Monday, August 30, 2010

ಸಿನಿಮಾಕೆ ಹೋಗೋಣ ಬಾರಾ...

ಸಿನಿಮಾವನ್ನು 'ವಂಡರ್' ಆಗಿಯೇ ನೋಡಬೇಕೆಂದಿಲ್ಲ. ಸ್ವಲ್ಪ ಜಾಗೃತಾವಸ್ಥೆ ಇದ್ದರೆ ಸಾಕು. ಇಲ್ಲದಿದ್ದರೆ ನಮ್ಮೆಲ್ಲಾ ಜೀವನ ಶೈಲಿಯನ್ನು, ಹಾವಭಾವವನ್ನು, ನಿರ್ಧಾರಗಳನ್ನು ರೂಪಿಸುವ ಈ ಬೃಹತ್ ಮಾದ್ಯಮಕ್ಕೆ ಮರುಳಾಗಿ ವಂಡರ್ ಲೋಕದಲ್ಲಿಯೇ ಇರುತ್ತೇವೆ. ಪ್ರಪಂಚದ ಹಾಗೂ ಬದುಕಿನ ಎಲ್ಲಾ ಸಂಗತಿಗಳನ್ನು ಒಳಗೊಂಡ ಸಿನಿಮಾ ನಮ್ಮನ್ನು ನಿಮ್ಮನ್ನು ಮೂರ್ಖರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಬದಲಾಗಿ ಅರ್ಥ ಮಾಡಿಕೊಂಡರೆ ಸಿನಿಮಾ 'ಚಂದ'ವಾಗಿ ಕಾಣಿಸುತ್ತದೆ. ಈ ಚಂದ ನಿಮ್ಮನ್ನು ಚಿಂತನೆಗೆ ಹಚ್ಚುತ್ತದೆ. ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸುತ್ತದೆ.


ಹೀಗೆ ನೋಡಿ ಸಿನಿಮಾ.

ಮಬ್ಬುಗತ್ತಲು. ಪರದೆಯಲ್ಲಿ ಚಲಿಸುತ್ತಿರುವ ಚಿತ್ರಗಳು ಮನಸ್ಸನ್ನು ಹಿಡಿದಿಟ್ಟಿವೆ. ಅಮಲಿನತ್ತ ಚಿತ್ತವನ್ನು ಕೊಂಡೊಯ್ದಿದೆ. ಪ್ರೇಕ್ಷಕ ತಲ್ಲಿನನಾಗಿ ಬಿಟ್ಟಿದ್ದಾನೆ... ಇದು ಸಿನಿಮಾ. ಸಿನಿಮಾದ ಶಕ್ತಿಯೇ ಅಂತದ್ದು ಒಂದು ಪರದೆಯೊಳಗೆ ನಮ್ಮೆಲ್ಲಾ ಏಕಾಗ್ರತೆಯನ್ನು ಹಿಡಿದಿಡುತ್ತದೆ.ಸಿನಿಮಾ ಎಂದರೆ ಸಾಮಾನ್ಯವಾಗಿ ಅದು 'ಸುಂದರ'. ಅಲ್ಲಿ ಹಿರೋಯಿನ್ ಕಣ್ಣಿರು 'ಚಂದ'. ಹಿರೋನ ಅಬ್ಬರ ಸೂಪರ್. ಪ್ರೇಯಸಿಯ ಮಡಿಲಲ್ಲಿ ಪ್ರಾಣ ಬಿಡುವ ನಾಯಕನೂ ಚೆಂದವಾಗಿಯೇ ಕಾಣುತ್ತಾನೆ. ಸಿನಿಮಾ ತೆಗೆಯೋದೇ ಒಂದು ಚಂದಕ್ಕಾಗಿ. ಈ ಚೆಂದ ಖುಷಿಯ ಅಮಲನ್ನು ತಂದುಕೊಡುತ್ತದೆ. ಈ ಖುಷಿಯ ಅಮಲಿಗೆ ಮರುಳಾಗುವ ಮುನ್ನ ಸಣ್ಣ ಎಚ್ಚರವಿದ್ದರೆ ಸಿನಿಮಾ ಅರ್ಥ''ವಾಗುತ್ತದೆ. ಸಿನಿಮಾ 'ನೋಡುವ ಕಲೆ' ನಿಮ್ಮದಾಗುತ್ತದೆ. ಸಾಹಿತ್ಯಿಕ ಭಾಷೆಯಲ್ಲಿ ಅದನ್ನು 'ಅಫ್ರಿಶಿಯೇಷನ್' ಅಂತಾನೂ ಕರೆಯಬಹುದು. ಬೇಕಾದುದು ಸಣ್ಣ ಎಚ್ಚರ ಅಷ್ಟೆ. ಆದರೆ ಈ ಎಚ್ಚರ ಮೊದಲ ವೀಕ್ಷಣೆಯಲ್ಲಿ ಸಾಧ್ಯವಿಲ್ಲ. ಯಾಕೆಂದರೆ ಸಿನಿಮಾದ ಕಥೆ ನಿಮ್ಮನ್ನು ಮರುಳು ಮಾಡಿಬಿಡುತ್ತದೆ. ಎರಡನೇ ಸಲ ನೋಡಿ ಆಗ ಸಿನಿಮಾ ಅರ್ಥವಾಗುತ್ತದೆ.


ಕ್ಯಾಮರಾ ಕಣ್ಣು
ಸಿನಿಮಾ ವೀಕ್ಷಣೆಗೆ ದಿನನಿತ್ಯದ ಆಗುಹೋಗುಗಳ ವೀಕ್ಷಣೆಗೂ ವ್ಯತ್ಯಾಸ ಇದೆ. ಸಿನಿಮಾವನ್ನು ನಾವು ಕ್ಯಾಮರಾ ಕಣ್ಣಿನಲ್ಲಿ ನೋಡುತ್ತೇವೆ. ಇಲ್ಲಿ ನಿರ್ದೇಶಕ ಯಾವುದನ್ನು ಪ್ರೇಕ್ಷಕರಿಗೆ ತೋರಿಸಬೇಕು ಎಂದು ಬಯಸುತ್ತಾನೋ ಅದನ್ನು ಮಾತ್ರ ನೀಡುತ್ತಾನೆ. ಸುತ್ತಲಿನ ಪ್ರಪಂಚ ನೋಡುವಾಗಿನ 'ಚಾಯ್ಸ್' ಇಲ್ಲಿ ಇಲ್ಲ. ನಿರ್ದೇಶಕ ಏನು ನೀಡುತ್ತಾನೋ ಅದನ್ನು ಮಾತ್ರ ನೋಡಬೇಕು. ಶಬ್ದ ಅಥವಾ ಮಾತಿನ ವಿಷಯಕ್ಕೆ ಬಂದರೆ ಸೌಂಡ್ ರೆಕಾಾಾರ್ಡಿಂಗ್ ಏನಾಗಿದೆಯೋ ಅದು ಮಾತ್ರ ನಮಗೆ ಕೇಳಿಸುತ್ತದೆ. ಸಿನಿಮಾ ನೋಡುವಾಗ ಈ ಅರಿವು ನಿಮ್ಮಲ್ಲಿ ಇರಲಿ.ಏನು ಹೇಳಿತು? ಎಷ್ಟು ಹೇಳಿತು? ಕ್ಯಾಮರಾ ಚಲಿಸುತ್ತಿದೆ ಎಂಬ ಗಮನ ಇದ್ದರೆ ಸಿನಿಮಾ ಏನು ಹೇಳಿತು ಎಷ್ಟು ಹೇಳಿತು ಮತ್ತು ಹೇಗೆ ಹೇಳಿತು ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಒಂದು ದೃಶ್ಯವನ್ನು ಯಾವ ಅರ್ಥಕ್ಕಾಗಿ ಹೇಳಿತು ಮತ್ತು ಹೊಸ ರೀತಿಯಾಗಿ ಹೇಳಿತೇ ಎಂಬ ಬಗ್ಗೆ ಗಮನಿಸಿ. ಗಿರೀಶ್ ಕಾಸರವಳ್ಳಿ ಅವರ ಸಿನಿಮಾ ದ್ವೀಪದಲ್ಲಿ ಕೊನೆಯ ದೃಶ್ಯವನ್ನು ಗಮನಿಸಿ. ನಟ ಅವಿನಾಶ್, ನಟಿ ಸೌಂದರ್ಯ ಹಾಗೂ ನೀರು ಈ ದೃಶ್ಯವನ್ನು ನೋಡಿ. ನಿರ್ದೇಶಕ ಅದನ್ನು ಯಾಕಾಗಿ ಹಾಕಿದ ಮತ್ತು ಯಾವ ರೀತಿ ಪ್ರಸ್ತುತಪಡಿಸಿದ ಎಂಬ ಬಗ್ಗೆ ಚಿಂತಿಸಿ ನೋಡಿ. ದ್ವೀಪ 'ಅರ್ಥ'ವಾಗುತ್ತದೆ.

ಸುತ್ತಲಿನ ಪರಿಸರ
ಸಿನಿಮಾದಲ್ಲಿ ನಟ ನಟಿಯರನ್ನು ಬಿಟ್ಟು ಇತರ ಸಂಗತಿಗಳನ್ನು ಎಷ್ಟು ಹೇಳಿತು ಎಂಬುದನ್ನು ನೋಡಿಕೊಳ್ಳಿ. ಕೇವಲ ನಟನಟಿಯರಿದ್ದರೆ ಸಿನಿಮಾ ಆಗುವುದಿಲ್ಲ. ಸುತ್ತಲಿನ ಪ್ರಕೃತಿಯನ್ನು ಒಳಗೊಂಡಾಗ ಮಾತ್ರ ಅಲ್ಲೊಂದು ಭಾವ ಸ್ಪುರಿಸುತ್ತದೆ. ಇದಕ್ಕಾಗಿಯೇ 'ಮುಂಗಾರು ಮಳೆ' ಯಾಕೆ ಯಶಸ್ವಿಯಾಯಿತು ಎಂಬ ಬಗ್ಗೆ ಸ್ವಲ್ಪ ಯೋಚಿಸಿದರೆ ನಿಮಗರ್ಥವಾಗುತ್ತದೆ. ಮಳೆ ಮತ್ತು ಪ್ರಕೃತಿಯನ್ನು ಕ್ಯಾಮರಾದಲ್ಲಿ ಹಿಡಿದಿಟ್ಟ ರೀತಿಯೇ ಸುಂದರ ಅದಕ್ಕಾಗಿ ಸಿನಿಮಾ 'ಚಂದ'ವಾಯಿತು. ಗಿರೀಶ್ ಕಾಸರವಳ್ಳಿ ಅವರ ದ್ವೀಪ ಚಿತ್ರವನ್ನು ಮತ್ತೊಮ್ಮೆ ಇಲ್ಲಿ ನೆನಯಬಹುದು. ಅವರು ನೀರು ಹಾಗೂ ಬೆಂಕಿಯನ್ನು ಸಮರ್ಥವಾಗಿ ಬಳಸಿಕೊಂಡ ರೀತಿ ಗಮನಿಸಿ. ದೀಪಾ ಮೆಹ್ತಾ ಅವರ 'ವಾಟರ್' ಚಿತ್ರಕೂಡಾ ಪ್ರಕೃತಿಯ ಮೂಲಕವೇ ಕಥೆಯನ್ನು ಹೇಳಿದೆ ಎಂಬುದನ್ನು ಸ್ಮರಿಸಬಹುದು.


ಎಷ್ಟು ಹೊತ್ತು
ಸಿನಿಮಾ ಯಾವತ್ತೂ ರಿಯಲ್ ಸ್ಪೀಡ್ನಲ್ಲಿ ನಡೆಯುವುದಿಲ್ಲ. ಕೆಲವು ಸನ್ನಿವೇಶಗಳನ್ನು ಬೇಗ ತೋರಿಸಬಹುದು ಇನ್ನ ಕೆಲವನ್ನು ನಿಧಾನವಾಗಿ ತೋರಿಸಬಹುದು. ಎಲ್ಲದರ ಉದ್ದೇಶವೆಂದರೆ ಏನನ್ನು ಹೇಳಬೇಕೋ ಅದನ್ನು ಹೇಳುವುದು. ಯಾವ ರೀತಿ ಹೇಳಿದರೆ ಸಿನಿಮಾದ ಚೆಲುವು ಇಮ್ಮಡಿಸುತ್ತದೆ ಎಂಬುದನ್ನು  ನಿರ್ದೇಶಕ ನಿರ್ಧರಿಸುತ್ತಾನೆ. ಪ್ರೇಕ್ಷಕರ ಉಸಿರು ಬಿಗಿ ಹಿಡಿಯುವಂತೆ ಮಾಡಲು ನಿರ್ದೇಶಕ ನಿಧಾನ ತಂತ್ರವನ್ನು ಬಳಸುತ್ತಾನೆ ಅಥವಾ ಅನಿರೀಕ್ಷಿವಾದುದನ್ನ ತಿಳಿಸಲು ಈ ತಂತ್ರ ಸಹಾಯವಾಗುತ್ತದೆ. ಅದಕ್ಕಾಗಿಯೇ ನಾಯಕ ಪ್ರಾಣ ಬಿಡುವ ಅಥವಾ ಪ್ರಾಣ ತೆಗೆಯುವ ಸಂದರ್ಭದಲ್ಲಿ ಬುಲೆಟ್ ನಿಧಾನವಾಗಿ ಸಾಗುತ್ತದೆ,. ನೆರೆದವರ ಮನದಲ್ಲಿ ದಿಗಿಲು ಆಶ್ಚರ್ಯ ಮನೆಮಾಡಿರುತ್ತದೆ... ಕೆಲವು ಸೆಕೆಂಡ್ ಗಳ ಕಾಲ ಈ ದೃಶ್ಯ ಪರದೆಯ ಮೇಲಿರುತ್ತದೆ. ಕಥೆ ಮುಂದುವರೆಯಲು ಕೆಲವೊಂದು ಸನ್ನಿವೇಶ ಪ್ರಮುಖ ಎಂದೆನಿಸಿದರೆ ಅದನ್ನು ಬೇಗ ತೋರಿಸಿಬಿಡುತ್ತಾನೆ. ಆದರೆ ಸಿನಿಮಾದ ಕಥೆಯ ಅಮಲಿನಲ್ಲಿ ಮುಳುಗಿದರೆ ಮಾತ್ರ ಇದನ್ನು ಗಮನಿಸಲು ಸಾಧ್ಯವಾಗುವುದಿಲ್ಲ.

ಸಂಗೀತ
ಸಿನಿಮಾ ಸಂಗೀತವೊಂದಿದೆ. ಅದು ಯಾವ ಸಂಗೀತ ಪ್ರಕಾರವೂ ಅಲ್ಲ. ಸಿನಿಮಾ ಸಂಗೀತ ಕೆಲವೊಮ್ಮೆ ಇರುತ್ತದೆ ಕೆಲವೊಮ್ಮೆ ಇರುವುದಿಲ್ಲ. ಕೆಲವೊಮ್ಮೆ ಹೆಚ್ಚಾಗುತ್ತದೆ. ಮಗದೊಮ್ಮೆ ಕಡಿಮೆಯಾಗುತ್ತದೆ ಇದನ್ನು ಗಮನಿಸಿದ್ದೀರಾ?. ಈ ಸಂಗೀತ ಸಿನಿಮಾಕ್ಕೆ ಹೊಸ ಅರ್ಥವನ್ನು ಕೊಡುತ್ತದೆ. ಸಂಗೀತ ಹೊಸತನವನ್ನು ನೀಡಿದೆಯಾ? ಎಂಬುದನ್ನು ಗಮನಿಸಬೇಕು.

ಮೌನ
ಶಬ್ದಕ್ಕಿಂತ ಹೆಚ್ಚಿನದನ್ನು ಮೌನ ಹೇಳುತ್ತದೆ. ಇಲ್ಲಿ ಮೌನ ಮಾತನಾಡುತ್ತದೆ. ಭೀಕರವಾದುದನ್ನು, ಆಶ್ಚರ್ಯವಾದುದನ್ನು ಸಮರ್ಥವಾಗಿ ಹೇಳುವುದೆಂದರೆ ಅದು ಮೌನ. ಮಾತಲ್ಲ. ಒಮ್ಮೊಮ್ಮೆ ಸಿನಿಮಾದ ಕ್ಲೈಮಾಕ್ಸ್ ಹೇಳಲು  ನಿರ್ದೇಶಕ ಮೌನದ ಮೊರೆ ಹೋಗುತ್ತಾನೆ. ಈ ಮೌನ ಸಿನಿಮಾದಲ್ಲಿ ಎಷ್ಟು ಸಲ ಬಳಕೆಯಾಗಿದೆ. ಇದರಿಂದ ಏನು ಹೇಳಲು ಸಾಧ್ಯವಾಯಿತು ಎಂಬುದನ್ನು ಗಮನಿಸಿ. ಸಿನಿಮಾದಲ್ಲಿ ಕೊಲೆಯಾಯಿತು ಎಂದಿಟ್ಟುಕೊಳ್ಳಿ ಅಲ್ಲಿ ಪ್ರಾಣ ಬಿಟ್ಟವನು ಗೋಳಿಡಬೇಕೆಂದಿಲ್ಲ. ನೀರವ ಮೌನವೊಂದಿದ್ದರೆ ಸಾಕಲ್ಲವೆ?.

ಕತ್ತಲು
ಸಿನಿಮಾದಲ್ಲಿ ಬೆಳಕಿನಷ್ಟೇ ಪ್ರಾಮುಖ್ಯತೆ ಕತ್ತಲಿಗಿರುತ್ತದೆ. ಇದು ಸಿನಿಮಾಕ್ಕೆ ನ್ಯಾಚುರಲ್ ಎಫೆಕ್ಟ್ ನೀಡುತ್ತದೆ. ಒಮ್ಮೊಮ್ಮೆ ಸಿನಿಮಾ ಬದುಕಿಗೆ ಹತ್ತಿರವಾಗಲು ಈ ಶೈಲಿಯೂ ಕಾರಣವಾಗುತ್ತದೆ. ಜಾಗತಿಕ ಸಿನಿಮಾದತ್ತ ಕಣ್ಣು ಹಾಯಿಸಿದರೆ ಮಬ್ಬುಗತ್ತಲಿನಲ್ಲಿ ಸಿನಿಮಾ ತಗೆಯುವ ನಿರ್ದೇಶಕರಿದ್ದಾರೆ.
ಇಷ್ಟೆಲ್ಲಾ ಸಂಗತಿಗಳನ್ನು ಒಳಗೊಂಡ ಸಿನಿಮಾದಲ್ಲಿ ಕೆಲವೊಂದು ಅಂಶಗಳನ್ನಾದರೂ ಗಮನಿಸದಿದ್ದರೆ ನಾವು ಮೋಸ ಹೋಗಿ ಬಿಡುತ್ತೇವೆ. ನಾವು ಸಿನಿಮಾವನ್ನು 'ವಂಡರ್' ಆಗಿಯೇ ನೋಡಬೇಕೆಂದಿಲ್ಲ. ಸ್ವಲ್ಪ ಜಾಗೃತಾವಸ್ಥೆ ಇದ್ದರೆ ಸಾಕು. ಇಲ್ಲದಿದ್ದರೆ ನಮ್ಮೆಲ್ಲಾ ಜೀವನ ಶೈಲಿಯನ್ನು, ಹಾವಭಾವವನ್ನು, ನಿಧರ್ಾರಗಳನ್ನು ರೂಪಿಸುವ ಈ ಬೃಹತ್ ಮಾದ್ಯಮಕ್ಕೆ ಮರುಳಾಗಿ ವಂಡರ್ ಲೋಕದಲ್ಲಿಯೇ ಇರುತ್ತೇವೆ. ಪ್ರಪಂಚದ ಹಾಗೂ ಬದುಕಿನ ಎಲ್ಲಾ ಸಂಗತಿಗಳನ್ನು ಒಳಗೊಂಡ ಸಿನಿಮಾ ನಮ್ಮನ್ನು ನಿಮ್ಮನ್ನು ಮೂರ್ಖರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಬದಲಾಗಿ ಅರ್ಥ ಮಾಡಿಕೊಂಡರೆ ಸಿನಿಮಾ 'ಚಂದ'ವಾಗಿ ಕಾಣಿಸುತ್ತದೆ. ಈ ಚಂದ ನಿಮ್ಮನ್ನು ಚಿಂತನೆಗೆ ಹಚ್ಚುತ್ತದೆ. ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸುತ್ತದೆ.

-ಗೀತಾ  ವಸಂತ್ ಇಜಿಮಾನ್

1 comment:

  1. good writeup you have given a new idea to watch movies... thank u geeth

    ReplyDelete