Tuesday, August 19, 2025

ಇಂದಿನ ಸುದ್ದಿ ನಾಳಿನ ರದ್ದಿಯಾಗಲಿ

 ‘ಇಂದಿನ ಸುದ್ದಿ ನಾಳಿನ ರದ್ದಿ’ , ‘News is a dairy product’  - ಈ ಮಾತು ಬಹಳ ಹಳೆಯದು. ಇಂದಿನ ಸುದ್ದಿ ನಾಳೆ ಮೌಲ್ಯ ಕಳೆದುಕೊಳ್ಳುತ್ತದೆ ಅನ್ನುವ ಅರ್ಥದಲ್ಲಿ ಕಟ್ಟಿಕೊಟ್ಟದ್ದು. ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯ ಸುತ್ತಾ ನಡೆಯುವ ಅಧ್ವಾನಗಳನ್ನು ನೋಡುತ್ತಾ ಇದ್ದರೆ, ʼಅಯ್ಯೋ ಯಾಕೆ ಈ ಸುದ್ದಿ  ರದ್ದಿಯಾಗ್ತಾ ಇಲ್ಲʼ, ʼಹುಳಿಯಾಗಿ ಸಿಂಕ್‌ಗೆ ಸೇರ್ತಾ ಇಲ್ಲʼ ಅನ್ನುತ್ತಾ ಮರುಗಬೇಕೆನಿಸುತ್ತಿದೆ. 

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹುದೊಡ್ಡ ಸದ್ದುಮಾಡುತ್ತಾ ಹರಿದಾಡುತ್ತಿರುವ ಹುರುಳಿಲ್ಲದ ಕಟ್ಟುಕಥೆಯನ್ನು ಗಮನಿಸುತ್ತಾ ಇದ್ದರೆ ಇದೊಂದು ವೇದಿಕೆ  ಯಾಕಾದ್ರೂ ಇಂತಹಾ ವ್ಯಕ್ತಿಗಳ ಕೈಗೆ ಸಿಕ್ಕಿಬಿಟ್ಟಿತೋ ಅಂತ ಅನಿಸುತ್ತಾ ಇದೆ. ಅದು ಸಮಾಜದ ಮೇಲೆ ಮಾಡುತ್ತಿರುವ ಪರಿಣಾಮ, ದೇಶದ ಆಸ್ತಿಯಾಗಬೇಕಿದ್ದ ಅತ್ಯಂತ ಮೌಲ್ಯಯುತ ಸಮಯವನ್ನು ಮೊಬೈಲ್‌ ಸ್ಕ್ರೀನ್‌ ಮುಂದೆ ಕಳೆಯುವ  ಯುವ ಪಡೆಯನ್ನು ನೋಡುತ್ತಾ ಇದ್ದರೆ ಇದಕ್ಕಿಂತಾ ದೊಡ್ಡ ಭಯೋತ್ಪಾನೆ ಇನ್ನೇನಿರಲು  ಸಾಧ್ಯ? ಎಂದೆನಿಸುತ್ತಾ ಇದೆ. ಮರುದಿನ ರದ್ದಿಯಾಗಿ ಕಸದ ಬುಟ್ಟಿಯಲ್ಲಿ ಸೇರದೆ, ಹುಳಿಯಾಗಿ ಗಟಾರಕ್ಕೆ ಇಳಿಯದೇ ವಾಸನೆ ಬೀರುತ್ತಾ ಸುತ್ತಲೇ ಸುಳಿದಾಡುತ್ತಿರುವಾಗ ಈ ಮಾಲಿನ್ಯದ ವಾತಾವರಣ ಸ್ವಚ್ಚವಾಗುವುದಾದರೂ ಹೇಗೆ ಎನ್ನುವ ಚಿಂತೆ ಸುದ್ದಿಯ ಮೌಲ್ಯ ತಿಳಿದವರಿಗಷ್ಟೇ ಗೊತ್ತು.

ಸುದ್ದಿ ಯಾಕೆ ರದ್ದಿಯಾಗಬೇಕು? ಡೈರಿ ಉತ್ಪನ್ನವಾಗಬೇಕು?

ಯಾವುದೇ ಡೈರಿ ಉತ್ಪನ್ನವಾರೂ ಅದನ್ನು ತಯಾರಿಸಲು ಒಂದು ಪ್ರಕ್ರಿಯೆ ಇರುತ್ತದೆ. ಹಾಲನ್ನು ಸಂಗ್ರಹಿಸಿ, ಹೆಪ್ಪುಗಟ್ಟಿಸಿ, ನಂತರ ಮೊಸರು, ಮಜ್ಜಿಗೆ ಅಥವಾ ಬೆಣ್ಣೆಯಾಗಲು ಒಂದು ನಿರ್ದಿಷ್ಠ ಸಮಯ ಬೇಕಾಗುತ್ತದೆ. ಈ ಪ್ರಕ್ರಿಯೆಗೆ ಒಳಪಡಿಸದೇಹಾಲನ್ನು ಹಾಗೇ ಇಟ್ಟರೆ ಆ ಹಾಲು  ಸುಮಾರು ೮ ರಿಂದ ೧೦ ಗಂಟೆಯೊಳಗೆ ಹುಳಿ ಹಿಡಿದು ಕೆಟ್ಟು ಹೋಗುತ್ತದೆ. ಇಂದು ನಾವು ಸಾಕ್ಷಿಯಾಗ್ತಾ ಇರುವುದು ಇಂತಹಾ ಘಟನೆಗಳಿಗಳಿಗೆ ಅನ್ನುವುದು ವಿಪರ್ಯಾಸ.  ಸಾಮಾಜಿಕ ಜಾಲತಾಣಗಳಲ್ಲಿ ಇದೇ ರೀತಿಯ ಸುದ್ದಿಯೆಂಬ ಕೆಟ್ಟ ಹಾಲನ್ನು ಮತ್ತೆ ಮತ್ತೆ ಉಪಯೋಗಿಸಿ, ದುರ್ನಾತ ಬೀರುವಂತಾಗುತ್ತಿದೆ. ಅನೇಕ ಯೂಟ್ಯೂಬ್‌ ಚಾನೆಲ್ ಗಳು, ಅಥವಾ ಸಾಮಾಜಿಕ ಜಾಲತಾಣಗಳ ಪುಟಗಳು ಈ ಕೆಲಸ ಮಾಡುತ್ತಿವೆ. ಅತ್ಯಂತ ಮಧುರವಾಗಿ ಸುದ್ದಿಯೆಂಬ ಹಾಲನ್ನು ಹೆಪ್ಪುಗಟ್ಟಿಸಿ ಗಟ್ಟಿ ಮೊಸರನ್ನು, ಸವಿಯಾದ ಬೆಣ್ಣೆಯನ್ನು ಕೊಡುವ ಕೆಲಸಮಾಡುವವರಿಲ್ಲ ಅಂತಲ್ಲ. ಅವರ ಸಂಖ್ಯೆ ಬಹಳ ಕಡಿಮೆ ಇದೆ.  

ದುಡ್ಡೊಂದೇ ಮಂತ್ರ ಅನ್ನುವ ವ್ಯಕ್ತಿಗಳ ಕೈಗೆ ಸಿಕ್ಕ ಈ ನವ ಮಾಧ್ಯಮದ ವೇದಿಕೆಗಳು  ತೀಕ್ಣ ಟೀಕೆಗಳಿಗೆ ಒಳಗಾಗುತ್ತಿವೆ. ಇಂತಹಾ ವ್ಯಕ್ತಿಗಳು ತಮ್ಮ ಕೈಯಲ್ಲಿ ಈ ಮಾಧ್ಯಮಗಳನ್ನು ಟೂಲ್‌ ಆಗಿ ಇಟ್ಟುಕೊಂಡು ನಡೆದ ಘಟನೆಗಳನ್ನು, ಅಥವಾ ಹುರುಳಿಲ್ಲದ ಆರೋಪಗಳನ್ನು, ಅದರ ಸತ್ಯಾಸತ್ಯತೆಯನ್ನು ಅರಿಯದೇ, ಆಳವಾದ ವಿಶ್ಲೇಷಣೆ ಇಲ್ಲದೆ ತಕ್ಷಣವೇ ಪ್ರಸಾರ ಮಾಡುವುದು ಮಾತ್ರ ಅಲ್ಲ , ಅದನ್ನೆ ತಿರುಚಿ, ಊಹಾಪೋಹ ಎನ್ನುವ ಉಪ್ಪು ಕಾರ ಸೇರಿಸಿ ಪ್ರಸಾರ ಮಾಡುತ್ತವೆ. ಆ ಸುದ್ದಿಯೆಂಬ ಹಾಲಿಗೆ  ಸತ್ಯದ, ತಾರ್ಕಿತ ಆಂಶಗಳನ್ನು ಸೇರಿಸಿ ಹೆಪ್ಪುಗಟ್ಟಿಸಿ, ಸಂಸ್ಕರಿಸದೇ ಇಟ್ಟಾಗ ಅದು ಹುಳಿ ಹಿಡಿದು ಕಟ್ಟುಹೋಗುತ್ತದೆ.  ಉದಾಹರಣೆಗೆ, ಒಂದು ರಾಜಕೀಯ ಹೇಳಿಕೆಯನ್ನು  ಅದರ ಪೂರ್ಣ ಸಂದರ್ಭದಿಂದ ತೆಗೆದು, ಕೇವಲ ಅಕ್ರೋಶ ಭರಿತ  ಶಿರ್ಷಿಕೆಯನ್ನು ನೀಡುವುದು ಅಥವಾ ಯಾವುದೋ ಸಮಾಜಮುಖಿ ಕೆಲಸ ಮಾಡುವ ಸಂಸ್ಥೆಯ ಬಗ್ಗೆ, ಮುಖಂಡರ ಬಗೆಗೆ ಮಾಡುವ ಆರೋಪವನ್ನೇ  ನಿಜ ಎಂದು ಬಿತ್ತರಿಸುತ್ತಾ ದಿನ, ತಿಂಗಳು, ವರ್ಷಗಟ್ಟಲೇ ಹುಳಿಯಾಗಿ ದುರ್ನಾತ ಬರುವಂತೆ  ಬಿಂಬಿಸುವುದು ಇತ್ಯಾದಿ.

ಹಾಳಾದ ಹಾಲು ಸಂಸ್ಕಾರ ಇಲ್ಲದೆ,  ಚೀಸ್‌ ಆಗದೇ, ಮಜ್ಜಿಗೆಯೂ ಆಗದೆ, ಹೇಗೆ ಇಡೀ ಮನೆಯ ವಾತಾವರಣವನ್ನು ಅಸಹ್ಯಕರವಾಗಿಸಬಹುದೋ ಹಾಗೆಯೇ  ಹಾಳಾಗಿ ಹುಳಿ ಹಿಡಿದ  ಸುದ್ದಿ  ನಮ್ಮ ಮಾನಸಿಕ ಸ್ವಾಸ್ಥ್ಯದ ಮೇಲೆ ಗಂಭಿರ ಪರಿಣಾಮ ಬೀರಬಹುದು. ಕೆಟ್ಟು ಹೋದ ಹಾಲು ನಮ್ಮ ಮಾನಸಿಕ ಸ್ವಾಸ್ಥ್ಯದ ಮೇಲೆ ಮಾತ್ರ ಆಲ್ಲ ದೈಹಿಕ ಆರೋಗ್ಯದ ಮೇಲೆ, ನಮ್ಮ ಮೌಲ್ಯಯುತವಾದ ಸಮಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಕಲ್ಪನೆಯೇ ನಮ್ಮನ್ನು ಆತಂಕಿತಗೊಳಿಸುತ್ತದೆ.

ಮಾನಸಿಕ ಅಜೀರ್ಣತೆ

ಸತ್ಯಾಸತ್ಯತೆಯಿಲ್ಲ, ಅರ್ಧಂಬರ್ಧ ಸುದ್ದಿಯನ್ನು ನಿರಂತರವಾಗಿ ಸೇವಿಸುವುದರಿಂದ ಮಾನಸಿಕ ಅಜೀರ್ಣತೆಯನ್ನು ಉಂಟಾಗಿ ಮನಸ್ಸು ಗೊಂದಲಗೊಳಗಾಗುತ್ತದೆ. ಸತ್ಯ ಯಾವುದು?, ಸುಳ್ಳು ಯಾವುದು ಎಂಬ ವಿಶ್ಲೇಷಣಾ ಶಕ್ತಿಯನ್ನು ಕಳೆದುಕೊಂಡು, ಕೇವಲ ಭಾವನಾತ್ಮಕ  ಪ್ರಕ್ರಿಯೆಗೆ ಒಳಗಾಗುತ್ತೇವೆ. ಒಂದು ಕ್ಷಣದ ಆಕ್ರೋಶ, ಮತ್ತೊಮ್ಮ ಕೋಪ, ಆತಂಕ ಇದೆಲ್ಲವೂ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅದು ನಮ್ಮ ದೈಹಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಸಮಾಜದ ಮೇಲೆ ಬೀರುವ ಪರಿಣಾಮವಂತೂ ಅತಿ ಬೀಕರ.

ಸಂಸ್ಕರಿಸದ ಸುದ್ದಿ ಸಮಾಜದಲ್ಲಿ ದ್ವೇಷ, ಸೈದ್ದಾಂತಿಕ ಯುದ್ದ, ಕೋಮು ಗಲಭೆಯನ್ನು ಸೃಷ್ಟಿ ಮಾಡಿ ಸೌಹಾರರ್ಧತೆಯನ್ನು ಹಾಳು ಮಾಡುತ್ತದೆ. ಸತ್ಯಾ ಸತ್ಯತೆ ಇಲ್ಲದೆ, ವ್ಯಕ್ತಿ, ಸಂಘಟನೆ, ಸಂಸ್ಥೆ, ಸಮುದಾಯದ ವಿರುದ್ಧ ಸುಳ್ಳು ಸುದ್ದಿ ಹರಡಿದಾಗ ಅದು ಜನರ ಭಾವನಾತ್ಮಕ ನಂಬಿಕೆಯನ್ನು ಘಾಸಿ ಮಾಡುತ್ತದೆ. ಸಮುದಾಯಗಳ ನಡುವೆ ನಂಬಿಕೆ ಕಳೆದುಕೊಳ್ಳಲು ಕಾರಣವಾಗುತ್ತದೆ. ಈ ಹುಳಿಯಾದ ಹಾಲು ಹದವಾಗಿ ಬೆರೆತ ಇಡೀ ಸಮಾಜದ ನಂಬಿಕೆಯೆಂಬ ಮೊಸರನ್ನು ಹಾಳು ಮಾಡುತ್ತದೆ. ಹಾಗಾಗಿ ಸುದ್ದಿ ರದ್ದಿಯಾಗಬೇಕಲ್ಲವೇ?. ಈ ರದ್ದಿಯನ್ನೇ ಹೆಕ್ಕಿ ಮತ್ತೆ ಮತ್ತೆ ಜನರಿಗೆ ನೀಡುತ್ತಾ ಇದ್ದರೆ ಅದಕ್ಕೆ ಬೆಲೆ ಇದೆಯೇ?.

ಹಾಗಾಗಿ  ಸಮಾಜದ ಒಳಿತಿಗಾಗಿ ಸತ್ಯಾಂಶವಿಲ್ಲದ, ಸರಿಯಾಗಿ ಸಂಸ್ಕರಿಸದ ಸುದ್ದಿ ರದ್ದಿಯಾಗಲೇಬೇಕು. ಆ ಹಾಲು ಗಟಾರಕ್ಕೆ ಸೇರಲೇ ಬೇಕು. ಉತ್ತಮ ಮಜ್ಜಿಗೆ, ಬೆಣ್ಣೆ ಅಥವಾ ಚೀಸ್‌ ತಯಾರಿಸಲು ಸಮಯ ಬೇಕು,  ಸಾವಾಧಾನ ಬೇಕು. ಅದೇ ರೀತಿ ಉತ್ತಮ ಸುದ್ದಿ ಸಿದ್ದಪಡಿಸಲು, ಅದರ ಹಿಂದೆ ಆಳವಾದ ಸಂಶೋಧನೆ, ಸತ್ಯಾಂಶಗಳ ಪರಿಶೀಲನೆ ಬೇಕೇ ಬೇಕು. ಇಷ್ಟಕ್ಕೂ  ಸಮಯ ಇಲ್ಲ ಅಂದರೆ ಒಬ್ಬ ಜನಸಮಾನ್ಯನಿಗೆ ಇರಬೇಕಾದ ಕನಿಷ್ಠ ತಾರ್ಕಿಯ ಯೋಚನೆಯ ಹಿನ್ನೆಲೆಯಾದರೂ ಇರಬೇಕು. ವಿವಿಧ ಆಯಾಮಗಳಲ್ಲಿ ಮಾಡಿದ ವಿಶ್ಲೇಷಣೆ ಮಾತ್ರ ಉತ್ತಮ ಬೆಣ್ಣೆಯಂತೆ, ಮಜ್ಜಿಗೆಯಂತೆ ನಮ್ಮ ಸುದ್ದಿ ಬೋಜನವನ್ನು ಸಮೃಧ್ದ ಗೊಳಿಸಬಹುದು. ನಮ್ಮ ಬೌದ್ದಿಕ ಚಿಂತನೆಗಳಿಗೆ ಪೌಷ್ಠಿಕಾಂಶ ಕೊಡಬಹುದು.  ಸುದ್ದಿಗಳು ಅಂದಂದೇ ಹೊಸದಾಗಿ, ಅಥವಾ ಹಳೆಸುದ್ದಿಯಾದರೂ ಹೊಸ ವಿಶ್ಲೇಷಣೆಯೊಂದಿಗೆ, ಹೊಸ ಮಾಹಿತಿಯೊಂದಿಗೆ ಬಂದರೆ ಮಾತ್ರ ನಮ್ಮ ಮನಸ್ಸಿಗೆ ಆರೋಗ್ಯ ಕೊಡಬಹುದು. ವಿಶ್ಲೇಷಣಾತ್ಮಕ, ಸಂಶೋಧನಾತ್ಮಕ  ಮಾಹಿತಿ ಮಾತ್ರ ನಮ್ಮ ಸುದ್ದಿ ಭೋಜನವನ್ನು ಸುಭಿಕ್ಷವಾಗಿಸಬಹುದು. ಹಾಗಾಗಿ ಇಂದಿನ ಸುದ್ದಿ ರದ್ದಿಯಾಗಲಿ. ವಾಸನೆಗಟ್ಟಿದ ಹಾಲು, ಹುಳಿಯಾದ ಮೊಸರನ್ನೇ ದಿನಾ ಉಣಿಸುವ ಕೆಲಸ ಮಾಡಬಾರದು.

ನಾವು ಓದುಗರಾಗಿ, ನೋಡುಗರಾಗಿ ಅರ್ಥಮಾಡಿಕೊಳ್ಳಬೇಕಾಗಿರುವುದು ಇಷ್ಟೆ ನಮಗೆ ಬೇಕಾಗಿರುವುದು ಕ್ಷಣಾರ್ಧದಲ್ಲಿ ಹುಳಿ ಹಿಂಡಿದ ಹಾಲಲ್ಲ,  ಅಥವಾ ನಿನ್ನೆಯ ಹುಳಿ ಹಿಡಿದ, ಹಳಸಿದ ಹಾಲು ಕೂಡಾ ಅಲ್ಲ. ಹೊಸದಾದ, ತರ್ಕಬದ್ದವಾದ, ಸಂಶೋಧನೆಯ ಘಮವಿರುವ ತಾಜಾ ಹಾಲಿನಂತ ಸುದ್ದಿ. ನಿನ್ನೆಯದು ನಿನ್ನೆಗೇ ಇರಲಿ, ಅದು ರದ್ದಿಗೇ ಸೇರಲಿ, ಹೊಸ ಆಯಾಮರುವ ತಾಜಾ ಹಾಲಿನಂತ ಸುದ್ದಿ ನಮ್ಮ ಮಾನಸಿಕ ಆರೋಗ್ಯಕ್ಕೆ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದು.

 ಗೀತಾ ಎ.ಜೆ


5 comments:

  1. Hopefully the case in reference will serve as an initiation point for proper regulation of social media. Freedom of expression should not translate to freedom of abuse/ exploitation. Quite a long way to go but the journey has to start somewhere.

    ReplyDelete
  2. ಮೇಡಂ
    ಲೇಖನ ಚೆನ್ನಾಗಿದೆ. ಸುದ್ದಿಗಳು ಮಾರಾಟಕ್ಕಿವೆ. ಓದಲಿಕ್ಕೆ ಅರಿವು ಪಡೆದುಕೊಳ್ಳಲಿಕ್ಕೆ ಎಂಬ ಪ್ರಜ್ಞೆ ಮಸಕಾಗುತ್ತಿದೆ. ಹಾಲಿನಂತ ಮನಸ್ಸುಗಳು ಸುದ್ದಿಗಳು ಇಂದಿನ ಸಮಾಜಕ್ಕೆ ಬೇಕು

    ಅಭಿನಂದನೆಗಳು 🙏🙏

    ReplyDelete
  3. ಈ ದಿನದ ಸುದ್ದಿಗೆ ಇದು ಉತ್ತರ

    ReplyDelete
  4. ಸತ್ಯ ಮನೆಯ ಹೊಸಲು ದಾಟುವುದರೊಳಗೆ ಸುಳ್ಳು ಊರು ಸುತ್ತಿ ಬಂದಿತ್ತಂತ್ತೆ.

    ReplyDelete
  5. Hundred percent right

    ReplyDelete