ಸಿನೆಮಾ ಅಂದರೆ ಹಾಗೆನೇ ಅದೊಂದು ಮಾಯಾಲೋಕ. ಅದೊಂದು ಕನಸು. ಆದರೆ ಈ ಮಾಯಾಲೋಕದ ಕನಸು ಕಥೆಗಾರನ ಕಲ್ಪನೆಯ ಕಿನ್ನರ ಲೋಕದಿಂದಲೋ ಅಥವಾ ಚಂದಿರನ ಬೆಳಕ ಬೆರಗಿನಿಂದಲೇ ಅರಳಬೇಕೆಂದೆನಿಲ್ಲ. ಆ ಕನಸಿನ ಪ್ರೇರಣೆ, ಪ್ರಪಂಚದ ಯಾವುದೋ ಹಳ್ಳಿಗಾಡಿನ ಮನೆಯ ಅಂಗಳದಲ್ಲೇ ಅರಳಬಹುದು, ಕೆಲಸ ಅರಸಿಬಂದ ನಿರಾಶ್ರಿತ ಕುಟುಂಬವೊಂದರ ಡೇರೆಯ ಒಳಗಿನಿಂದಲೂ ಹೊರಹೊಮ್ಮಬಹುದು. ಅಥವಾ ವೈಭವೋಪೇತ ಅಪಾರ್ಟ್ಮೆಂಟ್ನ ಒಳಗಿರುವ ಜೀವಗಳ ಏಕತಾನತೆಯ ನಿಟ್ಟುಸಿರಿನ ನೀರವತೆಯಲ್ಲಿ ಸಾಕಾರವಾಗಬಹುದು. ಸಿನಿಮಾಕ್ಕೆ ಸಮಾಜ ಪ್ರೇರಣೆ, ಸಮಾಜಕ್ಕೆ ಸಿನಿಮಾ ಪ್ರೇರಣೆ.
*ಸಿನಿಮಾ ಮತ್ತು ಸಮಾಜ- ಅಂತರ್ಸಂಬಂಧ*
ಸಿನಿಮಾ ಸಮಾಜದ ಪ್ರತಿಬಿಂಬವಾ? ಅಥವಾ ಸಮಾಜ ಸಿನಿಮಾದ ಪ್ರತಿಬಿಂಬವಾ?. ನಿಜವಾಗಿಯೂ ಕಥೆಯ ಎಳೆ ಎಲ್ಲಿಂದ ಆರಂಭವಾಗುತ್ತದೆ? ಎನ್ನುವ ಜಿಜ್ಞಾಸೆ ಬಹುಶ: ಸಿನಿಮಾ ಜನಪ್ರಿಯ ಸಂಸ್ಕೃತಿಯ ಒಂದು ಭಾಗವಾಗಿ ಗುರುತಿಸಿಕೊಂಡ ಕಾಲದಿಂದಲೂ ಕಾಡಿದ ಮತ್ತು ಚರ್ಚೆಗೆ ಗ್ರಾಸವಾದ ವಿಷಯ. ಆದರೆ ಸಮಾಜ ಮತ್ತು ಸಿನಿಮಾ ಕಥನದ ಅಂತರ್ಸಂಬಂಧೀಯ ಪರಿಕಲ್ಪನೆ ಅರ್ಥವಾಗಬೇಕಾದರೆ ಹಾಗೂ ಆಯಾಕಾಲದ ಜನರಿಗೆ ಮನಸ್ಸಿಗೆ ಪ್ರಿಯವಾಗುವ ಸಿನಿಮಾವೊಂದು ಸೃಷ್ಟಿಯಾಗಬೇಕಾದರೆ ಭಾರತೀಯ ಸಿನಿಮಾ ಹುಟ್ಟಿದಲ್ಲಿಂದ ಇಲ್ಲಿವರೆಗಿನ ಪಯಣದ ಘಟ್ಟಗಳನ್ನು ಗಮನಿಸಿಬೇಕು ಹಾಗೂ ಇತಿಹಾಸದ ಮಜಲುಗಳಲ್ಲಿ ನಡೆದ ತಲ್ಲಣಗಳನ್ನು ಅರ್ಥೈಸಿಕೊಳ್ಳಬೇಕು. ಬಹುಶ: ಸಿನಿಮಾ ಕಥನದ ಸೃಷ್ಟಿಕರ್ತನೊಬ್ಬನಿಗೆ ಇದು ಅರ್ಥವಾದರೆ ಮನಮುಟ್ಟುವ ಚಿತ್ರಕಥೆಯನ್ನು ಅವನು ಸುಲಭವಾಗಿ ತೆರೆಗೆ ಇಳಿಸುವ ಕಾಯಕ ಮಾಡಬಹುದು. ಸಿನಿಮಾ ಎಂದರೆ ಕೇವಲ ಕಲೆಯಲ್ಲ, ಅಥವಾ ವಾಣಿಜ್ಯ ಅಸ್ತçವೂ ಅಲ್ಲ, ಅದು ವ್ಯಕ್ತಿಯ ಭಾವನೆಗಳು ಹಾಗೂ ಸಮಕಾಲಿನ ಚಲನಶೀಲ ಸಮಾಜದ ಪ್ರತಿಬಿಂಬ ಎನ್ನುವುದು ಮೊದಲಿಗೆ ಮನದಟ್ಟಾದರೆ, ಕಲಾದೇವಿ ಜೊತೆಗೆ ಲಕ್ಷ್ಮೀಮದೇವಿಯ ಕೃಪಾಕಟಾಕ್ಷವೂ ಸಿಗಬಹುದು !.
ಸಿನಿಮಾ ಸಮೂಹ ಮಾಧ್ಯಮವೆಂಬ ಬೃಹತ್ ಸಾಗರದ ಒಂದು ಅಲೆ. ಯಾವುದೇ ಮಾಧ್ಯಮವಾಗಲಿ ಒಂದು ಸಮೂಹವನ್ನು ತಲುಪವು ಶಕ್ತಿಯನ್ನೂ ಯುಕ್ತಿಯನ್ನೂ ಗ್ರಹಿಸಿಕೊಳ್ಳದಿದ್ದರೆ ಅದು ಸಮೂಹ ಮಾಧ್ಯಮ ಎನಿಸಿಕೊಳ್ಳಲು ಸಾಧ್ಯವಿಲ್ಲ. ಸಿನಿಮಾ ಮಾಧ್ಯಮವೂ ಅಷ್ಟೇ ಜನಸಮೂಹದ ಕಥೆಯನ್ನು, ದಿನನಿತ್ಯದ ಆಗುಹೋಗುಗಳನ್ನು ಒಂದಷ್ಟು ನೈಜತೆ, ಸ್ವಲ್ಪ ಕಲ್ಪನೆ ಹಾಗೂ ಪ್ರೇಕ್ಷಕರು ನೋಡಲು ಸಹ್ಯವಾಗಿಸುವ ಸೃಜನಶೀಲತೆಯ ಬೆರಕೆಯೊಂದಿಗೆ ಕಥನವನ್ನು ಕಟ್ಟಿಕೊಡಬೇಕಾಗುತ್ತದೆ. ಕಲ್ಪನಾಲೋಕವನ್ನು ಕಟ್ಟಿಕೊಡುವ ಭರದಲ್ಲಿ ಸಿನಿಮಾವೊಂದು ಜನಜೀವನದ ಕಥನವನ್ನು ನೇಪಥ್ಯಕ್ಕೆ ತಳ್ಳಿ ಸಮಾಜಮುಖಿಯಾಗುವ ಸಾಧ್ಯತೆಗೆ ಬೆನ್ನು ತಿರುಗಿಸುವ ಹಾಗಿಲ್ಲ. ಒಂದು ವೇಳೆ ಇಂಥಹಾ ಪ್ರಯತ್ನಗಳು ನಡೆದರೆ ಅದಕ್ಕೆ ಸಾರ್ವಕಾಲಿಕ ಮನ್ನಣೆ ಸಿಗುವುದಿಲ್ಲ.
ಸಿನಿಮಾ ಮತ್ತು ಸಮಾಜ - ಐತಿಹಾಸಿಕ ಹೆಜ್ಜೆಗಳು
ಭಾರತೀಯ ಸಿನಿಮಾರಂಗದ ಇತಿಹಾಸವನ್ನು ಸೂಕ್ಮಮವಾಗಿ ಅಭ್ಯಸಿಸಿದರೆ ಅದು ಚಲನಶೀಲ ಸಮಾಜದ ಕೈಗನ್ನಡಿ ಎಂಬುದನ್ನು ಮನದಟ್ಟು ಮಾಡುತ್ತದೆ. ೧೯೧೩ರಲ್ಲಿ ಭಾರತದ ಚಿತ್ರರಂಗದ ಇತಿಹಾಸದ ಮೊದಲ ಹೆಜ್ಜೆ ಆರಂಭವಾಯಿತು. ದಾದಾಸಾಹೆಬ್ ಪಾಲ್ಕೆ ಅವರ ‘ರಾಜಾಹರಿಶ್ಚಂದ್ರ’ ಚಲನಚಿತ್ರ ಮುಂಬರುವ ದಿನಗಳಲ್ಲಿ ಸಿನಿಮಾ ಜನಪ್ರಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗುವುದಕ್ಕೆ ಕಾರಣವಾಯಿತು. ಬೆಳ್ಳಿತೆರೆಯ ಅನೂಹ್ಯ ಬೆಳವಣಿಗೆ ಮತ್ತು ಜನಸಾಮಾನ್ಯರ ಭಾವನಾತ್ಮಕ ಬೆಂಬಲ ಚಿತ್ರರಂಗ ಬೃಹತ್ ಉದ್ಯಮವಾಗಿ ಬೆಳೆಯುವುದಕ್ಕೆ ಕಾರಣವಾಯಿತು. ೧೯೧೩ರಿಂದ ಆರಂಭವಾಗಿ ಇಲ್ಲಿಯವರೆಗೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾದ ಚಿತ್ರದ ಕಥನಗಳು ಒಂದೋ ಸಮಾಜದ ಆಗುಹೋಗುಗಳಿಂದ ಪ್ರೇರಿತವಾದುವು, ಅಥವಾ ಸಮಾಜದ ಆಗುಹೋಗುಗಳಿಗೆ ಪ್ರೇರಿತವಾದುವು. ಬಹುಶ: ಚಿತ್ರದ ಕಥೆಗಾರನೊಬ್ಬ ರಾಜಕೀಯ, ಸಾಮಾಜಿಕ ಬದಲಾವಣೆಗಳಿಗೆ ತಲ್ಲಣಗಳಿಗೆ ಕಿವಿಯಾಗದಿದ್ದರೆ ಪ್ರೇಕ್ಷಕರ ಮನತಟ್ಟುವ ಚಿತ್ರ ಮಾಡಲು ಸಾಧ್ಯವಿಲ್ಲ. ಆದರೆ ಈ ಕಾಯಕದಲ್ಲಿ ಸಿನಿಮಾ ಬೀರುವ ಪರಿಣಾಮಗಳ ನೈತಿಕ ಚೌಕಟ್ಟನ್ನು ಗಮನಿಸದಿದ್ದರೆ ಒಂದೋ ಚಿತ್ರ ಎಡಬಹುದು ಅಥವಾ ಸಮಾಜ ಎಡವಬಹುದು.
ಭಾರತೀಯ ಸಿನಿಮಾ ಅಂದರೆ ಅದೊಂದು ಸಾಗರ, ಹಲವಾರು ಭಾಷೆಗಳಲ್ಲಿ, ವಿವಿಧ ರಾಜ್ಯಗಳಲ್ಲಿ ನಿರ್ಮಾಣವಾಗುವ ಚಿತ್ರಗಳು ಭಾರತೀಯ ಸಿನಿಮಾ ಎನ್ನುವ ಒಟ್ಟು ಸಮೂಹವನ್ನು ಪ್ರತಿಬಿಂಬಿಸುತ್ತವೆ. ಆದರೆ ಒಂದೊಂದು ಭಾಷೆಯ ಸಿನಿಮಾವೂ ಭಿನ್ನ. ಈ ಎಲ್ಲಾ ಸಿನಿಮಾಗಳ ವಸ್ತು ವಿಷಯವನ್ನು ವಿಶ್ಲೇಷಿಸುತ್ತಾ ಸಿನಿಮಾ ಕಥನ ಕಟ್ಟುವ ಪ್ರಕ್ರಿಯೆ ಚರ್ಚಿಸುವುದು ಕಷ್ಟ. ಈ ಕಾರಣಕ್ಕಾಗಿ ಭಾರತದ ದೊಡ್ಡ ಸಿನಿಮಾರಂಗವಾದ ಹಿಂದಿ ಚಿತ್ರರಂಗ ‘ಬಾಲಿವುಡ್’ ನ್ನು ಈ ಲೇಖನದ ವಸ್ತುವಾಗಿ ತಗೆದುಕೊಳ್ಳಲಾಗಿದೆ.
ಚಲನಶೀಲ ಸಮಾಜ, ಮೌಲ್ಯಗಳ ಸಂಘರ್ಷ ಮತ್ತು ಸಿನಿಮಾ : ೧೯೪೦ರ ದಶಕದ ನಂತರ ಹಿಂದಿ ಚಿತ್ರರಂಗ ತನ್ನದೇ ರೂಪುರೇಷೆಯನ್ನು ತೆಗೆದುಕೊಳ್ಳಲು ಆರಂಭಿಸುತ್ತದೆ. ಬಹುಶ: ಸಮೂಹ ಮಾಧ್ಯಮಗಳ ಇತಿಹಾಸ ತೆಗೆದುಕೊಂಡರೆ ಅತಿ ಕಡಿಮೆ ಅವಧಿಯಲ್ಲಿ ಬಹುಬೇಗ ಜನಸಾಮಾನ್ಯರ ಮನಸ್ಸಿಗೆ ಲಗ್ಗೆಹಾಕಿದ್ದು ಸಿನಿಮಾ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. ೧೯೫೦ರ ದಶಕದಲ್ಲಿ ಬ್ರಿಟೀಷ್ ಇಂಡಿಯಾ ಮರೆಯಾಗಿ ಅಖಂಡ ಭಾರತ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಹಿಂದಿ ಚಿತ್ರರಂಗದಲ್ಲಿ ಮುನ್ನಲೆಗೆ ಬಂದ ಚಿತ್ರಗಳಲ್ಲಿ ಆಂಗ್ಲರ ದಬ್ಬಾಳಿಕೆಯ ನೆರಳಾಗಿ ಕಾಡಿದ ಜಮಿನ್ದಾರಿ ಪದ್ಧತಿ, ಜನಸಾಮನ್ಯನ ಬದುಕು ಮತ್ತು ಹೋರಾಟದ ಕಥಾಹಂದರವೇ ಮುಖ್ಯ ಭೂಮಿಕೆಯಾಗುತ್ತದೆ. ೧೯೫೩ರಲ್ಲಿ ಬಿಮಲ್ರಾಯ್ ನಿರ್ದೇಶಿಸಿದ ‘ದೋ ಬಿಗಾ ಜಮೀನ್’, ೧೯೫೭ರಲ್ಲಿ ಬಿಡುಗಡೆಯಾದ ಗುರುದತ್ ನಿರ್ದೇಶಿಸಿ, ನಿರ್ಮಾಣ ಮಾಡಿದ ‘ಪ್ಯಾಸಾ’ ಮೊದಲಾದ ಚಿತ್ರಗಳು ಸಮಾಜವನ್ನು ಅಂದು ಕಾಡಿದ ಮತ್ತು ಕೂಡಿದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳ ಜೊತೆಗೆ ದೇಶ ಮತ್ತು ಸಮಾಜಕಟ್ಟುವ ಕ್ರಿಯೆಯಲ್ಲಿ ನಾಯಕತ್ವ ಪಡೆದುಕೊಂಡ ಮಹಾತ್ಮಾ ಗಾಂಧಿ ಮತ್ತು ಜವಹರಲಾಲ್ ನೆಹರೂ ಅವರ ಸಿದ್ಧಾಂತದ ಎಳೆಗಳು ಢಾಳಾಗಿ ಕಾಣಿಸಿಕೊಂಡವು. ಸಿನಿಮಾದಲ್ಲಿ ಬರುವ ಪಾತ್ರಗಳೂ ಈ ಬದಲಾವಣೆಯ ಪ್ರಕ್ರಿಯೆಗೆ ಒಳಗಾದವು. ಸಿನಿಮಾದ ನಾಯಕ/ಕಿ ಹಾಗೂ ಖಳನಾಯಕ ಅಂದಿನ ಸಮಾಜದಲ್ಲಿ ಬಿಂಬಿತವಾಗಿದ್ದ ನೈತಿಕ ಮತ್ತು ಅನೈತಿಕ ಮೌಲ್ಯಗಳನ್ನೇ ಪ್ರತಿಬಿಂಬಿಸುತ್ತಿದ್ದರು. ರೈತನ ಮಗನೊಬ್ಬ ನಾಯಕನಾದರೆ, ಜಮಿನ್ದಾರನೊಬ್ಬ ಖಳನಾಯಕನಾಗಿದ್ದ, ದುಡಿಯುವ ವರ್ಗ ಮತ್ತು ಆಳುವ ವರ್ಗದ ನಡುವಿನ ಸಂಘರ್ಷವೇ ಚಿತ್ರದ ಮುಖ್ಯ ಭೂಮಿಕೆಯಾಗಿತ್ತು. ಕಾಲಕಳೆದಂತೆ ನೈತಿಕ ಮತ್ತು ಅನೈತಿಕ ಮೌಲ್ಯಗಳ ಸಂಘರ್ಷವೇ ಕಥೆಯನ್ನು ಕಟ್ಟಿಕೊಟ್ಟರೂ ಇವನ್ನು ಬಿಂಬಿಸುವ ಪಾತ್ರಗಳು ಬದಲಾಗುತ್ತಾ ಹೋದವು. ಮೌಲ್ಯಗಳ ಸಂಘರ್ಷ ಸಾರ್ವಕಾಲಿಕವಾದರೂ ಸಮಾಜ ಚಲನಶೀಲ ಎನ್ನುವುದನ್ನು ಇಲ್ಲಿ ಗ್ರಹಿಸಿಕೊಳ್ಳಬೇಕಾಗುತ್ತದೆ. ಚಲನಶೀಲ ಸಮಾಜದ ಪರಿವರ್ತನೆಯ ಹಾದಿಯಲ್ಲಿ ಮೌಲ್ಯಗಳನ್ನು ಬಿಂಬಿಸುವ ವ್ಯಕ್ತಿಗಳು ಬದಲಾಗುತ್ತಾ ಹೋಗುತ್ತಾರೆ.
ಈ ಮಧ್ಯೆ ಸತ್ಯಜಿತ್ ರೇ ಯಂತಹಾ ಸಿನಿಮಾ ನಿರ್ದೇಶಕರು ಜನಸಾಮಾನ್ಯನ ಬದುಕಿನ ವಿವಿಧ ಪಲ್ಲಟಗಳನ್ನು, ಭಾವನಾತ್ಮಕ ಹೋರಾಟಗಳನ್ನು ಜೊತೆಗೆ ಸಾಮಾಜಿಕ ಕ್ರಾಂತಿ ಹಾಗೂ ಬೌದ್ಧಿಕ ಪುನರುಜ್ಜೀವನವನ್ನು ತೆರೆಮೇಲೆ ಬಿಂಬಿಸಲು ಆರಂಭಿಸಿದರು. ಕಥೆಯ ಕಲ್ಪನೆಗಿಂತಲೂ ನೈಜತೆಯನ್ನು ಸೃಜನಶೀಲತೆಯ ಲೇಪನದೊಂದಿಗೆ ತೆರೆಯ ಮೇಲೆ ನಿಚ್ಛಳವಾಗಿಸುವ ಅವರ ಪ್ರಯತ್ನವೂ ಯಶ ಕಂಡಿತು. ಆದರೆ ಉಳಿದಂತೆ ಬಹುತೇಕ ಚಿತ್ರಗಳು ವಿವಿಧ ಕ್ಷೇತ್ರಗಳಲ್ಲಿ ಒಳಿತು ಮತ್ತು ಕೆಡುಕಿನ ಹೋರಾಟದ ವೈಭವೀಕರಣವನ್ನೇ ಕಥಾಹಂದರವಾಗಿ ತೆಗೆದುಕೊಳ್ಳಲು ಆರಂಭಿಸಿತು. ೧೯೭೦ ದಶಕದಲ್ಲಿ ದೇಶ ಕಂಡ ರಾಜಕೀಯ ಅಸ್ಥಿರತೆ, ಸಂಘರ್ಷ, ನಗರೀಕರಣ ಮೊದಲಾದುವುಗಳು ಸಿನಿಮಾಗಳ ಮೇಲೆ ಪ್ರಭಾವ ಬೀರಲಾರಂಭಿಸಿತು. ಈ ಬದಲಾವಣೆ ‘ಆಂಗ್ರಿ ಯಂಗ್ಮ್ಯಾನ್’ ಸಿನಿಮಾಗಳು ಹುಟ್ಟಲು ನಾಂದಿ ಹಾಡಿತು. ದಬ್ಬಾಳಿಕೆ ಹಾಗೂ ಶೋಷಣೆಯ ವಿರುದ್ಧ ಹೋರಾಡುವ ಕಥಾನಾಯಕ ತೆರೆಯನ್ನು ಆಳಲು ಆರಂಭಿಸಿದ, ಖಳನಾಯಕನ ಪಾತ್ರದಲ್ಲಿ ಜಮಿನ್ದಾರಿ ವ್ಯಕ್ತಿಯ ಬದಲಾಗಿ, ಕಾರ್ಖಾನೆಯ ಮಾಲಿಕ, ವ್ಯಾಪಾರಿ, ಅಥವಾ ನಗರದ ಶ್ರೀಮಂತ ಉದ್ಯಮಿ ಬಂದುನಿAತ. ಈ ಸಿನಿಮಾಗಳು ಮನರಂಜನೆಯ ಜೊತೆಗೆ ಸೂಕ್ಮವಾಗಿ ನಗರೀಕರಣದ ಪ್ರಭಾವ, ಹಳ್ಳ್ಳಿಯಿಂದ ನಗರದತ್ತ ಜನಸಾಮಾನ್ಯನ ವಲಸೆ, ಹಳ್ಳಿ ಮತ್ತು ನಗರದ ನಡುವಿನ ಸಾಂಸ್ಕೃತಿಕ ಸಂಘರ್ಷಗಳು, ಗೊಂದಲಗಳನ್ನು ತಿಳಿಸಲು ಪ್ರಯತ್ನಿಸಿದವು. ಕೆಲವೊಂದು ಸಿನಿಮಾಗಳಲ್ಲಿ ನಗರ, ಪಟ್ಟಣಗಳು ಮೌಲ್ಯರಹಿರ ಜೀವನದ ಕೇಂದ್ರವಾಗಿ, ಅನೈತಿಕತೆಯ ಅಗರವಾಗಿ ಕಂಡರೆ, ಹಳ್ಳಿ ಬದುಕಿನ ಮುಗ್ಧತೆ, ಪರಿಶುದ್ಧತೆ ಮತ್ತು ನೈತಿಕತೆಯ ಬಿಂಬ ಪ್ರತಿಫಲನವಾಗುತ್ತದೆ. ಬಹುಶ: ಈ ಸಿನಿಮಾಗಳು ಅಂದಿನ ಜನಸಾಮಾನ್ಯರ ಮನದಲ್ಲಿ ನಗರ ಅಥವಾ ಪಟ್ಟಣ ಹಾಗೂ ಅಲ್ಲಿ ವಾಸಿಸುವ ಜನರ ಮೇಲಿದ್ದ ಸಂಶಯವನ್ನೇ ಕಥೆಯ ಎಳೆಯಾಗಿ ತೆಗೆದುಕೊಳ್ಳುವ ಕೆಲಸ ಮಾಡಿವೆ. ಬಹುಶ: ಆ ಸಿನಿಮಾಗಳು ಇಂತಹಾ ಕಥಾವಸ್ತುವನ್ನು ತೆಗೆದುಕೊಳ್ಳದೇ ಇದ್ದಿದ್ದರೆ ಜನಸಾಮಾನ್ಯರ ಮನಸ್ಸಿಗೆ ಒಪ್ಪಿತವಾಗುತ್ತಿರಲಿಲ್ಲ್ಲ. ಯಾವಾಗ ಸಿನಿಮಾವೊಂದು ಪ್ರೇಕ್ಷಕ ವರ್ಗಕ್ಕೆ ಅವರದೇ ಆದ ಅನುಭವಗಳನ್ನು ಸುಂದರವಾಗಿ ಕಟ್ಟಿಕೊಡುತ್ತವೆಯೋ ಆಗ ಅದು ವೀಕ್ಷಕ ಗಡಣಕ್ಕೆ ಆಪ್ತವಾಗುತ್ತದೆ.
ತದನಂತರದ ಬೆಳವಣಿಗೆ ಗಮನಿಸಿದರೆ ಶಿಕ್ಷಣ, ನಿರುದ್ಯೋಗ, ಶೋಷಣೆ, ಭೃಷ್ಟಾಚಾರವೇ ಚಿತ್ರದ ಮುಖ್ಯ ಕಥಾನಕವಾದುದನ್ನು ಚರ್ಚಿಸದೇ ಇರುವಂತಿಲ್ಲ, ಶಿಕ್ಷಿತ ಬಡ ನಿರುದ್ಯೋಗಿ ಯುವಕ ಹಾಗೂ ಭೃಷ್ಟ ಅಧಿಕಾರಿ, ರಾಜಕಾರಣಿ ಅಥವಾ ಪೊಲೀಸ್ ಅಧಿಕಾರಿಯ ನಡುವಿನ ಸಂಘರ್ಷ ತೆರೆಯ ಮೇಲೆ ರಾರಾಜಿಸಲು ಆರಂಭವಾಯಿತು. ಈ ಎಲ್ಲಾ ಕಥಾನಕಗಳು ಸಮಾಜ ಸಾಗುತ್ತಿರುವ ಹಾದಿಯನ್ನೇ ಬಿಂಬಿಸುತ್ತದೆ. ಭ್ರಷ್ಟಾಚಾರದ ಕರಿನರಳು ಎಲ್ಲಾ ಕ್ಷೇತ್ರವನ್ನು ಆವರಿಸಿರುವುದು ಇಲ್ಲಿ ಕಂಡುಬರುತ್ತದೆ. ನಿಜಬದುಕಿನಲ್ಲಿ ಜನಸಾಮಾನ್ಯನನ್ನು ಕಾಡಿದ ಭೃಷ್ಟ ವ್ಯವಸ್ಥೆಯ ಹರಿಕಾರರು ತೆರೆಯಮೇಲೆ ‘ವಿಲನ್’ ಆಗಿ ಪರಿವರ್ತನೆಗೊಂಡರು. ಕಾಲಬದಲಾದಂತೆ ಖಳನಾಯಕರು ಬಿಂಬಿಸುವ ಪಾತ್ರಗಳು ಬದಲಾದುದನ್ನು ಇಲ್ಲಿ ಗಮನಿಸಬಹುದು. ನಿಜ ಜೀವನದಲ್ಲಿ ನಡೆಯುವ ಸಾಮಾಜಿಕ- ಸಾಂಸ್ಕೃತಿಕ ಬದಲಾವಣೆಯೇ ತೆರೆಯ ಮೇಲಿನ ಕಥನ ಮತ್ತು ಪಾತ್ರವರ್ಗದ ಬದಲಾವಣೆಗೆ ಹಿನ್ನೆಲೆಯಾಗುತ್ತದೆ ಎನ್ನುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಬೇಕು.
ಈ ನಡುವೆ ಕಥನದಲ್ಲಿ ಇನ್ನೊಬ್ಬ ರೆಬೆಲ್ಸ್ಟಾರ್ ಬಂದುಹೋದುದನ್ನು ಅಲ್ಲಗಳೆಯುವಂತಿಲ್ಲ. ೮೦ ಹಾಗೂ ೯೦ರ ದಶಕಲ್ಲಿ ಬಂದ ಸಿನಿಮಾ ನಾಯಕನಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ವ್ಯವಸ್ಥೆಯಿಂದ ಯಾವುದೇ ಸಮಸ್ಯೆ ಇರಲಿಲ್ಲ. ಈ ನಾಯಕನ ರೆಬೆಲ್ ತನ್ನ ಕುಟುಂಬಸ್ಥರ ವಿರುದ್ಧವೇ ಆಗಿರುತ್ತದೆ. ತಾನು ಪ್ರೀತಿಸಿದ ಹುಡುಗ/ಗಿ ಯನ್ನು ಮದುವೆಯಾಗುವ ಪ್ರಕ್ರಿಯೆಯಲ್ಲಿ ಬಂದೊದಗುವ ತೊಡಕುಗಳೇ ಆತನ/ಕೆ ಯ ಹೋರಾಟಕ್ಕೆ ಪ್ರೇರಣೆಯಾಗುತ್ತದೆ. ತಾನು ಅತ್ಯಂತ ಗೌರವಿಸುವ ವ್ಯಕ್ತಿಯ ವಿರುದ್ಧವೇ ಎದೆತಟ್ಟಿನಿಂತು ತನ್ನ ಪ್ರೀತಿಗೆ ನ್ಯಾಯಕೊಡುವ ಆತನ ರೆಬೆಲ್ ಸುಖಾಂತ್ಯಕಾಣುತ್ತದೆ. ಇಂತಹಾ ಸಿನಿಮಾ ಕಥನದ ಹಾದಿಯನ್ನು ತದನಂತರ ಬಂದ ಬಹುತೇಕ ಸಿನಿಮಾಗಳು ತುಳಿದವು.
*ಮಾರುಕಟ್ಟೆ ಸೂತ್ರ ಹಾಗೂ ಜನಪ್ರೀಯ ಸಿನಿಮಾದ ಲಗ್ಗೆ*
೧೯೭೦ರ ದಶಕದ ನಂತರ ಸಿನಿಮಾ ವಾಣಿಜ್ಯ ಲೆಕ್ಕಾಚಾರದ ನೆರಳಿನ ನಂಟಿನ ಜೊತೆ ಬೆಳೆಯಲಾರಂಭಿಸಿತು. ನಿರ್ದೇಶಕನೊಬ್ಬ ಮಾರುಕಟ್ಟೆಯ ತಂತ್ರಗಾರಿಗೆ ಜೊತೆ ಗಳಿಕೆಯ ಬಾಲಕ್ಕೆ ಜೋತು ಬೀಳಲಾರಂಭಿಸಿದ. ಪ್ರೇಕ್ಷಕರನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಪ್ರೇರೇಪಿಸುವ ಕಥಾನಕಗಳನ್ನು ವೀಕ್ಷಕರು ಆಪ್ತವಾಗಿಸಿಕೊಳ್ಳುವಂತಹ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಸಿನಿಮಾ ಮಾರುಕಟ್ಟೆಯ ಸಿಧ್ಧ ಸೂತ್ರಗಳನ್ನು ಸಾಮೀಪ್ಯಕ್ಕೆ ತಂದುಕೊಂಡಹಾಗೆ ಸಮಾಜದ ಆಗುಹೋಗುಗಳಿಂದ, ಜನಸಾಮಾನ್ಯನ ಬದುಕಿನ ಚಿತ್ರಣಗಳಿಂದ ದೂರವಾಯಿತು.
ಇದೇ ಕಾಲಘಟ್ಟದಲ್ಲಿ ನೈತಿಕ ಚೌಕಟ್ಟನ್ನು ಮೀರಿನಿಂತ ಸಿನಿಮಾಗಳು ಬಂದವು, ಗ್ಯಾಂಗ್ಸ್ಟರ್ಗಳೇ ಹೀರೋಗಳಾಗಿ ಪ್ರೇಕ್ಷಕ ವರ್ಗದ ಭಾವನಾತ್ಮಕ ಬೆಂಬಲವನ್ನು ಸಿನಿಮಾದುದ್ದಕ್ಕೂ ಪಡೆಯುವ ಕಾಲವೂ ಬಂತು, ಗ್ಯಾಂಗ್ಸ್ಟರ್ ಮಾಡುವ ಕೆಲಸವನ್ನು ಸಮರ್ಥಿಸಿಕೊಳ್ಳುವ ಕಥಾನಕಗಳು, ನೈತಿಕ- ಅನೈತಿಕ ಸಂಘ಼ರ್ಷವನ್ನೇ ಮುಖ್ಯಭೂಮಿಕೆಯಾಗಿಟ್ಟುಕೊಂಡ ಸಿನಿಮಾ ಕ್ಷೇತ್ರದ ಪಥವನ್ನೇ ಬದಲಿಸಿದವು, ಬಹುಶ: ಒಂದೇ ತರಹದ ಕಥಾನಕಗಳನ್ನು ನೋಡಿ ಬೇಸತ್ತಿದ್ದ ಪ್ರೇಕ್ಷಕವರ್ಗ ಭಿನ್ನ ಚಿತ್ರವೊಂದನ್ನು ಒಪ್ಪಿಕೊಳ್ಳಲು ಆರಂಭಮಾಡಿತ್ತು. ಆದರೆ ಈ ಸಿನಿಮಾಗಳು ನೈತಿಕ ಪ್ರಶ್ನೆಯನ್ನು ಎತ್ತಿದ್ದು ಸುಳ್ಳಲ್ಲ. ಸಿನಿಮಾ ಸಾಹಿತ್ಯದ ಮೂಸೆಯಿಂದ ಹೊರಬಂದು, ನಾಯಕನ ಇಮೇಜ್ಗೆ ತಕ್ಕಹಾಗೆ ಚಿತ್ರಕಥೆ ಹಾಗೂ ಸಂಭಾಷಣೆಯ ಬರೆಯುವ ಪ್ರಕ್ರಿಯೆಗೆ ಒಳಗಾಯಿತು. ಸಿನಿಮಾ ವಾಸ್ತವ ಪ್ರಪಂಚದಿAದ ದೂರಾವಾಗಿ ‘ಫ್ಯಾಂಟಸಿ’ ಲೋಕವನ್ನು ಸೃಷ್ಟಿಸುತ್ತಾ ಪ್ರೇಕ್ಷಕರ ಅಭಿರುಚಿಯನ್ನೂ ಬದಲಾಯಿಸುವ ಅಪಾಯಕಾರಿ ದಿನಗಳು ಆರಂಭವಾದವು. ಸಿನಿಮಾ ಮಾಧ್ಯಮ ಉದ್ಯಮವಾಯಿತು.
ಈ ಸಿನಿಮಾಗಳ ಮಾದರಿಯಲ್ಲಿ ಸಮಾಜದಲ್ಲಿ ಕೊಲೆ, ಸುಲಿಗೆಗಳು ನಡೆದದ್ದೂ ಸಿನಿಮಾ ಸಮಾಜದ ಮೇಲೆ ಎಂತಹಾ ಗಾಢ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಪುರಾವೆ. ಸಿನಿಮಾ ತನ್ನ ಕಥೆಯ ಮೂಲಕ, ಪಾತ್ರವರ್ಗದ ಮೂಲಕ ಒಂದು ‘ಇಮೇಜ್’ನ್ನು ಸಮಾಜಕ್ಕೆ ಕೊಡುತ್ತದೆ, ಸಮಾಜ ಅದನ್ನು ತನ್ನೊಳಗೆ ಅತಿಸುಲಭವಾಗಿ ಸೇರಿಸಿಕೊಳ್ಳುತ್ತದೆ. ಇಂತಹಾ ಸಂದರ್ಭದಲ್ಲಿ ಕಥೆಗಾರನೊಬ್ಬನ, ನಿರ್ದೇಶಕನೊಬ್ಬನ ನೈತಿಕತೆ ಖಂಡಿತವಾಗಿಯೂ ಕೆಲಸ ಮಾಡಬೇಕು. ಯಾವುದೇ ಸೃಜನಶೀಲ ಕಲೆಯೊಂದು ಮನರಂಜನೆಯ ಜೊತೆಗೆ ಸಮಾಜದ ಕಡೆಗೆ ತನ್ನ ಜವಾಬ್ಧಾರಿಯನ್ನೂ ನಿರ್ವಹಿಸಬೇಕಾಗುತ್ತದೆ. ಚಲನಶೀಲ ಸಮಾಜದಲ್ಲಿ ನನ್ನದೂ ಒಂದು ಪಾಲಿದೆ ಎಂದು ತನ್ನನ್ನು ತಾನು ಗುರುತಿಸಿಕೊಂಡು ಧನಾತ್ಮಕ ಬದಲಾವಣೆಗೆ ಕಾರಣವಾಗಬೇಕು.
*ಕಥಾನಾಯಕಿ ಮತ್ತು ‘ಅವಲಂಭಿತ’ ಸೂತ್ರ*
ಈ ನಡುವೆ ಕಥಾನಾಯಕಿಯ ಪಾತ್ರವನ್ನು ವಿಶ್ಲೇಷಿಸದಿದ್ದರೆ ಈ ಲೇಖನ ಅಪೂರ್ಣವಾಗುತ್ತದೆ. ಸಿನಿಮಾ ಜನಸಮುದಾಯದ ಮನಸ್ಸಿಗೆ ಲಗ್ಗೆ ಇಟ್ಟ ಹೊಸತರಲ್ಲಿ ಪತಿಯೇ ಪರದೈವ, ಮುತೈದೆ ಭಾಗ್ಯ ಎನ್ನುವ ಸಮಾಜದಲ್ಲಿ ಆಳವಾಗಿ ಬೇರೂರಿದ ಪತ್ನಿ ಧರ್ಮದ ಸಿದ್ಧಾಂತ ಹಾಗೂ ನಂಬಿಕೆಗಳಿಗೆ ಸಿನಿಮಾ ನಾಯಕಿಯೂ ಪ್ರತಿಬಿಂಬವಾಗಿದ್ದಳು, ಅದರಲ್ಲಿ ಸ್ವಲ್ಪ ಭಿನ್ನ ಎನಿಸಿದ ಪಾತ್ರಗಳಿದ್ದರೆ ಅದು ಖಂಡಿತವಾಗಿಯೂ ಖಳನಾಯಕಿಯ ಪಾತ್ರವೇ!. ಹಾಗಂತ ಮನರಂಜನೆಗೋಸ್ಕರ ಜನರನ್ನು ಚಿತ್ರಮಂದಿರದತ್ತ ಸೆಳೆಯಲು ‘ರೀಟಾ’, ‘ಜಮೀಲಾ’, ‘ರೋಸಿ’ ಯಂತಹ ಪಾತ್ರಗಳನ್ನು ಸೃಷ್ಟಿಸುತ್ತಿದ್ದದು ಮಾತ್ರ ವಿಪರ್ಯಾಸ!. ನಂತರದಲ್ಲಿ ನಗರೀಕರಣ, ಆಧುನೀಕರಣದ ನೆರಳೋ ಎಂಬಂತೆ ಮನರಂಜನೆಗೋಸ್ಕರ ಸೃಷ್ಟಿಸಿದಂತಹಾ ಪಾತ್ರಗಳೇ ಹಿರೋಯಿನ್ ಅನಿಸಿಕೊಂಡವು. ಒಂದಷ್ಟು ಸಿನಿಮಾಗಳಲ್ಲಿ ಸಾಂಪ್ರಾದಾಯಿಕತೆಯ ನೆರಳಿನಿಂದ ಹೊರಬಂದು ಸ್ವಾವಲಂಬನೆಯ ಪ್ರತಿರೂಪವಾಗಿರುವ ಸ್ವಾಭಿಮಾನಿ ಹೆಣ್ಣನ್ನೂ ಚಿತ್ರಿಸಲಾಯಿತು. ಆದರೆ ಸಾಮಾಜಿಕ ಕಟ್ಟುಪಾಡುಗಳ ಫಲವಾಗಿ ಹೆಣ್ಣಿಗೆ ದೊರಕುವ ಎರಡನೇ ದರ್ಜೆಯ ಸದಸ್ಯತ್ವ ಸಿನಿಮಾದಲ್ಲೂ ದೊರಕಿದ್ದು ಬಹಳ ಚರ್ಚಿತವಾದ ವಿಷಯ. ಕಥಾನಾಯಕಿ ಎಂದಿಗೂ ನಾಯಕನಿಗೆ ಅವಲಂಭಿಸಿಕೊಂಡೇ ಇದ್ದಳು ಮತ್ತು ಈಗಲೂ ಇದ್ದಾಳೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಬಹುಶ: ಇಂತಹಾ ಪಾತ್ರಗಳನ್ನು ಕಥಾನಾಯಕಿ ಎನ್ನುವುದಕ್ಕಿಂತ ‘ಚಿತ್ರ ತಾರೆ’ ಎಂದರೆ ಉತ್ತಮ. ಪ್ರೇಕ್ಷಕರ ಒಂದು ವರ್ಗವನ್ನು ಚಿತ್ರಮಂದಿರಗಳತ್ತ ಸೆಳೆಯಲು ಚಿತ್ರತಾರೆ ಒಂದು ತಂತ್ರವಾಗಿ ರೂಪಿತಗೊಂಡಳು.
*ಸಮಾಜದಲ್ಲಿ ಸ್ತ್ರೀಪರ ಚಿಂತನೆ ಮತ್ತು ಸಿನಿಮಾ ಕಥನ *
ಆದರೆ ೨೧ನೇ ಶತಮಾನಕ್ಕೆ ಲಗ್ಗೆ ಇಟ್ಟಂತೆ ಕೆಲವೊಂದು ಸಿನಿಮಾಗಳು ಭಿನ್ನ ಕಥಾನಕ ಕೊಟ್ಟು ಜನಮನ ಗೆಲ್ಲುವಲ್ಲಿ ಯಶಸ್ವಿಯಾದವು. ತಡವಾಗಿಯಾದರೂ ಕೆಲವಾರು ಸಿನಿಮಾಗಳಲ್ಲಿ ಸ್ತೀಪಾತ್ರ ಮುಖ್ಯ ಭೂಮಿಕೆಯಾಗಿ ಹೊರಹೊಮ್ಮುತ್ತಾ ಅಥವಾ ನಾಯಕನಷ್ಟೇ ಮಹತ್ವದ ಪಾತ್ರವನ್ನು ನಾಯಕಿಗೆ ನೀಡುವ ಮೂಲಕ ಸಿನಿಮಾರಂಗದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಚಿತ್ರರಂಗದ ಆರಂಭದಿAದಲೂ ಬಹುತೇಕ ಚಿತ್ರಗಳಲ್ಲಿ ಚಿತ್ರಣವಾಗುತ್ತಿದ್ದ ‘ಅಭಲಾ ನಾರಿ’ ಎನ್ನುವ ಪರಿಕಲ್ಪನೆಗೆ ಬದಲಾಗಿ ಬೆರಳೆಣಿಕೆ ಚಿತ್ರಗಳಲ್ಲಾದರೂ ಅನ್ಯಾಯದ ವಿರುದ್ಧ ಹೋರಾಡುವ, ಶೋಷಣೆ ವಿರುದ್ದ ದ್ವನಿಯೆತ್ತುವ ಪಾತ್ರಗಳಾಗಿ ಬಿಂಬಿಸಲಾಗುತ್ತಿದೆ. ಬಹುಶ: ಇದು ಸಮಾಜದಲ್ಲಿ ಮಹಿಳೆಯ ಅಸ್ತಿತ್ವ ಹಾಗೂ ಸ್ಥಾನಮಾನದಲ್ಲಾದ ಬದಲಾವಣೆಯ ಪರಿಣಾಮದ ಫಲ ಎಂದರೂ ತಪ್ಪಿಲ್ಲ. ಆದರೆ ಇದರರ್ಥ ಸ್ರಿ ಪಾತ್ರವೇ ಮುಖ್ಯ ಭೂಮಿಕೆಯಾಗಿದ್ದ ಚಿತ್ರಗಳು ಇರಲಿಲ್ಲ ಎಂದರ್ಥವಲ್ಲ. ಅಲ್ಲೊಂದು ಇಲ್ಲೊಂದು ಎಂಬಂತೆ ಬೆರಳೆಣಿಕೆಯ ಚಿತ್ರಗಳು ನಿರ್ಮಾಣವಾಗಿ ಪ್ರದರ್ಶನ ಕಂಡಿದ್ದವು. ಈ ಚಿತ್ರಗಳು ೧೯೬೦ರ ದಶಕದಲ್ಲಿ ಆರಂಭವಾದ ಮಹಿಳಾ ಪರ ಚರ್ಚೆಗಳು, ಮಹಿಳಾವಾದಿ ಚಿಂತನೆಗಳನ್ನು ತೆರೆಯ ಮೇಲೆ ಬಿಂಬಿಸಲು ಪ್ರಯತ್ನಿಸಿದ್ದವು. ೧೯೫೭gಲ್ಲಿ ತೆರೆಕಂಡ ‘ಮದರ್ ಇಂಡಿಯಾ’ ಸಿನಿಮಾ ಬಹುಶ: ಸ್ರೀ ಪಾತ್ರದ ಚಿತ್ರಗಳ ಮುನ್ನುಡಿಯಾಗಿ ಗೋಚರಿಸುತ್ತದೆ. ೧೯೮೭ರ ‘ಮಿರ್ಚಿ ಮಸಾಲಾ’, ೧೯೯೪ರ ರದಲ್ಲಿ ಬಂದ ‘ಬ್ಯಾಂಡಿಟ್ ಕ್ವೀನ್’ ಇದಕ್ಕೆ ಉದಾಹರಣೆ ಆದರೆ ನಾಯಕನಟನ ಅರ್ಭಟವೇ ಮುಖ್ಯವಾಗಿದ್ದ ಜನಪ್ರೀಯ ಸಿನಿಮಾಗಳ ಮಧ್ಯೆ ಇಂತಹಾ ಸಿನಿಮಾಗಳಿಗೆ ಸ್ತಿç ಪಾತ್ರಗಳ ಚಿತ್ರಣವನ್ನು ಪುನರ್ವಿಮರ್ಶೆ ಮಾಡಲು ಸಾಧ್ಯವಾಗಲಿಲ್ಲ. ಸಿನಿಮಾ ಸಿದ್ಧ ಸೂತ್ರಗಳ ತೆಕ್ಕೆಯೊಳಗೆ ವಿಜೃಂಭಿಸುತ್ತಿತ್ತು. ಆದರೆ ಅಮದಿನ ಮಹಿಳಾ ಪ್ರಧಾನ ಚಿತ್ರಗಳಿಗೆ ಇಂದಿಗೂ ಮನ್ನಣೆ ಇದೆ ಎಂಬುದನ್ನು ಮರೆಯುವಂತಿಲ್ಲ.
ಆದರೆ ೨೧ನೇ ಶತಮಾನದ ಆರಂಭದ ತರುವಾಯ ಮಹಿಳಾ ಪ್ರಧಾನ ಚಿತ್ರಗಳ ಸಂಖ್ಯೆ ಬಹುಮಟ್ಟಿಗೆ ಅಲ್ಲದಿದ್ದರೂ ವರ್ಷಕ್ಕೊಂದು ಎನ್ನುವಂತೆ ತೆರೆಕಾಣಲು ಆರಂಭವಾಯಿತು. ಈ ಬದಲಾವಣೆ ೨೧ನೇ ಶತಮಾನದಲ್ಲಿ ಹೆಣ್ಣು ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಂಡ ಕಥೆಯ ಪ್ರತಿಬಿಂಬ ಎಂದೂ ವಿಶ್ಲೇಷಿಸಬಹುದು. ಅಸ್ತಿತ್ವ (೨೦೦೦), ಚಾಂದಿನಿ ಬಾರ್ (೨೦೦೧), ನೊ ವನ್ ಕಿಲ್ಲ್ಡ್ ಜೆಸ್ಸಿಕಾ (೨೦೧೧), ಕಹಾನಿ (೨೦೧೨), ಇಂಗ್ಲೀಷ್ ವಿಂಗ್ಲೀಷ್ (೨೦೧೨), ಕ್ವೀನ್ (೨೦೧೪), ಮರ್ದಾನಿ (೨೦೧೪). ಮೆರಿ ಕೋಮ್ (೨೦೧೪), ನೀರಜಾ (೨೦೧೬), ಪಿಂಕ್ (೨೦೧೭), ಮಾಮ್ (೨೦೧೭), ಲಿಪ್ಸ್ಟಿಕ್ ಅಂಡರ್ ಮೈ ಬುರ್ಕಾ(೨೦೧೭) ಮೊದಲಾದುವುಗಳು ಸ್ತ್ರೀಯ ಬದುಕಿನ ತಲ್ಲಣಗಳಿಗೆ, ಹೊರಾಟಗಳಿಗೆ ಹಾಗೂ ಯಶಸ್ಸಿಗೆ ಮನ್ನಣೆ ಇದೆ ಎಂಬುದಕ್ಕೆ ನಿದರ್ಶನ.
*ಬದಲಾಗುತ್ತಿರುವ ಕಥನ ಮತ್ತು ಭರವಸೆ*
ಬಹಶ: ೨೦೧೫ರ ನಂತರ ಹಿಂದಿ ಸಿನಿಮಾ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷಾ ಸಿನಿಮಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಕಾಣಬಹುದು. ಹಳೆನೀರು ನಿಧಾನವಾಗಿ ಹರಿದುಹೋಗಿ ಹೊಸನೀರು ನುಗ್ಗತ್ತಿದೆ. ಹೊಸಮುಖಗಳು ಪರಿಚಯವಾಗುತ್ತಿವೆ. ಇದೂ ಸಿನಿಮಾ ಕತೆಯಾಗಬಹುದಾ? ಎಂದು ಒಂದುಕಾಲದಲ್ಲಿ ಕೇಳಬಹುದಾಗಿದ್ದ ಕಥೆಗಳೆಲ್ಲವೂ ಸಿನಿಮಾವಾಗುತ್ತಿದೆ. ಸಣ್ಣ ಪೇಟೆಯ ಗಲ್ಲಿಯ ಹುಡುಗ ಅಥವಾ ಹುಡುಗಿಯೇ ಪಾತ್ರವೇ ಚಿತ್ರದ ನಾಯಕ/ಕಿ ಯಾಗುತ್ತಿದೆ. ‘ಕಾನ್ಸ್ಟಿಪೇಷನ್’ನಂತಹಾ ಸಾಮಾಜಿಕವಾಗಿ ಚರ್ಚೆಯಾಗದ ವಿಷಯವೊಂದು ಕಥಾ ಹಂದರವಾಗಿ ‘ಪಿಕೂ’ನಂತಹ ಸಿನಿಮಾ ಪ್ರೇಕ್ಷಕರ ಜನಮನ ಗೆಲ್ಲುತ್ತಿದೆ. ನಿಗದಿಯಾಗಿದ್ದ ಮದುವೆ ಅರ್ಧಕ್ಕೆ ಮುರಿದುಬಿದ್ದಾಗ ಹುಡುಗಿಯೊಬ್ಬಳೇ ದೇಶಸುತ್ತುವ ಹೆಣ್ಣಿನ ಕಥೆಯೊಂದನ್ನು (ಕ್ವೀನ್) ಪ್ರೇಕ್ಷಕ ಗೆಲ್ಲಿಸುತ್ತಿದ್ದಾನೆ. ಮಧ್ಯಮ ವರ್ಗದ ಕುಟುಂಬ ಅಥವಾ ಜನಸಮುದಾಯದಲ್ಲಿ ನಡೆಯುವ ಕಥೆಯನ್ನು ಜನ ಒಪ್ಪಿಕೊಳ್ಳಲಾರಂಭಿಸಿದ್ದಾರೆ. ಬಹುಶ: ಐಷಾರಾಮಿ ಮನೆಯಲ್ಲಿ ಬೆಳೆದು, ಕ್ಷಣಾರ್ಧದಲ್ಲಿ ಅನಾಯಾಸವಾಗಿ ಪ್ಯಾರೀಸ್ನಲ್ಲಿ ಡ್ಯುಯೆಟ್ ಹಾಡುವ ನಾಯಕ- ನಾಯಕಿ, ನಾಯಕನ ಒಂದೇ ಏಟಿಗೆ ಮುಕಾಡೆ ಮಲಗುವ ರೌಡಿ, ಪ್ರೀತಿಯೇ ಅಂತಿಮ ಎನ್ನುವ ಕಥೆ ತಡವಾಗಿಯಾದರೂ ನೈಜತೆಗಿಂತ ದೂರ ಎನ್ನುವುದು ಪ್ರೇಕ್ಷಕರಿಗೆ ಅರ್ಥವಾದಂತಿದೆ. ತಮ್ಮ ನಡುವೆ ನಡೆಯುವ ಸಾಮಾನ್ಯ ಘಟನೆಗಳನ್ನೇ ತೆರೆಯ ಮೇಲೆ ಕಾಣುವ ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಕಥೆಗಾರ- ನಿರ್ದೇಶಕ- ನಟ ಹೊಸಬರಾದರೂ ಭಿನ್ನ ಕಥಾನಕವನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಸಿನಿಮಾದ ಈಗಿನ ಕಾಲಘಟ್ಟ ಒಂದರ್ಥದಲ್ಲಿ ‘ಗೋಲ್ಡನ್ ಏಜ್’ . ಚಿತ್ರರಚನೆಗಾರ, ನಿರ್ದೇಶಕ, ನಾಯಕ ನಟ/ಟಿ, ಸಹಕಲಾವಿದರು, ತಾಂತ್ರಿಕ ವರ್ಗ ಎಲ್ಲರೂ ಗುರುತಿಸಲ್ಪಡುತ್ತಿದ್ದಾರೆ. ಕಲಾವಿದ, ನಿರ್ದೇಶಕ ಅಥವಾ ಕಥೆಗಾರ ತನ್ನ ಯಶಸ್ಸಿನ ಇತಿಹಾಸದ ನೆರಳಲ್ಲಿ ಮುಂದಡಿಯಿಡಲು ಈಗಿನ ಕಾಲಘಟ್ಟದಲ್ಲಿ ಸಾಧ್ಯವಿಲ್ಲ. ಪ್ರತಿಯೊಂದು ಹೊಸ ಅವಕಾಶ ಬಂದಾಗಲೂ ತನ್ನನ್ನು ತಾನು ಸಮರ್ಥ ಎನ್ನುವುದನ್ನು ಸಾಭೀತು ಮಾಡಬೇಕಾಗುತ್ತದೆ. ಕಥಾನಕವೂ ಅಷ್ಟೇ ತನ್ನಲ್ಲೊಂದು ಪ್ರೇಮಕಥೆಯಿದೆ, ಮಚ್ಚುಲಾಂಗುಗಳ ಅಬ್ಬರವಿದೆ ಎನ್ನುವ ಕಥೆಗಳ ನಡುವೆ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸಿಗೆ ಬೆಳೆದುನಿಂತ ಮಕ್ಕಳ ತಂದೆ- ತಾಯಿ ಮತ್ತೊಂದು ಕೂಸಿನ ಆಗಮನದಲ್ಲಿದ್ದಾರೆ ಎನ್ನುವ ‘ಬದಾಯಿ ಹೋ’ ಎನ್ನುವ ಕಥೆಯೇ ಮೇಲುಗೈ ಸಾಧಿಸುತ್ತದೆ.
ಒಟ್ಟಿನಲ್ಲಿ ಪ್ರೇಕ್ಷಕ ವರ್ಗ ಕಥನದಲ್ಲಿ ಏಕತಾನತೆಯನ್ನು ಬಯಸುವುದಿಲ್ಲ. ಕಾಲಸರಿದಂತೆ ಸಮಾಜವೂ ಬದಲಾಗುತ್ತದೆ ಅದರ ಜೊತೆ ಪ್ರೇಕ್ಷಕರ ಮನಸ್ಥಿತಿಯೂ ಬದಲಾಗುತ್ತದೆ. ಈ ಸೂಕ್ಷ್ಮಕ್ಮಮಗಳನ್ನು ಕತೆಗಾರನೊಬ್ಬ ಅರಿತರೆ, ವೀಕ್ಷಕರು ಒಪ್ಪುವ ಚಿತ್ರಕತೆಗಳನ್ನು ಬರೆಯಬಲ್ಲ.
ಗೀತಾವಸಂತ್, ಇಜಿಮಾನ್
(‘ಸಿನಿಚಿಂತನ’ ಪುಸ್ತಕದಲ್ಲಿ
ಪ್ರಕಟವಾದ ಲೇಖನ)