Friday, December 18, 2020

ಸಿನಿಮಾ ರಹಸ್ಯಗಳ ಮಾಂತ್ರಿಕ , ಐಕಾನಿಕ್ ನಿರ್ದೇಶಕ ಆಲ್‌ಫ್ರೆಡ್ ಹಿಚ್‌ಕಾಕ್

 

(ಉದಯವಾಣಿ‌ ಪತ್ರಿಕೆಯಲ್ಲಿ ೨೦೧೯, ಆಗಸ್ಟ್ ೧೩ ರಂದು ‌ಪ್ರಕಟವಾದ‌ ನನ್ನ ಬರಹ)

ಸಮೂಹ ಸಂವಹನ ವಿದ್ಯಾರ್ಥಿಗಳು ಅಥವಾ ಸಿನಿಮಾ ಅಧ್ಯಯನದ ವಿದ್ಯಾರ್ಥಿಗಳು ಆಗಾಗ್ಗೆ ತರಗತಿಯಲ್ಲಿ, ರಸಗ್ರಹಣ ಶಿಬಿರಗಳಲ್ಲಿ ಚರ್ಚಿಸುವ ವ್ಯಕ್ತಿ ‘ಆಲ್‌ಫ್ರೆಡ್ ಹಿಚ್‌ಕಾಕ್’ ಹಾಗೂ ಆತನ ಸಿನಿಮಾ ತಂತ್ರ. ಜಾಗತೀಕ ಸಿನಿಮಾದಲ್ಲಿ ‘ಐಕಾನಿಕ್ ನಿರ್ದೇಶಕ ಎಂದೆನಿಸಕೊಂಡ ಆಲ್‌ಫ್ರೆಡ್ ಹಿಚ್‌ಕಾಕ್ ಹುಟ್ಟಿದ್ದು ಆಗಸ್ಟ್ ೧೩, ೧೮೯೯ರಲ್ಲಿ.  


ಆಲ್‌ಫ್ರೆಡ್ ಹಿಚ್‌ಕಾಕ್ ಪ್ರೇಕ್ಷಕರ ಸಿನಿಮೀಯ ಅನುಭವವಕ್ಕೆ ಹೊಸಭಾಷ್ಯವನ್ನು ಬರೆದವರು. ರಹಸ್ಯ, ಕುತೂಹಲ ಹಾಗೂ ರೋಚಕ ಕಥನಗಳನ್ನು ಸಿನಿಮಾಕ್ಕೆ ಇಳಿಸಿ, ಸಿನಿಮಾಸಕ್ತರಿಗೆ ಹೊಸ ಅನುಭವವನ್ನೇ ಕಟ್ಟಿಕೊಟ್ಟವರು. ಸಿನಿಮಾ ಜಗತ್ತಿನಲ್ಲಿ ಕೆಲವೊಂದು ಸಿನಿಮಾಗಳು ನಟರ ಹೆಸರಿನಲ್ಲಿ ಗುರುತಿಸಿಕೊಂಡರೆ, ಕೆಲವೊಂದು ಸಿನಿಮಾಗಳು ನಿರ್ದೇಶಕರ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತವೆ.  ನಿರ್ದೇಶಕನ ಸಿನಿಮಾ ಎಂಬ ಸಾಲಿಗೆ ಸೇರಿಕೊಳ್ಳುವವು ಹಿಚ್‌ಕಾಕ್ ನಿರ್ದೇಶಿತ ಚಿತ್ರಗಳು. ಈ ನಿಟ್ಟಿನಲ್ಲಿ   ಆಲ್‌ಫ್ರೆಡ್ ಹಿಚ್‌ಕಾಕ್ ಒಬ್ಬ ಸ್ಟಾರ್ ನಿರ್ದೇಶಕ.

ಒಬ್ಬ ಸಾಮಾನ್ಯ ಟೈಟಲ್ ಕಾರ್ಡ್ ವಿನ್ಯಾಸಕಾರನಾಗಿ ವೃತ್ತಿ ಜೀವನ ಆರಂಭಿಸಿದ ಹಿಚ್‌ಕಾಕ್ ತದನಂತರದಲ್ಲಿ ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆ ಐತಿಹಾಸಿಕ ಮೌಲ್ಯವುಳ್ಳದ್ದು.  ಜಗತ್ತಿನ ಎಲ್ಲಾ ಸಿನಿಮಾ ಅಧ್ಯಯನ ಪಠ್ಯದಲ್ಲಿ ಹಿಚ್‌ಕಾಕ್‌ನ ಸಿನಿಮಾ ತಂತ್ರಗಳು ಓದಲೇಬೇಕಾದ ವಿಷಯ. ತನ್ನ ನಿರ್ದೇಶನದ ವೃತ್ತಿಯನ್ನು ಆರಂಭಿಸಿದ್ದು ೧೯೨೫ರ ‘ದಿ ಫ್ಲೆಷರ್’ ಗಾರ್ಡನ್ ಎಂಬ ಸಿನಿಮಾದ ಮೂಲಕ. ಆದರೆ ೧೯೨೭ರಲ್ಲಿ ನಿರ್ದೇಶಿಸಿದ ‘ದಿ ಲಾಡ್ಜರ್’ ಎಂಬ ಚಿತ್ರ  ‘ಥ್ರಿಲ್ಲರ್’ ಎಂಬ ಹೊಸ ಸಿನಿಮಾ ವಿಧವನ್ನು ಆರಂಭಿಸುವಲ್ಲಿ ನಾಂದಿ ಹಾಡಿತು. ಆ ಎಲ್ಲ ಚಿತ್ರಗಳು ಗಳಲ್ಲಿ ಬಳಸಿದ ಸಿನಿಮಾ ತಂತ್ರಗಳು ಕಾಲಾನಂತ್ರದಲ್ಲಿ  ‘ಹಿಚ್‌ಕಾಕಿಯನ್’ ತಂತ್ರ  ಎಂದೇ ಪ್ರಸಿದ್ಧಿಗೆ ಬಂತು.

ಹಿಚ್‌ಕಾಕಿಯನ್ ತಂತ್ರ

ವ್ಯಕ್ತಿಯ ಕಣ್ಣೋಟದ ಭ್ರಮೆಯನ್ನು  ಬಿಂಬಿಸುವ ಕ್ಯಾಮರಾ ಚಲನೆ. ಕ್ಯಾಮರಾ ದೃಷ್ಟಿಕೋನವೇ ನೋಡುಗನ ದೃಷ್ಟಿಯಾಗಿ ಪರಿವರ್ತನೆಯಾಗಿ ಆ ದೃಶ್ಯದ ಪ್ರತ್ಯಕ್ಷದರ್ಶಿ ತಾನು ಎಂಬ ಭಾವದ ಸ್ಫುರಣ. ನೋಡುವ ದೃಶ್ಯಕ್ಕೆ ಅನುಗುಣವಾಗಿ ಮನಸ್ಸನ್ನು ಕೆರಳಿಸುವ ತಂತ್ರ (voyeur). ಆತಂಕ ಹಾಗೂ ಭಯಾನಕತೆಯನ್ನು ಬಿಂಬಿಸುವ ದೃಶ್ಯಗಳು... ಇವೆಲ್ಲಾ ಹಿಚ್‌ಕಾಕ್ ಸಿನಿಮಾವನ್ನು ಇತರ ಸಿನಿಮಾಗಳಿಂದ ಭಿನ್ನಗೊಳಿಸುವಂತವು. ಬಹುಶ: ತದನಂತರದ ಎಲ್ಲಾ ಥ್ರಿಲ್ಲರ್ ಸಿನಿಮಾಗಳು ಹಿಚ್‌ಕಾಕಿಯನ್ ತಂತ್ರವನ್ನೇ ಅನುಸರಿಸಿವೆ. ಭಯಾನಕತೆಯನ್ನು ಹೆಚ್ಚಿಸಲು ಕ್ಯಾಮಾರ ಕಣ್ಣಿನ ಹುಡುಕಾಟ, ಅನೀರೀಕ್ಷಿತವಾಗಿ ಎದುರಾಗುವ ಅಪಾಯ, ಅಪಘಾತ.... ಇದು ಹಿಚ್‌ಕಾಕ್ ಚಿತ್ರಗಳ ವಿಶೇಷತೆ. ಹಿಚ್‌ಕಾಕ್‌ನ ಪ್ರಕಾರ ‘ಯಾವುದೇ ಸಿನಿಮಾದಲ್ಲಿ ಭಯಾನಕತೆ ಎಂಬುದಿಲ್ಲ. ಬದಲಾಗಿ ಪ್ರೇಕ್ಷಕರನ್ನು ಆಸನದ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿಸುವ ದೃಶ್ಯಗಳು ಹಾಗೂ ಇನ್ನೇನು ಬೀಕರ ಸತ್ಯ ಹೊರಬಹುದು ಎಂಬುದರ ನಿರೀಕ್ಷೆಯೇ ಭಯಾನಕತೆ. ಇದೇ ತಂತ್ರಗಾರಿಕೆಯನ್ನು ತನ್ನ ಸಿನಿಮಾದ ದೃಶ್ಯಗಳಲ್ಲಿ ಹೇರಳವಾಗಿ ಉಪಯೋಗಿಸಿಕೊಂಡಿದ್ದಾರೆ.

ಹಿಚ್‌ಕಾಕಿಯನ್ ಶೈಲಿಯಲ್ಲಿ ಗಮನಿಸುವಂತ ಇನ್ನೊಂದು ತಂತ್ರವೆಂದರೆ ‘ಮ್ಯಾಕ್‌ಗಫೀನ್ (MacGuffin). ಸಿನಿಮಾದ ಕಥೆಯ ಬೆಳವಣಿಗೆ ಹಾಗೂ ಪಾತ್ರ ಪೋಷಣೆಗೆ  ಯಾವುದೋ ಒಂದು ವಸ್ತು, ಅಥವಾ ಪದವನ್ನು ಬಳಸಲಾಗುತ್ತದೆ. ಉದಾಹಣೆಗೆ ಜನಪ್ರೀಯ ಹಾಲಿವುಡ್ ಚಿತ್ರ ಟೈಟಾನಿಕ್, ಅದರಲ್ಲಿ ಸಂಶೋಧಕನೊಬ್ಬ ಹುಡುಕುವ ನೀಲಿಹರಳಿನ ನೆಕ್ಲೇಸ್. ಈ ಹುಡುಕಾಟ ಟೈಟಾನಿಕ್ ಎಂಬ ಸುಂದರ ಪ್ರೇಮ ಕಥೆಯೊಂದು ಬಿಚ್ಚಿಕೊಳ್ಳಲು ನೆರವಾಗುತ್ತದೆ. ಅದೇ ರೀತಿ ಆರ್ಸನ್ ವೇಲ್ಸ್ ನಿರ್ದೇಶಿಸಿದ  ‘ಸಿಟಿಜನ್ ಕೇನ್’ ಎನ್ನುವ ಚಿತ್ರದಲ್ಲಿ ‘ರೋಸ್‌ಬಡ್’ ಎನ್ನುವ ಪದ. ಈ ಪದವೇ ಕಥಾನಾಯಕನ ಬದುಕಿನ ವಿವಿಧ ಮಜಲುಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನೆರವಾಗುತ್ತದೆ. ಮ್ಯಾಕ್‌ಗಫೀನ್‌ಗೆ ಪ್ರೇಕ್ಷಕರ ದೃಷ್ಟಿಯಲ್ಲಿ ಪ್ರಾಮುಖ್ಯತೆ ಇರುವುದಿಲ್ಲ, ಅಥವಾ ಸಿನಿಮಾದಲ್ಲಿ ಅದು ಒಂದು ಹಾದುಹೋಗುವ ಒಂದು ಶಾಟ್ ಆಗಿರುತ್ತದೆ. ಆದರೆ ಪೂರ್ತಿ ಕಥೆ ಮ್ಯಾಕ್‌ಗಫೀನ್ ಮೇಲೆ ನಿಂತಿರುತ್ತದೆ. 

ಹಿಚ್‌ಕಾಕ್‌ನ ಚಿತ್ರಗಳ ಇನ್ನೋಂದು ವಿಶೇಷತೆ ಎಂದರೆ, ಆತ ನಿರ್ದೇಶಿಸಿದ ಹೆಚ್ಚಿನ ಚಿತ್ರಗಳಲ್ಲಿ ಸಣ್ಣ ಪಾತ್ರವೊಂದರಲ್ಲಿ ಹಾದುಹೋಗುವ ಹಿಚ್‌ಕಾಕ್ (ಕ್ಯಾಮಿಯೋ ಅಫಿಯರೆನ್ಸ್), ಹಿಚ್‌ಕಾಕ್ ನಿರ್ದೇಶಿಸಿದ ೫೨ ಚಿತ್ರಗಳಲ್ಲಿ ಸುಮಾರು ೩೯ ಚಿತ್ರಗಳಲ್ಲಿ ಆತನ ಕ್ಯಾಮಿಯೋ ಪಾತ್ರಗಳನ್ನು ಗುರುತಿಸಬಹುದು. ಇಂತಹಾ ಪಾತ್ರಗಳಿಗೆ ಚಿತ್ರದಲ್ಲಿ ಯಾವುದೇ ಮಹತ್ವವಿರುವುದಿಲ್ಲ , ಅದು ಕೆಲವೊಮ್ಮೆ ಸಂಭಾಷಣೆರಹಿತ ಪಾತ್ರವೂ ಆಗಿರಬಹುದು.  ಆ ಪಾತ್ರ ಯಾವುದೋ ದೃಶ್ಯದಲ್ಲಿ ಬರುವ ದಾರಿಹೋಕನೂ ಆಗಿರಬಹುದು, ಗಡಿಯಾರ ರಿಪೆರಿ ಮಾಡುವವನೂ ಇರಬಹುದು, ವೈದ್ಯ, ಲಾಯರ್ ಇತ್ಯಾದಿ. ಉದಾಹರಣೆಗೆ ಹಿಂದಿ ಚಿತ್ರನಿರ್ದೇಶಕ ಮಧುರ್ ಭಂಡಾರ್‌ಕರ್ ತನ್ನೆಲ್ಲಾ ಚಿತ್ರಗಳಲ್ಲಿ ಒಮ್ಮೆ ತೆರೆಯಮೇಲೆ ಹಾದುಹೋಗುತ್ತಾರೆ. ಕನ್ನಡ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್ ತನ್ನ ಚಿತ್ರಗಳಲ್ಲಿ ಒಂದು ದೃಶ್ಯದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ.

ಅತ್ಯಂತ ಸೂಕ್ಷ್ಮ  ಹಾಗೂ ವಿವರಣಾತ್ಮಕ ಕಥಾಫಲಕ (ಸ್ಟೋರಿಬೋರ್ಡ್) ಹಿಚ್‌ಕಾಕ್ ಸಿನಿಮಾದ ಇನ್ನೊಂದು ವಿಶೇಷತೆ . ಬರಹಗಾರನ ಜೊತೆಯಲ್ಲೆ ಕುಳಿತು ಅತೀ ಸಣ್ಣ ದೃಶ್ಯವನ್ನು  ವಿವರಣಾತ್ಮಕವಾಗಿ ಬರೆಯಲು ನಿರ್ದೇಶಿಸುತ್ತಿದ್ದರಂತೆ. ಇದರ ಜೊತೆಗೆ ನಟನೆ ಹಾಗೂ ಸಂಪಾದನೆಗೆ  ಅವರು ನೀಡುತ್ತಿದ್ದ ಮಹತ್ವ. ಸೋವಿಯತ್‌ನ ಮಾಂಟಾಜ್  ಸಿದ್ದಾಂತದಿಂದ ಅತ್ಯಂತ ಪ್ರಭಾವಿತರಾಗಿದ್ದ  ಹಿಚ್‌ಕಾಕ್ ಸಿನಿಮಾದಲ್ಲಿ ಸಂಬಾಷಣೆಗಿಂತ ನಟನೆ ಹಾಗೂ ಎಡಿಟಿಂಗ್ ಅತ್ಯಂತ ಪರಿಣಾಮಕಾರಿ ಎಂಬುದನ್ನು ತಮ್ಮ ಚಿತ್ರಗಳಲ್ಲಿ ಮತ್ತೆ ಮತ್ತೆ ನಿರೂಪಿಸಿದ್ದರು.

*ನೆನಪಿಡುವಂತಹಾ ದೃಶ್ಯ*

ಆಲ್‌ಫ್ರೆಡ್ ಹಿಚ್‌ಕಾಕ್ ತನ್ನ ಸಿನಿಮಾದಲ್ಲಿ ಕಟ್ಟಿಕೊಟ್ಟ ಕೆಲವೊಂದು ದೃಶ್ಯಗಳು ಇಂದಿಗೂ ‘ಅಬ್ಬಾ’ ಎನಿಸುವಂತದ್ದು, ಗ್ರಾಫಿಕ್ಸ್, ಅಧುನಿಕ ಎಡಿಟಿಂಗ್ ತಂತ್ರಗಳಿಲ್ಲದ ಆ ಕಾಲದಲ್ಲಿ  ಅತ್ಯದ್ಭುತ ದೃಶ್ಯಗಳನ್ನು ತಮ್ಮ ಸಿನಿಮಾದಲ್ಲಿ ಸೇರಿಸಿಕೊಂಡಿದ್ದಾರೆ. ೧೯೬೦ರ ‘ಸೈಕೋ’ ಚಿತ್ರದಲ್ಲಿ ಇರುವ ‘ ಸ್ನಾನಗೃಹದ’ ದೃಶ್ಯ, ಸಿನಿಮಾ ತಂತ್ರದ ಉತ್ತಮ ಉದಾಹರಣೆ, ಕೇವಲ ೪೫ ಸೆಕೆಂಡುಗಳ ಕಾಲದ ಆ  ದೃಶ್ಯದಲ್ಲಿ ಹಿಚ್‌ಕಾಕ್ ಬಳಸಿದ್ದು ಸುಮಾರು ೫೨ ಶಾಟ್‌ಗಳು. ಇಂದಿಗೂ ಅದು ಸಿನಿಮಾ ಲೋಕದ ಅದ್ಭುತವಾಗಿಯೇ ಉಳಿದುಕೊಂಡಿದೆ.


ಒಂದಷ್ಟು ವಿವಾಧ ಹಾಗೂ ಆರೋಪಗಳಿಗೂ ಹಿಚ್‌ಕಾಕ್ ಹೊರತಲ್ಲ ಮುಖ್ಯವಾಗಿ ಮಹಿಳಾ ಪಾತ್ರಗಳ ಚಿತ್ರಣ ಹಾಗೂ ಸಿನಿಮಾ ನಟರ ಜೊತೆ ಆತನ ವರ್ತನೆ. ಪ್ರಮುಖವಾಗಿ ಚರ್ಚೆಗೆ ಹಾಗೂ ಟೀಕೆಗೆ ಗುರಿಯಾಗುವುದು ಹಿಚ್‌ಕಾಕ್ ಸಿನಿಮಾದ ಸ್ತ್ರೀ ಪಾತ್ರಗಳು, ಹೆಚ್ಚಾಗಿ ಸ್ತ್ರೀ ಪಾತ್ರಗಳು ಕಳ್ಳತನ, ವಂಚನೆ, ಅಪರಾಧ ಪ್ರವೃತ್ತಿ, ಲೈಂಗಿಕ ವಾಂಛೆಯಿರುವ ಪಾತ್ರಗಳಾಗಿ ಬಿಂಬಿಸಲಾಗುತ್ತದೆ. ಇನ್ನೊಂದು ಸಿನಿಮಾ ಕಲಾವಿಧರ ಕುರಿತ ಆವರ ವಿಚಾರಧಾರೆ, ಹಿಚ್‌ಕಾಕ್‌ನ ಪ್ರಕಾರ, ನಟರು ಕೇವಲ ನಟನೆಯಷ್ಟೇ ಮಾಡಬೇಕು, ಅವರ ಸೃಜನೆಶೀಲತೆಗೆ ಅಥವಾ ಸಲಹೆಗಳಿಗೆ ಅವಕಾಶವಿಲ್ಲ.

ಇಷ್ಟೇಲ್ಲಾ ಟೀಕೆಗಳಿದ್ದರೂ ಆಲ್‌ಫ್ರೇಡ್ ಹಿಚ್‌ಕಾಕ್ ಒಬ್ಬ ಅತ್ಯದ್ಭುತ ನಿರ್ದೇಶಕನಾಗಿ ಇಂದಿಗೂ ಪ್ರಸ್ತುತವಾಗುತ್ತಾರೆ. ಸಸ್ಫೆನ್ಸ್, ಥ್ರಿಲ್ಲರ್ ಸಿನಿಮಾಗಳ ಜನಕನಾಗಿ ಸಿನಿಮಾ ಪ್ರೀಯರಿಗೆ ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಅನುಭವಿಸುವ ಅವಕಾಶವನ್ನು ಮಾಡಿಕೊಟ್ಟವರು. ಬ್ರಿಟಾನಿಕ ಎನ್‌ಸೈಕ್ಲೋಪಿಯಾದ ೧೪ನೇ ಆವೃತ್ತಿಯಲ್ಲ ಸಿನಿಮಾ ನಿರ್ಮಾಣದ ಕುರಿತ ಅವರ ಬರಹ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣದ ತಂತ್ರಗಳನ್ನು ಬಿಚ್ಚಿಟ್ಟಿವೆ.

ಆರು ದಶಕಗಳ ಸಿನಿಮಾಯಾನದಲ್ಲಿ ಆತ ನಿರ್ದೇಶಿಸಿದ್ದು ಬರೋಬ್ಭರಿ ೫೨ ಚಿತ್ರಗಳು, ೧೯೬೦ರ ಹೊತ್ತಿಗೆ ಹಿಚ್‌ಕಾಕ್ ನಿದೇಶಿಸಿದ ಕೆಲ ಚಿತ್ರಗಳು ಅತ್ಯದ್ಭುತ ಚಿತ್ರಗಳಾಗಿ ಮೂಡಿಬಂದವು, ೧೯೫೪ರ ರಿಯರ್‌ವಿಂಡೋ, ವೆರ್ಟಿಗೋ(೧೯೫೮), ನಾರ್ಥ ಬೈ ನಾರ್ಥ್ ವೆಸ್ಟ್, ಸೈಕೋ (೧೯೬೦) ಸಿನಿಮಾ ವಲಯದಲ್ಲಿ ಈಗಲೂ ಚರ್ಚೆಗೆ ಗ್ರಾಸವಾಗುವ ಅಧ್ಯಯನ ಯೋಗ್ಯ ಚಿತ್ರಗಳು, ಥ್ರಿಲ್ಲರ್ ಹಾಗೂ ಡಿಟೆಕ್ಟಿವ್ ಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಹಿಚ್‌ಕಾಕಿಯನ್ ತಂತ್ರದ ಪ್ರಭಾವಕ್ಕೆ ಒಳಗಾದವೇ.

ಗೀತಾವಸಂತ್ ಇಜಿಮಾನ್


No comments:

Post a Comment