಿರ್ದೆಶಕರು ಅತ್ಯುತ್ತಮ ಎನ್ನುವ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹಾಲಿವುಡ್ ಸಿನಿಮಾ ನಿರ್ದೆಶಕ ಸ್ಟೀವನ್ ಸಿಲ್ವರ್ಬರ್ಗ್ ಹೇಳುವಂತೆ ಸುಮಾರು ಐವತ್ತು ವರ್ಷಗಳ ಕಾಲ ಆಕ್ಷನ್ ಹೀರೋಗಳಿಗೆ ಬದುಕು ಕೊಟ್ಟ ಸಿನಿಮಾ ಇದು!.

ಸೆವೆನ್ ಸಮುರಾಯ್ ಸಿನಿಮಾ ಜಪಾನಿನ ಸೇನಗೊಕು ಅವಧಿಯ ಚಿತ್ರಣವನ್ನು ಬಿಚ್ಚಿಟ್ಟ ಕಥೆ. ಸುಮಾರು 15ರಿಂದ 17ನೇ ಶತಮಾನದ ನಡುವಿನ ಜಪಾನಿನ ರಾಜಕೀಯ, ಆಡಳಿತ ಆರ್ಥಿಕ ಹಾಗೂ ಕಾನೂನು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿ ನಿಲ್ಲುತ್ತದೆ. ಸಿನಿಮಾ ವಿಮರ್ಶಕರ ಪ್ರಕಾರ ಎರಡನೇ ಮಹಾಯುದ್ದದ ನಂತರ ಅಮೇರಿಕಾದ ಚಾಣಾಕ್ಷ್ಯ ನಿಯಂತ್ರಣದ ಅಡಿಯಲ್ಲಿ ನಲುಗಿದ ಕಥೆಯನ್ನೂ ಬಿಚ್ಚಿಡುತ್ತದೆ. ಈ ಸಿನಿಮಾ ಕಟ್ಟಿಕೊಡುವ ಜಪಾನ್ ನಲ್ಲಿ ಜನ ಜೀವನ ದುಸ್ತರವಾಗಿರುತ್ತದೆ, ಒಪ್ಪೊತ್ತಿನ ಊಟಕ್ಕಾಗಿ ಪ್ರಾಣ ಒತ್ತೆ ಇಡುವ ಸಮುರಾಯ್ ಗಳು ಗೋಚರಿಸುತ್ತಾರೆ, ಜೀವ ಭಯದಿಂದ ತತ್ತರಿಸಿ ಹೋಗಿರುವ ದುಡಿಯುವ ವರ್ಗ, ಅಹಿಂಸಾ ಮಾರ್ಗವಾದರೂ ಸರಿ ತಾನು ಹಿಡಿದ ಮಾರ್ಗವನ್ನು ನಿಯತ್ತಾಗಿ ಪಾಲಿಸುವ ಡಕಾಯಿತಿಗಳು ಇದ್ದಾರೆ. ಅಷ್ಟಾಗಿಯೂ ಸಮಾಜದಲ್ಲಿ ತನಗೆ ಒದಗಿಬಂದ ಉದ್ಯೋಗವನ್ನು ನಿಷ್ಠೆಯಿಂದ ಪಾಲಿಸುವ ಜಪಾನಿಗಳ ನಿದರ್ಶನವಾಗಿ ಇಲ್ಲಿನ ಪಾತ್ರದಾರಿಗಳು ಗೋಚರಿಸುತ್ತಾರೆ. ಕಥೆಯಲ್ಲಿ ಮುಖ್ಯ ಪಾತ್ರದಾರಿಗಳಾಗಿರುವ ಏಳು ಸಮುರಾಯ್ ಗಳು ಭಿನ್ನ ವ್ಯಕ್ತಿತ್ವವನ್ನು ಪ್ರಸ್ತುತಪಡಿಸುತ್ತಾರೆ.

ಸಿನಿಮಾ ತಂತ್ರದ ಅದ್ಭುತ ಕಲಾಕೃತಿ

ಸೆವೆನ್ ಸಮುರಾಯ್ ಚಿತ್ರದ ಪ್ರತಿಯೊಂದು ದೃಶ್ಯಗಳು ಸಿನಿಮಾ ಅಧ್ಯಯನ ತರಗತಿಯಲ್ಲಿ ಚರ್ಚೆಗೆ ಒಳಗಾಗುವಂತವು. ಬಹುಶ: ತದನಂತರ ಬಂದ ಯಾವ ಸಾಹಸಿ ಸಿನಿಮಾಗಳೂ ಸೆವೆನ್ ಸಮುರಾಯ್ ಸಿನಿಮಾದ ಎತ್ತರಕ್ಕೆ ಏರಲು ಸಾಧ್ಯವಾಗಲೇ ಇಲ್ಲ. ಈ ಸಿನಿಮಾದ ವಿಶೇಷತೆ ಇರುವುದೇ ವೈಡ್ ಆಂಗಲ್ ಕ್ಯಾಮರಾ ಚಲನೆ, ಜಾಣ್ಮೆಯಿಂದ ಉಪಯೋಗಿಸಿದ ಮಿಸ್ ಎನ್ ಸೀನ್ ತಂತ್ರದಲ್ಲಿ. ವಿಶೇಷ ಇಂದರೆ ಇಡೀ ಸಿನಿಮಾದಲ್ಲಿ ಸ್ಥಿರ ಶಾಟ್ ಅನ್ನುವುದೇ ಇಲ್ಲ. ಪ್ರತಿ ದೃಶ್ಯದ ಮುನ್ನೆಲೆ ಅಥವಾ ಹಿನ್ನೆಲೆಯಲ್ಲಿ ಒಂದಿಲ್ಲೊಂದು ಚಲನೆಯನ್ನು ಗುರುತಿಸಬಹುದು. ಅಂತಹಾ ಛಾಯಾಗ್ರಹಣದ ಸೂಕ್ಷ್ಮತೆಯನ್ನು ಬುದ್ದಿವಂತಿಕೆಯಿಂದ  ಪ್ರಸ್ತುತ ಪಡಿಸಿದವರು ಕುರೋಸೋವಾ.  ದೃಶ್ಯವೊಂದರ ಅಂತಿಮ ಘಟ್ಟದಲ್ಲಿ ನಿಧಾನಗತಿಯ ಕ್ಯಾಮರಾ ಚಲನೆಯನ್ನೇ  ತಂತ್ರವನ್ನಾಗಿಸಿಕೊಂಡ ನಿರ್ದೆಶಕರು ಪ್ರೇಕ್ಷಕ ವರ್ಗಕ್ಕೆ ತಲುಪಿಸಬೇಕಾದುದನ್ನು ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ. ಉದಾಹರಣೆ ಸಮುರಾಯ್ ಗಳ ಅಥವಾ ಡಕಾಯಿತರ ಆಕ್ರಮಣಕ್ಕೊಳಗಾಗಿ ಸಾಯುವ ದೃಶ್ಯವೆಲ್ಲವನ್ನೂ ಕ್ಯಾಮರಾದ ನಿಧಾನಗತಿಯ ಚಲನೆಯಲ್ಲಿ ತೋರಿಸಿರುವ ಕುರೊಸೋವಾ ಕಲಾವಿದನ ನಟನಾ ಪರಾಕ್ರಮವನ್ನು ಹಿನ್ನೆಲೆಗೆ ಸರಿಸಿ ಹಿಂಸೆಯ ಪರಿಣಾಮ ಸಾವು ಹಾಗೂ ಅದು ಭೀಕರ ಎನ್ನುವುದನ್ನು ಸೂಚ್ಯವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ. ಬಹುಶ: ಈಗಿನ ಜನಪ್ರಿಯ ಸಾಹಸಿ ಸಿನಿಮಾಗಳು ನಾಯಕ ನಟನ ಪರಾಕ್ರಮವನ್ನೇ ಕೇಂದ್ರೀಕರಿಸಿಕೊಂಡ ಚಿತ್ರಣವನ್ನು ಪ್ರೇಕ್ಷಕರಿಗೆ ಕಟ್ಟಿಕೊಡುತ್ತಾರೆಯೇ ವಿನಾ: ಹಿಂಸೆಯ ಪರಿಣಾಮ ಭಯಾನಕ ಎನ್ನುವುದನ್ನು ತೋರಿಸುವುದೇ ಇಲ್ಲ. ಅಲ್ಲಿ ಹಿರೋಯಿಸಂ ವಿಜ್ರಂಭಿಸುತ್ತದೆಯೇ ವಿನಾ: ಹಿಂಸೆಯ ನರಳಾಟ ಅಥವಾ ಆಕ್ರಂದನವಲ್ಲ. ಹಾಗಾದಾಗ ಪ್ರೇಕ್ಷಕರು ಹೀರೋಗಿರಿಗೆ ಚಪ್ಪಾಳೆ ಹೊಡೆಯುತ್ತಾರೆಯೇ ಹೊರತು ಹೊಡೆದಾಟದ ನರಳಾಟಕ್ಕೆ ಮರುಕಪಡುವುದೇ ಇಲ್ಲ. ಇದೇ ಕಾರಣಕ್ಕೆ ಸೆವೆನ್ ಸಮುರಾಯ್ ಭಿನ್ನವಾಗಿ ನಿಲ್ಲುವುದು.

ಕಲೆಯ ಸಮಗ್ರ ಪರಿಕಲ್ಪನೆ

ಸೆವೆನ್ ಸಮುರಾಯ್ ಕೇವಲ ಸಾಹಸಿ ಸಿನಿಮಾವಲ್ಲ, ಅದರಲ್ಲಿ ಹಾಸ್ಯವಿದೆ, ಒಲವಿನ ಸಾಂಗತ್ಯವಿದೆ, ಬದುಕೂ ಇದೆ, ಸಾವೂ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ನೈಜತೆಗೆ ಹತ್ತಿರವಾಗುವ ಬದುಕಿನ ಪಾಠವಿದೆ, ಹಿಂಸೆಯ ನಂತರದ ಗೆಲುವೂ ಮರಣದಂತಿರುತ್ತದೆ ಎನ್ನುವ ಸಂದೇಶವೂ ಇದೆ. ಎಲ್ಲಾ ಭಾವಗಳನ್ನು ಒಳಗೊಂಡ ಈ ಸಿನಿಮಾ ದೃಶ್ಯಕಲೆಯ ಅತ್ಯುನ್ನತ ಕೊಡುಗೆ. ಸಿನಿಮಾದಲ್ಲಿ ಬರುವ ಪ್ರತಿಯೊಂದು ಪಾತ್ರಗಳೂ ತಮ್ಮ ವೇಷಭೂಷಣಗಳಿಂದ ನಡವಳಿಕೆಯಿಂದ ತಮಗೊಂದು ಕಥೆಯಿದೆ, ಹಿನ್ನೆಲೆಯಿದೆ ಎನ್ನುವುದನ್ನು ಸಾರುತ್ತಾರೆ, ಒಂದೊಂದು ಪಾತ್ರಕ್ಕೂ ಇರುವ ಸಂಬಂಧದ ಕಥೆಯನ್ನು ಹೆಣೆದ ಜಾಣ್ಮೆಗೆ ತಲೆದೂಗಲೇ ಬೇಕು.

ಸೆವೆನ್ ಸಮುರಾಯ್ ಚಿತ್ರ ಅದರಲ್ಲಿ ಬರುವ ಪ್ರತಿ ಪಾತ್ರಗಳನ್ನೂ ಹದವಾಗಿ ಸಮತೋಲನಗೊಳಿಸಿದ ಚಾಕಚಕ್ಯತೆ ಜಪಾನೀ ತತ್ವವನ್ನು ಪ್ರಸ್ತುತಪಡಿಸುತ್ತದೆ. ಬಹುಕಲಾವಿದರನ್ನು ಒಳಗೊಂಡ ಸಿನಿಮಾದಲ್ಲಿ ಪ್ರತಿಪಾತ್ರಕ್ಕೂ ನ್ಯಾಯ ಒದಗಿಸುವ ಕೆಲಸವನ್ನು ಕುರೋಸಾವಾರಿಂದಲೇ ಕಲಿಯಬೇಕು. ಇದೇ ಸಿನಿಮಾ ಇತರ ಭಾಷೆಗಳಲ್ಲಿ ನಿರ್ಮಾಣವಾದಾಗ  ಆ ಭಾಷೆಯ ಅಥವಾ ಆ ದೇಶದ ತತ್ವಗಳನ್ನು ಪ್ರಸ್ತುತಪಡಿಸಿದೆ, ಉದಾಹರಣೆಗೆ  ಹಾಲಿವುಡ್ ನಲ್ಲಿ ಅಲ್ಲಿನ ತತ್ವಗಳನ್ನು ಬಳಸಿಕೊಂಡು ವೈಯುಕ್ತಿಕ ಪಾತ್ರಗಳ ವೈಭವೀಕರಣದೊಂದಿಗೆ ಕಥನವನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದೆ. ಕುರೋಸೋವಾರ ಸಿನಿಮಾದ ನೆರಳಿನ ಜಾಡನ್ನು ಹೊಂದಿರುವ ಶೋಲೇ ಸಿನಿಮಾವೂ ಭಿನ್ನ ಪ್ರಸ್ತುತಿಯೊಂದಿಗೆ ಕಥನವನ್ನು ಮುಂದಿಟ್ಟಿದೆ. ಇಲ್ಲಿ ಭಾರತೀಯ ಸಿನಿಮಾಗಳ ತತ್ವವನ್ನು  ಸೂಕ್ಮವಾಗಿ ಗಮನಿಸಬಹುದು.

ಬದುಕಿನ ನೈಜ ಚಿತ್ರಣ

ಸಿನಿಮಾ ಕಟ್ಟಿಕೊಟ್ಟ ಅವಧಿಯಲ್ಲಿ ಜಪಾನೀಗಳ ಬದುಕಿನ ಚಿತ್ರಣವನ್ನು ಹಿಡಿದಿಡುವ ಈ ಚಿತ್ರದಲ್ಲಿಸಮುರಾಯ್ ಗಳ ಬಗೆಗಿನ ಕೃಷಿಕರ ದ್ವೇಷ, ಸಮಾಜದಲ್ಲಿರುವ ವರ್ಗ ಬೇಧ, ಅಂತರ್ ವರ್ಗ ವಿವಾಹದ ಬಗೆಗಿನ ಕಟ್ಟುಪಾಡು ನೈಜತೆಗೆ ಹತ್ತಿರವಾಗಿದೆ.  ಭಿನ್ನತೆಯ ಹಾಗೂ ದ್ವೇಷದ ಹಿನ್ನೆಲೆಯಲ್ಲಿ ಸಮುರಾಯ್ ಗಳು ತಮ್ಮೊಳಗೆ ಸೇರಿಸಿಕೊಳ್ಳಲು ಹಿಂಜರಿಯುವ ಕೃಷಿಕರು ತನ್ನ ಅನುಕೂಲಕ್ಕಾಗಿ ಅವರನ್ನು ಬಳಸಿಕೊಳ್ಳುವ ನಿರ್ಧಾರ ಭಿನ್ನತೆಯ ನಡುವೆಯೂ ಪಾಲಿಸುವ ಅನುಕೂಲ ಶಾಸ್ತ್ರ ಸಮಾಜದ ವ್ಯಂಗ್ಯವಾಗಿ ಗೋಚರಿಸುತ್ತದೆ.

ಸೆವೆನ್ ಸಮುರಾಯ್ ಚಿತ್ರದ ಮುಖ್ಯ  ಸಂದೇಶ ಯುದ್ಧದ ಗೆಲುವಿನ ಖಾಲಿತನ. ಗೆಲುವಿನ ಹೋರಾಟದಲ್ಲಿ ಕಳೆದುಕೊಂಡದ್ದಕ್ಕಾಗಿ ಮರುಗುವ ಸಂದರ್ಭಗಳು, ನಾವು ಯಾರಿಗಾಗಿ ಹೋರಾಡಿದ್ದೇವೆಯೋ ಅವರ ವ್ಯಾವಹಾರಿಕ ವರ್ತನೆ ದೀರ್ಘಕಾಲದವರೆಗೂ ಪ್ರೇಕ್ಷಕರನ್ನು ಕಾಡುವ ದೃಶ್ಯಗಳು.

ಒಟ್ಟಿನಲ್ಲಿ ಹಲವಾರು ಭಾವಗಳ ಸಮ್ಮಿಶ್ರಣವನ್ನು ಕಟ್ಟಿಕೊಡುವ ಕುರೊಸಾವಾರ ಸೆವೆನ್ ಸಮುರಾಯ್ ಇಂದಿಗೂ ಚಿತ್ರರಚನೆಗಾರರನ್ನು ಕಾಡುತ್ತದೆ, ಸಿನಿಮಾ ಮಾಡುವಂತೆ ಪ್ರೇರೇಪಿಸುತ್ತದೆ. ಎಲ್ಲೋ ಒಂದು ಕಡೆ ಸೋಲು- ಗೆಲುವು ಬದುಕಿನ ಅವಿಭಾಜ್ಯ ಅಂಗಗಳು ಗೆಲುವಿನಲ್ಲಿ ನೋವಿದೆ, ಕಳೆದುಕೊಂಡದ್ದರಲ್ಲಿ ಮುಂದಕ್ಕಡಿಯಿಡುವ ಛಲವಿದೆ ಎನ್ನುವುದನ್ನು ಈ ಸಾರ್ವಕಾಲಿಕ ಸಿನಿಮಾ ಪ್ರಸ್ತುತಪಡಿಸುತ್ತದೆ.

ಗೀತಾವಸಂತ್ ಇಜಿಮಾನ್


9 comments:

  1. ಕಾಲೇಜಿನಲ್ಲಿ ಸಿನಿಮಾ ವಿಮರ್ಶೆ ಮಾಡಲು ಹೇಳಿದ್ದು ನೆನಪಾಯಿತು.ಓದಿದಾಗ ಸಿನಿಮಾ ನೋಡಬೇಕೆಂದೆನಿಸಿದೆ. Congratulations for starting your own blog ma'am.I will be waiting to read more, Thank you

    ReplyDelete
  2. Than you...this blog was created 10 years back...stopped uploading articles few years back..just rewiring now..

    ReplyDelete
  3. ಅತ್ಯುತ್ತಮ ವಿಮರ್ಶಾ ಬರಹ..ನಾನು ಆ ಸಿನಿಮಾ ನೋಡದಿದ್ರು ಆ ಸಿನಿಮಾದ ಬಗ್ಗೆ ಬರೆದ ವಿಮರ್ಶೆ ಚಿತ್ರದತ್ತ ಸೆಳೆಯುತ್ತಿದೆ..ಆಧುನಿಕತೆಯ ಸ್ಪರ್ಶವೇ ಇಲ್ಲದ ಆ ಕಾಲದಲ್ಲಿ ಇಂತದೊಂದು ವಿಷ್ಮಯ ನಡೆದಿರುವುದು ನಿಜಕ್ಕೂ ಅಚ್ಚರಿ..ಬರವಣಿಗೆಯ ಮೆರವಣಿಗೆ ಸಾಗುತಿರಲಿ..

    ReplyDelete
  4. This comment has been removed by the author.

    ReplyDelete
  5. Gambling & Casino - DrmCD
    Casino & Table Games 계룡 출장마사지 for Gambling & Entertainment in Atlantic City. 통영 출장마사지 Learn about 시흥 출장마사지 the casino's bonus and slots options, promotions, customer 대구광역 출장샵 support, Address: 777 Casino Drive, Atlantic City, NJ 대구광역 출장마사지 08401

    ReplyDelete